ವಿಜಯ್ ದೇವರಕೊಂಡ (Vijay Devarakonda) ಹಾಗೂ ರಶ್ಮಿಕಾ ಮಂದಣ್ಣ (Rashmika Mandanna) ನಡುವೆ ಒಳ್ಳೆಯ ಗೆಳೆತನವಿದೆ ಎಂಬುದು ಅನೇಕ ಬಾರಿ ಸಾಬೀತಾಗಿದೆ. ಇವರಿಬ್ಬರ ಸಂಬಂಧ ಗೆಳೆತನಕ್ಕೆ ಮಾತ್ರ ಸೀಮಿತವಾಗಿಲ್ಲ, ಇವರು ಕಪಲ್ಸ್ ಎಂದು ಅನೇಕರು ಮಾತನಾಡಿಕೊಂಡಿದ್ದಿದೆ. ಆದರೆ, ಈ ಜೋಡಿ ಆ ವಿಚಾರದಲ್ಲಿ ಅಷ್ಟಾಗಿ ತಲೆಕೆಡಿಸಿಕೊಂಡಿಲ್ಲ. ಅನೇಕ ಬಾರಿ ಮುಂಬೈ ಬೀದಿಗಳಲ್ಲಿ ಇವರು ಒಟ್ಟಾಗಿ ತಿರುಗಿದ್ದಿದೆ. ಆದರೆ, ಈಗ ಇವರ ವಿಚಾರದಲ್ಲಿ ಅಭಿಮಾನಿಗಳಿಗೆ ಸಣ್ಣ ಅನುಮಾನವೊಂದು ಮೂಡಿದೆ. ಫ್ಯಾನ್ಸ್ ತಲೆಗೆ ಹುಳ ಬಿಟ್ಟುಕೊಂಡಿದ್ದಾರೆ. ಇದಕ್ಕೆಲ್ಲ ಕಾರಣ, ವಿಜಯ್ ದೇವರಕೊಂಡ ಬರ್ತ್ಡೇಗೆ (Vijay Devarakonda Birthday) ರಶ್ಮಿಕಾ ವಿಶ್ ಮಾಡದೆ ಇರುವುದು.
ಮೇ 9 ವಿಜಯ್ ದೇವರಕೊಂಡ ಜನ್ಮದಿನ. ಈ ವಿಶೇಷ ದಿನದಂದು ಅವರ ಫ್ಯಾನ್ಸ್ ವಿಶ್ ಮಾಡಿದ್ದಾರೆ. ಅನೇಕ ಸೆಲೆಬ್ರಿಟಿಗಳು ಪ್ರೀತಿಯಿಂದ ಶುಭಕೋರಿದ್ದಾರೆ. ಸಮಂತಾ ಅವರು ವಿಜಯ್ ದೇವರಕೊಂಡ ಜತೆಗಿನ ಫೋಟೋ ಹಂಚಿಕೊಂಡು ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ. ಆದರೆ, ರಶ್ಮಿಕಾ ಮಂದಣ್ಣ ಕಡೆಯಿಂದ ಕೊನೆಪಕ್ಷ ಒಂದು ಸ್ಟೇಟಸ್ ಕೂಡ ಬಂದಿಲ್ಲ. ಇದು ಅಭಿಮಾನಿಗಳಲ್ಲಿ ಅನುಮಾನ ಮೂಡಿಸಿದೆ.
‘ಗೀತ ಗೋವಿಂದಂ’ ಸಿನಿಮಾ ಮೂಲಕ ವಿಜಯ್ ಹಾಗೂ ರಶ್ಮಿಕಾ ಮೊದಲ ಬಾರಿಗೆ ಒಟ್ಟಾಗಿ ನಟಿಸಿದರು. ಈ ಸಿನಿಮಾದಲ್ಲಿ ಲಿಪ್ಲಾಕ್ ದೃಶ್ಯ ಸಾಕಷ್ಟು ಚರ್ಚೆ ಹುಟ್ಟು ಹಾಕಿತ್ತು. ಈ ಸಿನಿಮಾ ತೆರೆಕಂಡ ಬಳಿಕ ಇಬ್ಬರ ನಡುವೆ ಒಳ್ಳೆಯ ಫ್ರೆಂಡ್ಶಿಪ್ ಬೆಳೆಯಿತು. ಆ ಬಳಿಕ ‘ಡಿಯರ್ ಕಾಮ್ರೇಡ್’ ಸಿನಿಮಾದಲ್ಲಿ ಇಬ್ಬರೂ ಮತ್ತೆ ಒಟ್ಟಾಗಿ ನಟಿಸಿದರು. ಈ ಸಿನಿಮಾದಲ್ಲೂ ಲಿಪ್ಲಾಕ್ ದೃಶ್ಯಗಳು ಮುಂದುವರಿದವು. ಇದಕ್ಕೆ ಕೆಲವರು ನೆಗೆಟಿವ್ ಕಮೆಂಟ್ ಮಾಡಿದರೂ ರಶ್ಮಿಕಾ ತಲೆಕೆಡಿಸಿಕೊಂಡಿರಲಿಲ್ಲ.
ರಶ್ಮಿಕಾ ಹಾಗೂ ವಿಜಯ್ ಇಬ್ಬರೂ ಬಾಲಿವುಡ್ನಲ್ಲಿ ಬ್ಯುಸಿ ಆಗಿದ್ದಾರೆ. ರಶ್ಮಿಕಾ ಅವರು ಹಿಂದಿಯಲ್ಲಿ ‘ಗುಡ್ಬೈ’ ಹಾಗೂ ‘ಮಿಷನ್ ಮಜ್ನು’ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ‘ಲೈಗರ್’ ಸಿನಿಮಾ ಮೂಲಕ ವಿಜಯ್ ಬಾಲಿವುಡ್ಗೆ ಎಂಟ್ರಿ ಕೊಡುತ್ತಿದ್ದಾರೆ. ಹೀಗಾಗಿ, ಇಬ್ಬರೂ ಮುಂಬೈನಲ್ಲಿ ಸಾಕಷ್ಟು ಸಮಯ ಕಳೆಯಬೇಕಾದ ಪರಿಸ್ಥಿತಿ ಬಂದೊದಗಿತ್ತು. ಈ ವೇಳೆ ಜಿಮ್ನಲ್ಲಿ, ಹೋಟೆಲ್ನಲ್ಲಿ ಇಬ್ಬರೂ ಒಟ್ಟಾಗಿ ಕಾಣಿಸಿಕೊಂಡಿದ್ದರು. ಇವರ ನಡುವೆ ಪ್ರೀತಿ ಇದೆ ಎನ್ನುವ ಮಾತು ಗಾಸಿಪ್ ಮಂದಿಯ ಬಾಯಿಂದ ಕೇಳಿ ಬಂದಿತ್ತು.
ಮೇ 9ರ ಬೆಳವಣಿಗೆ ಈಗ ಅನೇಕರಲ್ಲಿ ಅಚ್ಚರಿ ಮೂಡಿಸಿದೆ. ಸೋಶಿಯಲ್ ಮೀಡಿಯಾದಲ್ಲಿ ರಶ್ಮಿಕಾ ಬೇರೆ ಪೋಸ್ಟ್ಗಳನ್ನು ಹಂಚಿಕೊಂಡಿದ್ದಾರೆ. ಆದರೆ ಅವರು ವಿಶ್ ಮಾಡಿಲ್ಲ. ಇದನ್ನು ನೋಡಿ ಅನೇಕರು ಅನುಮಾನ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಈ ಜೋಡಿ ಒಟ್ಟಾಗಿ ಕಾಣಿಸಿಕೊಳ್ಳದೆ ಇರುವುದು ಇವರ ಮಧ್ಯೆ ಯಾವುದೂ ಸರಿ ಇಲ್ಲ ಎಂಬ ಅನುಮಾನವನ್ನು ಹೆಚ್ಚಿಸಿದೆ. ಈ ಬಗ್ಗೆ ರಶ್ಮಿಕಾ ಆಗಲಿ, ವಿಜಯ್ ಆಗಲಿ ಪ್ರತಿಕ್ರಿಯೆ ನೀಡಿಲ್ಲ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:37 am, Tue, 10 May 22