ರಶ್ಮಿಕಾ ಬಹು ನಿರೀಕ್ಷೆ ಇಟ್ಟಿದ್ದ ‘ದಿ ಗರ್ಲ್​​ಫ್ರೆಂಡ್’ ಕತೆ ಏನಾಯ್ತು? ಒಟಿಟಿಗೆ ಯಾವಾಗ?

Rashmika Mandanna: ರಶ್ಮಿಕಾ ಮಂದಣ್ಣ ಹೆಚ್ಚು ನಟಿಸಿರುವುದು ನಾಯಕ ಪ್ರಧಾನ ಸಿನಿಮಾಗಳಲ್ಲಿ ಮಾತ್ರ. ಅಲ್ಲಿ ಅವರಿಗೆ ಹೆಚ್ಚೇನೂ ಕೆಲಸ ಇರುತ್ತಿರಲಿಲ್ಲ. ಕೆಲ ಹಾಡು, ರೊಮ್ಯಾಂಟಿಕ್ ದೃಶ್ಯಗಳಲ್ಲಿ ನಟಿಸಿದರೆ ಸಾಕಿತ್ತು. ಆದರೆ ಅವರು ಇದೇ ಮೊದಲ ಬಾರಿಗೆ ‘ದಿ ಗರ್ಲ್​​ಫ್ರೆಂಡ್’ ಹೆಸರಿನ ಮಹಿಳಾ ಪ್ರಧಾನ ಸಿನಿಮಾನಲ್ಲಿ ನಟಿಸಿದ್ದರು. ಈ ಸಿನಿಮಾದ ಮೇಲೆ ಭಾರಿ ನಿರೀಕ್ಷೆ ರಶ್ಮಿಕಾಗೆ ಇತ್ತು. ಅಂದಹಾಗೆ ಆ ಸಿನಿಮಾದ ಕತೆ ಏನಾಯ್ತು? ಒಟಿಟಿಗೆ ಯಾವಾಗ ಬರುತ್ತದೆ?

ರಶ್ಮಿಕಾ ಬಹು ನಿರೀಕ್ಷೆ ಇಟ್ಟಿದ್ದ ‘ದಿ ಗರ್ಲ್​​ಫ್ರೆಂಡ್’ ಕತೆ ಏನಾಯ್ತು? ಒಟಿಟಿಗೆ ಯಾವಾಗ?
The Girl Friend

Updated on: Nov 25, 2025 | 1:53 PM

ರಶ್ಮಿಕಾ ಮಂದಣ್ಣ (Rashmika Mandanna) ಸ್ಟಾರ್ ಪ್ಯಾನ್ ಇಂಡಿಯಾ ನಟಿ. ಒಂದರ ಹಿಂದೊಂದರಂತೆ ಸತತ ಮೂರು 1000 ಕೋಟಿ ಗಳಿಸಿದ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ರಶ್ಮಿಕಾಗೆ ಈ ವರೆಗೆ ಕೇವಲ ಮರ ಸುತ್ತುವ ಪಾತ್ರಗಳೇ ದೊರಕಿದ್ದು ಹೆಚ್ಚು. ನಾಯಕ ಪ್ರಧಾನ ಸಿನಿಮಾಗಳಲ್ಲಿಯೇ ರಶ್ಮಿಕಾ ನಟಿಸಿದ್ದು ಹೆಚ್ಚು. ಆದರೆ ಮೊದಲ ಬಾರಿಗೆ ಮಹಿಳಾ ಪ್ರಧಾನ ಅದರಲ್ಲೂ ನಟನೆಗೆ ಹೆಚ್ಚು ಅವಕಾಶ ಇದ್ದ ಸಿನಿಮಾನಲ್ಲಿ ರಶ್ಮಿಕಾ ನಟಿಸಿದ್ದರು, ಅದುವೇ ‘ದಿ ಗರ್ಲ್​​ಫ್ರೆಂಡ್’. ಈ ಸಿನಿಮಾ ಮೇಲೆ ರಶ್ಮಿಕಾಗೆ ಭಾರಿ ನಿರೀಕ್ಷೆ ಇತ್ತು, ಸಿನಿಮಾಕ್ಕೆ ಭರ್ಜರಿ ಪ್ರಚಾರವನ್ನೂ ಸಹ ತಾವೇ ಮುಂದೆ ನಿಂತು ಮಾಡಿದರು. ಕೊನೆಗೆ ಬಾಕ್ಸ್​​ಆಫೀಸ್​​ನಲ್ಲಿ ಸಿನಿಮಾದ ಕತೆ ಏನಾಯ್ತು?

‘ದಿ ಗರ್ಲ್​ಫ್ರೆಂಡ್’ ಸಿನಿಮಾ ನವೆಂಬರ್ 7ರಂದು ಬಿಡುಗಡೆ ಆಗಿತ್ತು. ಸಿನಿಮಾ ಈ ವರೆಗೆ 30 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಆ ಮೂಲಕ ಸಿನಿಮಾ ದೊಡ್ಡ ಹಿಟ್ ಆಗಿಲ್ಲದಿದ್ದರೂ ಕೆಲವು ಜನರನ್ನಾದರೂ ತಲುಪಿದೆ ಎಂದು ಹೇಳಲು ಅಡ್ಡಿಯಿಲ್ಲ. ಮಹಿಳಾ ಪ್ರಧಾನ ಸಿನಿಮಾಳು ಅದರಲ್ಲೂ ಮಹಿಳಾಪರ ಸಂದೇಶಗಳನ್ನು ಹೊಂದಿರುವ ಸಿನಿಮಾಗಳು ಗೆದ್ದಿದ್ದು ವಿರಳ. ಆದರೆ ‘ದಿ ಗರ್ಲ್​​ಫ್ರೆಂಡ್’ 30 ಕೋಟಿ ಗಳಿಕೆ ಮಾಡಿದೆ. ದೊಡ್ಡ ಗೆಲುವಲ್ಲದಿದ್ದರೂ ಸೋಲಂತೂ ಅಲ್ಲ ಅನ್ನಬಹುದಾದ ಸ್ಥಿತಿಯಲ್ಲಿದೆ ಸಿನಿಮಾ.

‘ದಿ ಗರ್ಲ್​​ಫ್ರೆಂಡ್’ ಸಿನಿಮಾ ಅನ್ನು ಧೀರಜ್ ಮತ್ತು ವಿದ್ಯಾ ಅವರುಗಳು ನಿರ್ಮಾಣ ಮಾಡಿದ್ದು, ಸಿನಿಮಾಕ್ಕೆ ಸುಮಾರು 30 ಕೋಟಿ ಬಜೆಟ್ ಹಾಕಿದ್ದರು ಎನ್ನಲಾಗಿದೆ. ಇದೀಗ ಸಿನಿಮಾದ ಚಿತ್ರಮಂದಿರದ ಕಲೆಕ್ಷನ್​​ 30 ಕೋಟಿ ಆಗಿದ್ದು, ಇದರಲ್ಲಿ ನಿರ್ಮಾಪಕರಿಗೆ ಸುಮಾರು 50% ಹಣ ದೊರೆತಿದೆ ಎನ್ನಲಾಗುತ್ತಿದೆ. ಇನ್ನು ಸಿನಿಮಾದ ಒಟಿಟಿ ಹಕ್ಕುಗಳು, ಸ್ಯಾಟಲೈಟ್ ಹಕ್ಕುಗಳ ಮಾರಾಟದಿಂದ ತಕ್ಕ ಮಟ್ಟಿಗೆ ಒಳ್ಳೆಯ ಮೊತ್ತವೇ ನಿರ್ಮಾಪಕರಿಗೆ ತಲುಪಿದೆಯಂತೆ.

ಇದನ್ನೂ ಓದಿ:ಗೆಳತಿಯೊಟ್ಟಿಗೆ ಕೈ-ಕೈ ಹಿಡಿದು ಸುತ್ತಾಡಿದ ರಶ್ಮಿಕಾ ಮಂದಣ್ಣ

‘ದಿ ಗರ್ಲ್​ಫ್ರೆಂಡ್’ ಸಿನಿಮಾ ಡಿಸೆಂಬರ್ 11 ರಂದು ಒಟಿಟಿಗೆ ಬರಲಿದೆ. ಸಿನಿಮಾದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಒಳ್ಳೆಯ ಚರ್ಚೆ ಇದ್ದ ಕಾರಣ, ಸಿನಿಮಾದ ಡಿಜಿಟಲ್ ಹಕ್ಕುಗಳು ಒಳ್ಳೆಯ ಮೊತ್ತಕ್ಕೆ ಮಾರಾಟವಾಗಿವೆ. ಸಿನಿಮಾದ ಒಟಿಟಿ ಹಕ್ಕುಗಳಿಗೆ 15 ಕೋಟಿ ರೂಪಾಯಿಯನ್ನು ನೀಡಲಾಗಿದೆ ಎನ್ನಲಾಗುತ್ತಿದೆ. ಟಿವಿ ಹಕ್ಕುಗಳಿಗೂ ಸಹ ಒಳ್ಳೆಯ ಮೊತ್ತವೇ ದೊರೆತಿದೆ. ಒಟ್ಟಿನಲ್ಲಿ ರಶ್ಮಿಕಾ ಮೊದಲ ಬಾರಿಗೆ ಪ್ರಯೋಗವೊಂದನ್ನು ಮಾಡಿದ್ದರು, ಅದರಲ್ಲಿ ಸಣ್ಣ ಯಶಸ್ಸನ್ನಂತೂ ಗಳಿಸಿದ್ದಾರೆ.

ಇದೀಗ ರಶ್ಮಿಕಾ ಬೇರೆ ಸಿನಿಮಾಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ವಿಜಯ್ ದೇವರಕೊಂಡ ಜೊತೆಗೆ ‘ಗೀತ ಗೋವಿಂದಂ 2’, ಕಾರ್ತಿಕ್ ಆರ್ಯನ್-ಕೃತಿ ಸೆನನ್ ನಟಿಸುತ್ತಿರುವ ‘ಕಾಕ್​​ಟೇಲ್ 2’, ಟೈಗರ್ ಶ್ರಾಫ್ ಜೊತೆಗೆ ಹೊಸ ಸಿನಿಮಾ, ‘ಮೈಸಾ’ ಹೆಸರಿನ ಮತ್ತೊಂದು ಮಹಿಳಾ ಪ್ರಧಾನ ಸಿನಿಮಾ. ‘ಹಾಂಟೆಡ್, ವೂಂಡೆಡ್, ಬ್ರೋಕನ್’ ಹೆಸರಿನ ಆಕ್ಷನ್ ಸಿನಿಮಾ. ತಮಿಳಿನಲ್ಲಿ ಅಜಿತ್ ಅವರ ಜೊತೆಗೆ ಸಿನಿಮಾ, ‘ಪುಷ್ಪ 3’ ಇನ್ನೂ ಕೆಲ ಸಿನಿಮಾಗಳು ಅವರ ಕೈಯಲ್ಲಿವೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ