3 ಗಂಟೆಗಳ ಕಾಲ ಹೇಳಿಕೆ ದಾಖಲಿಸಿದ ಮಾಫಿ ಸಾಕ್ಷಿ ಪ್ರದೋಷ್; ಸೆ.29ಕ್ಕೆ ವಿಚಾರಣೆ ಮುಂದೂಡಿಕೆ

ರೇಣುಕಾಸ್ವಾಮಿ ಕೊಲೆ ಪ್ರಕರಣದ ಮಾಫಿ ಸಾಕ್ಷಿಯಾಗಿರುವ ಪ್ರದೋಷ್ ರಾವ್ ವಿಚಾರಣೆಯನ್ನು ಸೆಪ್ಟೆಂಬರ್ 29ಕ್ಕೆ ಮುಂದೂಡಲಾಗಿದೆ. ಇಂದು (ಸೆ.28) ಬೆಂಗಳೂರಿನ 59ನೇ ಸಿಸಿಹೆಚ್‌ ಕೋರ್ಟ್​ನಲ್ಲಿ ತಮ್ಮ ಹೇಳಿಕೆ ದಾಖಲಿಸಿದ ಬಳಿಕ ಪ್ರದೋಷ್ ಅವರನ್ನು ಪೊಲೀಸ್ ಭದ್ರತೆಯೊಂದಿಗೆ ಪರಪ್ಪನ ಅಗ್ರಹಾರ ಜೈಲಿಗೆ ವಾಪಸ್ ಕರೆದೊಯ್ಯಲಾಗಿದೆ.

3 ಗಂಟೆಗಳ ಕಾಲ ಹೇಳಿಕೆ ದಾಖಲಿಸಿದ ಮಾಫಿ ಸಾಕ್ಷಿ ಪ್ರದೋಷ್; ಸೆ.29ಕ್ಕೆ ವಿಚಾರಣೆ ಮುಂದೂಡಿಕೆ
Pradosh Rao, Darshan
Edited By:

Updated on: Sep 28, 2026 | 5:52 PM

ಸ್ಯಾಂಡಲ್‌ವುಡ್ ನಟ ದರ್ಶನ್ ಹಾಗೂ ಗ್ಯಾಂಗ್‌ನಿಂದ ನಡೆದ ರೇಣುಕಾಸ್ವಾಮಿ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಮಾಫಿ ಸಾಕ್ಷಿಯಾಗಿ ಬದಲಾಗಿರುವ ಎ14 ಆರೋಪಿ ಪ್ರದೋಷ್ ಸಾಕ್ಷ್ಯ ವಿಚಾರಣೆಯನ್ನು ಬೆಂಗಳೂರಿನ 59ನೇ ಸಿಸಿಹೆಚ್‌ ಕೋರ್ಟ್ ನಾಳೆಗೆ (ಸೆಪ್ಟೆಂಬರ್ 29) ಮುಂದೂಡಿದೆ. ಇಂದು (ಸೆ.28) ನ್ಯಾಯಾಲಯದ ಮುಂದೆ ಹಾಜರಾಗಿದ್ದ ಪ್ರದೋಷ್ ರಾವ್ ಅವರು ಸತತ 3 ಗಂಟೆಗಳ ಕಾಲ ಮಹತ್ವದ ಹೇಳಿಕೆಯನ್ನು ದಾಖಲಿಸಿದ್ದಾರೆ.

ಪ್ರದೋಷ್ ನೀಡಿದ ಸುದೀರ್ಘ ಹೇಳಿಕೆಯನ್ನು ಪ್ರಿಂಟ್ ಔಟ್ ತೆಗೆದು, ಅವರ ಸಹಿ ಪಡೆಯಬೇಕಿರುವ ಹಿನ್ನೆಲೆಯಲ್ಲಿ ಹಾಗೂ ಎಸ್‌ಪಿಪಿ ಅವರ ಮನವಿ ಮೇರೆಗೆ ನ್ಯಾಯಾಧೀಶರು ವಿಚಾರಣೆಯನ್ನು ನಾಳೆಗೆ ಮುಂದೂಡಿದರು. ವಿಚಾರಣೆ ಮುಗಿದ ಬಳಿಕ ಪೊಲೀಸರು ಪ್ರದೋಷ್‌ನನ್ನು ಮರಳಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕರೆದೊಯ್ದಿದ್ದಾರೆ.

ಇನ್ನೊಂದೆಡೆ, ಪ್ರದೋಷ್ ಮಾಫಿ ಸಾಕ್ಷಿಯಾಗುವುದಕ್ಕೆ ತಡೆಯಾಜ್ಞೆ ತರಲು ದರ್ಶನ್ ಪರವಾಗಿ ಹಿರಿಯ ವಕೀಲ ಹಷ್ಮತ್ ಪಾಷಾ ಸುಪ್ರೀಂ ಕೋರ್ಟ್‌ನಲ್ಲಿ ವಿಶೇಷ ರಜಾ ಅರ್ಜಿ ಸಲ್ಲಿಸಿದ್ದಾರೆ. ಈ ಕುರಿತು ಮಾಹಿತಿ ನೀಡಿದ ವಕೀಲ ಹಷ್ಮತ್ ಪಾಷಾ, ‘ಪ್ರದೋಷ್ ಮಾಫಿ ಸಾಕ್ಷಿ ಆಗುವುದನ್ನು ಪ್ರಶ್ನಿಸಿ ನಾವು ವಿಚಾರಣಾ ನ್ಯಾಯಾಲಯದ ಮೊರೆ ಹೋಗಿದ್ದೆವು. ಆದರೆ ವಿಚಾರಣಾ ನ್ಯಾಯಾಲಯ ನಮ್ಮ ಮನವಿಯನ್ನು ಪುರಸ್ಕರಿಸದ ಕಾರಣ ನಾವು ಸುಪ್ರೀಂ ಕೋರ್ಟ್‌ನಲ್ಲಿ ಎಸ್‌ಎಲ್‌ಪಿ ಸಲ್ಲಿಕೆ ಮಾಡಿದ್ದೇವೆ’ ಎಂದು ತಿಳಿಸಿದರು.

ಇದನ್ನೂ ಓದಿ: ದರ್ಶನ್‌ಗೆ ಶಾಕ್ ಮೇಲೆ ಶಾಕ್; ಸಾಧ್ಯವಾಗಲೇ ಇಲ್ಲ ಪ್ರದೋಷ್ ಮಾಫಿ ಸಾಕ್ಷಿ ವಿಚಾರಣೆ ತಡೆ

‘ಸುಪ್ರೀಂ ಕೋರ್ಟ್‌ನಿಂದ ಒಂದು ವೇಳೆ ಆದೇಶ ಬಂದಲ್ಲಿ, ಅದು ಪ್ರಸ್ತುತ ನಡೆಯುತ್ತಿರುವ ವಿಚಾರಣೆಯ ಮೇಲೆ ನೇರ ಪರಿಣಾಮ ಬೀರಲಿದೆ. ಇಂದು ಅರ್ಧ ಭಾಗದ ಸಾಕ್ಷಿ ವಿಚಾರಣೆ ನಡೆದಿದ್ದು, ನಾಳೆ ಉಳಿದ ಪ್ರಕ್ರಿಯೆ ನಡೆಯಲಿದೆ. ದರ್ಶನ್ ಕೋರ್ಟ್‌ಗೆ ಹಾಜರಿದ್ದು ಪ್ರಶ್ನಿಸಬಹುದು ಎಂದು ಹೈಕೋರ್ಟ್ ಆದೇಶವಿದೆ. ಮುಂದಿನ ದಿನಗಳಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನಮ್ಮ ಪರವಾಗಿ ಬಂದರೆ, ಈ ಸಾಕ್ಷಿ ವಿಚಾರಣೆಯ ಪ್ರಕ್ರಿಯೆಗಳ ಮೇಲೆ ಪರಿಣಾಮ ಬೀರಲಿದೆ’ ಎಂದು ಹಷ್ಮತ್ ಪಾಷಾ ಹೇಳಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಮೇಶ್​ ಎಮ್​.

ರಮೇಶ್​ ಎಂ ವಿಶೇಷ ವರದಿಗಾರರಾಗಿದ್ದಾರೆ, ಮೂಲತಃ ಕಾನೂನು ಪದವೀಧರನಾಗಿದ್ದು ಕಳೆದ 18 ವರ್ಷಗಳಿಂದ ಟಿವಿ9 ಸುದ್ದಿ ವಾಹಿನಿಯಲ್ಲಿ ಕಾನೂನು ಸಂಬಂಧಿತ ವರದಿ ನೀಡುತ್ತಿದ್ದಾರೆ. ಹೈಕೋರ್ಟ್, ಸುಪ್ರೀಂ ಕೋರ್ಟ್ ಹಾಗೂ ವಿಚಾರಣಾ ನ್ಯಾಯಾಲಯಗಳ ಪ್ರಮುಖ ಪ್ರಕರಣಗಳ ವರದಿಗಾರಿಕೆ ಮಾಡುತ್ತಿದ್ದು, ಬೆಂಗಳೂರಿನ ನಿವಾಸಿಯಾಗಿದ್ದಾರೆ.

Read More
Loading...
Unable to load recommendations.
Follow Us