‘ಆರ್​ಆರ್​ಆರ್​’ ನಿರ್ಮಾಪಕನ ಖಾತೆಯಿಂದ ಪ್ರಭಾಸ್​ಗೆ ವರ್ಗಾವಣೆ ಆಯ್ತು 50 ಕೋಟಿ ರೂಪಾಯಿ?  

| Updated By: ರಾಜೇಶ್ ದುಗ್ಗುಮನೆ

Updated on: Jan 25, 2022 | 10:44 AM

ಪ್ರಭಾಸ್ ನಟನೆಯ ‘ಬಾಹುಬಲಿ’ ಮೊದಲ ಭಾಗಕ್ಕೆ ಬರೋಬ್ಬರಿ 180 ಕೋಟಿ ರೂಪಾಯಿ ವೆಚ್ಛ ಮಾಡಲಾಗಿತ್ತು. ಬಾಹುಬಲಿ ಎರಡನೇ ಭಾಗಕ್ಕೆ 250 ಕೋಟಿ ರೂಪಾಯಿ ವೆಚ್ಛ ತಗುಲಿತ್ತು. ಈ ಸಿನಿಮಾಗಳಿಗೆ ಪ್ರಭಾಸ್​ ದೊಡ್ಡ ಸಂಭಾವನೆ ಪಡೆದಿದ್ದರು.

‘ಆರ್​ಆರ್​ಆರ್​’ ನಿರ್ಮಾಪಕನ ಖಾತೆಯಿಂದ ಪ್ರಭಾಸ್​ಗೆ ವರ್ಗಾವಣೆ ಆಯ್ತು 50 ಕೋಟಿ ರೂಪಾಯಿ?  
ದಾನಯ್ಯ- ಪ್ರಭಾಸ್​
Follow us on

ನಟ ಪ್ರಭಾಸ್​ಗೆ (Prabhas)  ಭಾರೀ ಬೇಡಿಕೆ ಇದೆ. ‘ಬಾಹುಬಲಿ’ ಬಳಿಕ ಅವರು ಪ್ಯಾನ್​ ಇಂಡಿಯಾ ಸ್ಟಾರ್​ ಆಗಿದ್ದಾರೆ. ಬಿಗ್​ ಬಜೆಟ್​ ಚಿತ್ರಗಳು ಅವರನ್ನು ಹುಡುಕಿಕೊಂಡು ಬರುತ್ತಿವೆ. ‘ಬಾಹುಬಲಿ’ ಬಳಿಕ ತೆರೆಕಂಡ ‘ಸಾಹೋ’ ಚಿತ್ರ ಹೀನಾಯವಾಗಿ ಸೋತಿತ್ತು. ಆದರೆ, ಅದು ಪ್ರಭಾಸ್​ ವೃತ್ತಿ ಜೀವನದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಅವರ ಕೈಯಲ್ಲಿ ದೊಡ್ಡ ಬಜೆಟ್​ನ ಮೂರು ಚಿತ್ರಗಳಿವೆ. ಈಗ ಪ್ರಭಾಸ್​ ಬಗ್ಗೆ ಹೊಸ ಅಪ್​ಡೇಟ್​ ಒಂದು ಕೇಳಿ ಬಂದಿದೆ. ‘ಆರ್​ಆರ್​ಆರ್​’ ನಿರ್ಮಾಪಕ ಡಿವಿವಿ ದಾನಯ್ಯ (DVV Danayya)ಅವರ ಖಾತೆಯಿಂದ ಪ್ರಭಾಸ್​ಗೆ 50 ಕೋಟಿ ರೂಪಾಯಿ ವರ್ಗಾವಣೆ ಆಗಿದೆ ಎನ್ನುವ ಮಾತಿದೆ. ಈ ಬೆನ್ನಲ್ಲೇ ಅವರ ಹೊಸ ಸಿನಿಮಾ ಬಗ್ಗೆ ಚರ್ಚೆ ಶುರುವಾಗಿದೆ. ಈ ಸಿನಿಮಾ ಯಾವಾಗ ಸೆಟ್ಟೇರಲಿದೆ ಎನ್ನುವ ಕುತೂಹಲ ಮೂಡಿದೆ.

ಪ್ರಭಾಸ್ ನಟನೆಯ ‘ಬಾಹುಬಲಿ’ ಮೊದಲ ಭಾಗಕ್ಕೆ ಬರೋಬ್ಬರಿ 180 ಕೋಟಿ ರೂಪಾಯಿ ವೆಚ್ಛ ಮಾಡಲಾಗಿತ್ತು. ಬಾಹುಬಲಿ ಎರಡನೇ ಭಾಗಕ್ಕೆ 250 ಕೋಟಿ ರೂಪಾಯಿ ವೆಚ್ಛ ತಗುಲಿತ್ತು. ಈ ಸಿನಿಮಾಗಳಿಗೆ ಪ್ರಭಾಸ್​ ದೊಡ್ಡ ಸಂಭಾವನೆ ಪಡೆದಿದ್ದರು. ಆ ಬಳಿಕ ಅವರ ಮಾರುಕಟ್ಟೆ ವ್ಯಾಲ್ಯೂ ಹೆಚ್ಚಾಯಿತು. ಈಗ ‘ಆರ್​ಆರ್​ಆರ್​’ ಸಿನಿಮಾ ನಿರ್ಮಾಪಕ ಡಿವಿವಿ ದಾನಯ್ಯ ದೊಡ್ಡ ಸ್ಟಾರ್​ಗಳ ಜತೆಗೆ ದೊಡ್ಡ ಬಜೆಟ್​ನ ಚಿತ್ರ ಮಾಡೋಕೆ ಉತ್ಸುಕರಾಗಿದ್ದಾರೆ. ಈಗ ಅವರು ಪ್ರಭಾಸ್​ ಕಾಲ್​ಶೀಟ್​ ಪಡೆಯಲು 50 ಕೋಟಿ ರೂಪಾಯಿ ಅಡ್ವಾನ್ಸ್ ನೀಡಿದ್ದಾರೆ ಎನ್ನಲಾಗುತ್ತಿದೆ.

ಪ್ರಭಾಸ್​ ನಟನೆಯ ‘ರಾಧೆ ಶ್ಯಾಮ್​’ ಸಿನಿಮಾ ಸಂಕ್ರಾಂತಿ ಪ್ರಯುಕ್ತ ಜನವರಿ 14ರಂದು ತೆರೆಗೆ ಬರಬೇಕಿತ್ತು. ಆದರೆ, ಸಿನಿಮಾ ರಿಲೀಸ್​ ದಿನಾಂಕ ಮುಂದೂಡಲ್ಪಟ್ಟಿದೆ. ಈ ಚಿತ್ರವಲ್ಲದೇ ಪ್ರಶಾಂತ್ ನೀಲ್ ನಿರ್ದೇಶನದ ‘ಸಲಾರ್​’ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ‘ಆದಿಪುರುಷ್’ ಚಿತ್ರದ ಕೆಲಸಗಳೂ ನಡೆಯುತ್ತಿವೆ. ಇವುಗಳ ಕೆಲಸಗಳು ಪೂರ್ಣಗೊಳ್ಳಲು ಇನ್ನೂ ಸಾಕಷ್ಟು ಸಮಯಬೇಕು. ಅದಕ್ಕೂ ಮೊದಲೇ ದಾನಯ್ಯ ಅವರು ಪ್ರಭಾಸ್ ಖಾತೆಗೆ ಅಡ್ವಾನ್ಸ್​ ವರ್ಗಾವಣೆ ಮಾಡಿದ್ದಾರೆ ಎಂದು ವರದಿ ಆಗಿದೆ.

ಪ್ರಭಾಸ್​ಗೆ 50 ಕೋಟಿ ರೂಪಾಯಿ ಅಡ್ವಾನ್ಸ್​ ವರ್ಗಾವಣೆ ಮಾಡಿದ್ದಾರೆ ಎಂದಾದರೆ ಅವರ ಸಂಭಾವನೆ ಎಷ್ಟಿರಬಹುದು? ಈ ಚಿತ್ರದ ಬಜೆಟ್​ ಎಷ್ಟಾಗಬಹುದು? ಇದನ್ನು ಯಾರು ನಿರ್ದೇಶನ ಮಾಡುತ್ತಾರೆ ಎಂಬಿತ್ಯಾದಿ ವಿಚಾರಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ಸದ್ಯಕ್ಕಂತೂ ಘೋಷಣೆ ಆಗುವುದು ಅನುಮಾನ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.

ದೇಶದಲ್ಲಿ ಅನಿಶ್ಚಿತತೆ ಮುಂದುವರಿದಿದೆ. ಕೊವಿಡ್​ ಅತಿಯಾಗಿ ಹೆಚ್ಚುತ್ತಿದೆಯಾದರೂ ಸಾವಿನ ಸಂಖ್ಯೆಯಲ್ಲಿ ಏರಿಕೆ ಕಂಡಿಲ್ಲ. ಹೀಗಾಗಿ, ಜನರು ಕೊರೊನಾ ಜತೆಯೇ ಜೀವಿಸುವುದನ್ನು ಕಲಿಯುತ್ತಿದ್ದಾರೆ. ಹೀಗಾಗಿ, ಮುಂದಿನ ಕೆಲವೇ ತಿಂಗಳಲ್ಲಿ ಪರಿಸ್ಥಿತಿ ಸಮಸ್ಥಿತಿಗೆ ಬರಬಹುದು ಎನ್ನುವ ನಿರೀಕ್ಷೆ ಎಲ್ಲರಲ್ಲಿಯೂ ಇದೆ. ಈ ಕಾರಣಕ್ಕೆ ದಾನಯ್ಯ ನಿರ್ಮಾಣದ ‘ಆರ್​ಆರ್​ಆರ್​’ ಚಿತ್ರ ತಂಡ ಹೊಸ ರಿಲೀಸ್​ ದಿನಾಂಕ ಘೋಷಣೆ ಮಾಡಿದೆ. ‘ಆರ್​ಆರ್​ಆರ್​’ ತಂಡ ಮಾರ್ಚ್ 18ರಂದು ಸಿನಿಮಾ ರಿಲೀಸ್​ ಮಾಡಲು ನಿರ್ಧರಿಸಿದೆ. ಒಂದೊಮ್ಮೆ ಆ ದಿನಾಂಕದ ಒಳಗೆ ಪರಿಸ್ಥಿತಿ ಸಮಸ್ಥಿತಿಗೆ ಬರದಿದ್ದರೆ ಏಪ್ರಿಲ್​ 28ರಂದು ಚಿತ್ರ ರಿಲೀಸ್​ ಆಗಲಿದೆ. ‘ಆರ್​ಆರ್​ಆರ್​’ ತಂಡದಲ್ಲಿ ರಿಲೀಸ್ ದಿನಾಂಕದ ಬಗ್ಗೆ ಇನ್ನೂ ಗೊಂದಲ ಇದೆ. ಮಾರ್ಚ್​ ವೇಳೆಗೆ ಪರಿಸ್ಥಿತಿ ಸಮಸ್ಥಿತಿಗೆ ಬರಲಿ ಎಂದು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.

ಇದನ್ನೂ ಓದಿ: ‘ಆರ್​ಆರ್​ಆರ್​’ ಹೊಸ ರಿಲೀಸ್​ ದಿನಾಂಕ ಘೋಷಣೆ; ಆದರೂ ಮುಗಿಯಲಿಲ್ಲ ಗೊಂದಲ

ಪುನೀತ್​ ನಟನೆಯ ‘ಜೇಮ್ಸ್​’ ಎದುರು ‘ಆರ್​ಆರ್​ಆರ್​’ ರಿಲೀಸ್​? ರಾಜಮೌಳಿಗೆ ಧರ್ಮಸಂಕಟ

Published On - 9:53 am, Tue, 25 January 22