Kannada News Entertainment RRR Movie: Jr NTR and Ram Charan starrer RRR movie gets grand opening in Karnataka
ಕರುನಾಡಿನಲ್ಲಿ ಮಧ್ಯರಾತ್ರಿಯಿಂದಲೇ ಅಬ್ಬರಿಸಿದ ‘RRR’; ಎಲ್ಲೆಲ್ಲಿ ಏನೇನಾಯ್ತು? ಇಲ್ಲಿದೆ ಪೂರ್ತಿ ವಿವರ..
RRR Movie: ಎಲ್ಲ ಕಡೆಗಳಲ್ಲೂ ಆರ್ಆರ್ಆರ್ ಸಿನಿಮಾ ಅಬ್ಬರ ಜೋರಾಗಿದೆ. ಕರ್ನಾಟಕದ ಪ್ರತಿ ಜಿಲ್ಲೆಯಲ್ಲೂ ಈ ಸಿನಿಮಾ ನೋಡಲು ರಾಮ್ ಚರಣ್ ಮತ್ತು ಜ್ಯೂ. ಎನ್‌ಟಿಆರ್ ಫ್ಯಾನ್ಸ್ ಮುಗಿಬೀಳುತ್ತಿದ್ದಾರೆ.
ಆರ್ಆರ್ಆರ್
Follow us on
ಬಹುನಿರೀಕ್ಷಿತ ‘ಆರ್ಆರ್ಆರ್’ ಸಿನಿಮಾ (RRR Movie) ತೆರೆಕಂಡಿದೆ. ಮಾ.24ರ ರಾತ್ರಿ ಹಾಗೂ ಮಾ.25 ನಸುಕಿನಲ್ಲೇ ಹಲವೆಡೆ ಈ ಸಿನಿಮಾದ ಪ್ರದರ್ಶನ ಆರಂಭಗೊಂಡಿದೆ. ಇದು ತೆಲುಗು ಸಿನಿಮಾ ಆಗಿದ್ದರೂ ಕೂಡ ಕರ್ನಾಟಕದಲ್ಲಿ ಜನರು ಈ ಚಿತ್ರವನ್ನು ಹುಚ್ಚೆದ್ದು ನೋಡುತ್ತಿದ್ದಾರೆ. ರಾಜಮೌಳಿ ನಿರ್ದೇಶನದ ಸಿನಿಮಾ ಆದ್ದರಿಂದ ನಿರೀಕ್ಷೆಯ ಮಟ್ಟ ಜೋರಾಗಿಯೇ ಇದೆ. ಅದಕ್ಕೆ ತಕ್ಕಂತೆಯೇ ಕರ್ನಾಟಕದ ಎಲ್ಲ ಕಡೆಗಳಲ್ಲಿ ‘ಆರ್ಆರ್ಆರ್’ ಸಿನಿಮಾಗೆ ಭರ್ಜರಿ ಓಪನಿಂಗ್ ಸಿಂಗ್. ಈ ಸಿನಿಮಾದಲ್ಲಿ ಟಾಲಿವುಡ್ ಸ್ಟಾರ್ ಕಲಾವಿದರಾದ ರಾಮ್ ಚರಣ್ ಮತ್ತು ಜ್ಯೂ. ಎನ್‌ಟಿಆರ್ (Jr NTR) ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಬಾಲಿವುಡ್ ಕಲಾವಿದರಾದ ಅಜಯ್ ದೇವಗನ್, ಆಲಿಯಾ ಭಟ್ ಕೂಡ ಕಥೆಗೆ ಟ್ವಿಸ್ಟ್ ನೀಡುವಂತಹ ಪಾತ್ರಗಳಲ್ಲಿ ಗಮನಾರ್ಹ ಅಭಿನಯ ನೀಡಿದ್ದಾರೆ. ಎಂದಿನಂತೆ ನಿರ್ದೇಶಕ ರಾಜಮೌಳಿ (SS Rajamouli) ಅವರು ಒಂದು ದೃಶ್ಯವೈಭವವನ್ನು ಪ್ರೇಕ್ಷಕರಿಗಾಗಿ ಕಟ್ಟಿಕೊಟ್ಟಿದ್ದಾರೆ. ಎಂಎಂ ಕೀರವಾಣಿ ಅವರ ಸಂಗೀತ ಈ ಚಿತ್ರಕ್ಕಿದೆ. ಭಾರಿ ಉತ್ಸಾಹದಿಂದ ಜನರು ಚಿತ್ರಮಂದಿರಕ್ಕೆ ಹೆಚ್ಚು ಹಾಕುತ್ತಿದ್ದಾರೆ. ಸಿನಿಪ್ರಿಯರ ಸಂಭ್ರಮ ಜೋರಾಗಿದೆ. ಟಿಕೆಟ್ ಬೆಲೆ ಗಗನಕ್ಕೆ ಏರಿದ್ದರೂ ಕೂಡ ಜನರು ಮುಗಿಬಿದ್ದು ‘ಆರ್ಆರ್ಆರ್’ ಸಿನಿಮಾ ನೋಡುತ್ತಿದ್ದಾರೆ. ಒಟ್ಟಾರೆ ಕರ್ನಾಟಕದಲ್ಲಿ ಈ ಚಿತ್ರಕ್ಕೆ ಜನರು ಯಾರ ರೀತಿ ಪ್ರತಿಕ್ರಿಯೆ ನೀಡುತ್ತಿದ್ದಾರೆ? ಆ ಬಗ್ಗೆ ಪೂರ್ಣ ಮಾಹಿತಿ ಇಲ್ಲಿದೆ..
ಬೆಂಗಳೂರಿನ ಮಡಿವಾಳದ ಸಂಧ್ಯಾ ಥಿಯೇಟರ್ನಲ್ಲಿ ಮಧ್ಯರಾತ್ರಿ 12 ಗಂಟೆಯಿಂದಲೇ ಮೊದಲ ಶೋ ಆರಂಭ ಆಯಿತು. ಅವಧಿಗೂ ಮುನ್ನವೇ ಜನರು ಬಂದು ಚಿತ್ರಮಂದಿರದ ಮುಂದೆ ಜಮಾಯಿಸಿದ್ದರು. 600 ಸೀಟ್ಗಳಿರುವ ಈ ಚಿತ್ರಮಂದಿರದ ಎಲ್ಲ ಟಿಕೆಟ್ಗಳು ಸೋಲ್ಡ್ ಔಟ್ ಆಗಿದ್ದವು. ಮುಂಜಾನೆ 8 ಗಂಟೆಯಿಂದ ಮತ್ತೆ ಪ್ರದರ್ಶಗಳು ಆರಂಭ ಆಗಿವೆ.
RRR ಚಿತ್ರ ನೋಡಲು ಬಳ್ಳಾರಿಯ ‘ರಾಧಿಕಾ’ ಚಿತ್ರಮಂದಿರದಲ್ಲಿ ಪೇಕ್ಷಕರ ನೂಕುನುಗ್ಗಲು ಉಂಟಾಯಿತು. ಮಧ್ಯರಾತ್ರಿ 12:45ಕ್ಕೆ ಮೊದಲ ಶೋ ಆರಂಭ ಆಯಿತು. ಪೇಕ್ಷಕರನ್ನ ನಿಭಾಯಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಪೇಕ್ಷಕರನ್ನ ನಿಭಾಯಿಸಲು ಪೊಲೀಸರಿಂದ ಲಘು ಲಾಠಿ ಪ್ರಹಾರ ಕೂಡ ನಡೆಯಿತು. ಪೇಕ್ಷಕರಿಂದ ಗೇಟ್ ಮುಂದೆ ಗಲಾಟೆ, ಕೂಗಾಟ ತಳ್ಳಾಟಕ್ಕೆ ಚಿತ್ರಮಂದಿರದ ಸಿಬ್ಬಂದಿ ಹಾಗೂ ಪೊಲೀಸರು ಸುಸ್ತಾದರು.
ಚಿಕ್ಕಬಳ್ಳಾಪುರ ನಗರದ ಬಾಲಾಜಿ ಚಿತ್ರಮಂದಿರದಲ್ಲಿ ಫ್ಯಾನ್ ಶೋ ಆಯೋಜಿಸಲಾಯಿತು. ಇಂದು ಬೆಳಿಗ್ಗೆ 5 ಗಂಟೆಗೆ ಶೋ ಆರಂಭವಾಯಿತು. ಸಿನಿಮಾ ನೋಡಲು ಅಭಿಮಾನಿಗಳು ರಾತ್ರಿಯಿಡಿ ಕಾದು ಕುಳಿತಿದ್ದರು. ಚಿತ್ರಮಂದಿರದ ಬಳಿ ಪಟಾಕಿ ಹೊಡೆದು, ಘೋಷಣೆ ಕೂಗಿ ಸಂಭ್ರಮಾಚರಣೆ ಮಾಡಿದರು.
ಚಿತ್ರಮಂದಿರಗಳ ಹೊರಗೆ ಅಭಿಮಾನಿಗಳು ಹಲವು ಬಗೆಯಲ್ಲಿ ಸಂಭ್ರಮಿಸುತ್ತಿದ್ದಾರೆ. ಬೆಂಗಳೂರಿನ ಭೂಮಿಕಾ ಚಿತ್ರಮಂದಿರದ ಎದುರು ತೆಂಗಿನಕಾಯಿ ಒಡೆದು, ಪಟಾಕಿ ಸಿಡಿಸುವ ಮೂಲಕ ಅಭಿಮಾನಿಗಳು ‘ಆರ್ಆರ್ಆರ್’ ಸಿನಿಮಾವನ್ನು ಅದ್ದೂರಿಯಾಗಿ ಬರಮಾಡಿಕೊಂಡಿದ್ದಾರೆ. ಇಲ್ಲಿಯೂ ಸಹ ಮಧ್ಯರಾತ್ರಿ 12 ಗಂಟೆಯಿಂದಲೇ ಶೋ ಆರಂಭಗೊಂಡಿತು.
ಕೋಲಾರ ಜಿಲ್ಲೆಯಲ್ಲೂ ಆರ್ಆರ್ಆರ್ ಸಿನಿಮಾದ ಹವಾ ಜೋರಾಗಿದೆ. ಜಿಲ್ಲೆಯ ಒಟ್ಟು 10 ಚಿತ್ರಮಂದಿರಗಳಲ್ಲಿ ಈ ಸಿನಿಮಾ ಪ್ರದರ್ಶನ ಕಾಣುತ್ತಿದೆ. ಕೋಲಾರ ನಗರದ ನಾರಾಯಣಿ ಚಿತ್ರಮಂದಿರದಲ್ಲಿ ಮೊದಲ ಪ್ಯಾನ್ ಶೋ ಆರಂಭ ಆಗಿದೆ. ಚಿತ್ರಮಂದಿರದ ಎದುರು ಹಾಕಲಾಗಿರುವ ಜೂ. ಎನ್‌ಟಿಆರ್ ಹಾಗೂ ರಾಮ್ ಚರಣ್ ಕಟೌಟ್ಗಳು ರಾರಾಜಿಸುತ್ತಿವೆ.
ಚಿತ್ರದುರ್ಗದ 2 ಥಿಯೇಟರ್ಗಳಲ್ಲಿ ‘ಆರ್ಆರ್ಆರ್’ ಚಿತ್ರ ರಿಲೀಸ್ ಆಗಿದೆ. ವೆಂಕಟೇಶ್ವರ ಮತ್ತು ಪ್ರಸನ್ನ ಚಿತ್ರಮಂದಿರದಲ್ಲಿ ಸಿನಿಮಾ ಪ್ರದರ್ಶನ ಆಗುತ್ತಿದೆ. ಪ್ರತಿ ದಿನ ನಾಲ್ಕು ಶೋ ನಡೆಯಲಿದೆ. ಸಿನಿಮಾ ನೋಡಲು ಜನರು ಮುಗಿಬಿದ್ದಿದ್ದಾರೆ.
ಹುಬ್ಬಳ್ಳಿಯಲ್ಲೂ ಕೂಡ ಜನರು ಆರ್ಆರ್ಆರ್ ಸಿನಿಮಾಗೆ ಭರ್ಜರಿ ಸ್ವಾಗತ ನೀಡಿದ್ದಾರೆ. ಹುಬ್ಬಳಿಯಲ್ಲಿ ಎರಡು ಸಿಂಗಲ್ಸ್ಕ್ರೀನ್ ಚಿತ್ರಮಂದಿರ ಮತ್ತು ಮಲ್ಟಿಪ್ಲೆಕ್ಸ್ ಸೇರಿ ಒಂದೇ ದಿನ 30 ಶೋ ನಡೆಯುತ್ತಿದೆ. ಸುಧಾ ಮತ್ತು ಶೃಂಗಾರ ಥಿಯೇಟರ್, ಪಿವಿಆರ್ ಹಾಗೂ ಅರ್ಬನ್ ಒಯಾಸಿಸ್ ಮಾಲ್ನಲ್ಲಿ ‘ಆರ್ಆರ್ಆರ್’ ಅಬ್ಬರಿಸುತ್ತಿದೆ.
ಬಾಗಲಕೋಟೆ ಜಿಲ್ಲೆಯಲ್ಲಿ ಒಟ್ಟು ಹದಿನೈದು ಚಿತ್ರಮಂದಿರದಲ್ಲಿ ‘ಆರ್ಆರ್ಆರ್’ ಸಿನಿಮಾ ಪ್ರದರ್ಶನ ಆಗುತ್ತಿದೆ. ಮೊದಲ ದಿನ ಎಲ್ಲ ಚಿತ್ರಮಂದಿರಗಳೂ ಹೌಸ್ ಫುಲ್ ಆಗುತ್ತಿವೆ. ಅಭಿಮಾನಿಗಳು ಸಿನಿಮಾ ನೋಡಿ ಸಂಭ್ರಮಿಸುತ್ತಿದ್ದಾರೆ.
ಯಾದಗಿರಿಯಲ್ಲಿ ಕೊಂಚ ತಡವಾಗಿ RRR ಸಿನಿಮಾ ಆರಂಭ ಆಗುತ್ತಿದೆ. ಬೆಳಗ್ಗೆ 10:30ಕ್ಕೆ ಮೊದಲ ಶೋ ಆರಂಭ ಆಗುವ ಹಿನ್ನೆಲೆಯನ್ನು ಮುಂಜಾನೆ ಥಿಯೇಟರ್ನತ್ತ ಅಭಿಮಾನಿಗಳು ಸುಳಿದಿಲ್ಲ. ಪ್ರೇಕ್ಷಕರಿಲ್ಲದೆ ಚಿತ್ರಮಂದಿರದ ಆವರಣ ಖಾಲಿ ಖಾಲಿಯಾಗಿತ್ತು.
ಬೆಂಗಳೂರಿನ ಅಂಜನ್ ಚಿತ್ರಮಂದಿರದಲ್ಲಿ ಅಭಿಮಾನಿಗಳ ನಡುವೆ ಗಲಾಟೆ ನಡೆದಿದೆ. ಜೂ. ಎನ್‌ಟಿಆರ್ ಹಾಗೂ ಚರಣ್ ಅಭಿಮಾನಿಗಳ ಮಧ್ಯೆ ಕಿರಿಕ್ ಆಗಿದೆ. ತಮ್ಮ ಹೀರೋನೇ ಹೆಚ್ಚೆಂಬ ವಿಚಾರಕ್ಕೆ ನಡೆದ ಈ ಗಲಾಟೆಯು ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿತು. ಇದರಿಂದ ಇತರೆ ಪ್ರೇಕ್ಷಕರಿಗೆ ಕಿರಿಕಿರಿ ಆಯಿತು.