RRR Trailer ಯೂಟ್ಯೂಬ್ನಲ್ಲಿ ಬರೋಕಿಂತ ಮುನ್ನ ನೀವು ನೋಡಬಹುದು; ಇಲ್ಲಿದೆ ಸೂಪರ್ ಅವಕಾಶ
RRR Trailer: ರಾಜಮೌಳಿ ನಿರ್ದೇಶನದ ಆರ್ಆರ್ಆರ್ ಸಿನಿಮಾ ಬಿಗ್ ಬಜೆಟ್ನಲ್ಲಿ ತಯಾರಾಗಿದೆ. ಸಿನಿಮಾ ಮಾತ್ರವಲ್ಲದೇ ಅದರ ಟ್ರೇಲರ್ ಅನ್ನು ಕೂಡ ಬಿಗ್ ಸ್ಕ್ರೀನ್ ಮೇಲೆ ನೋಡುವುದೇ ಒಂದು ವೈಭವ.
ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಡಿ.3ರಂದು ‘ಆರ್ಆರ್ಆರ್’ ಸಿನಿಮಾದ (RRR Movie) ಟ್ರೇಲರ್ ಬಿಡುಗಡೆ ಆಗಬೇಕಿತ್ತು. ಆದರೆ ಅನಿವಾರ್ಯ ಕಾರಣಗಳಿಂದ ಟ್ರೇಲರ್ ರಿಲೀಸ್ ದಿನಾಂಕ ಮುಂದೂಡಲ್ಪಟ್ಟಿತು. ಡಿ.9ರಂದು ಟ್ರೇಲರ್ ಅನಾವರಣ ಮಾಡುವುದಾಗಿ ಚಿತ್ರತಂಡ ಭರವಸೆ ನೀಡಿದೆ. ಅದಕ್ಕಾಗಿ ಈಗ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈಗಾಗಲೇ ತಡವಾಗಿರುವುದರಿಂದ ಸಖತ್ ಅದ್ದೂರಿಯಾಗಿ ಟ್ರೇಲರ್ ಹಂಚಿಕೊಳ್ಳಲು ಪ್ಲ್ಯಾನ್ ಮಾಡಲಾಗಿದೆ. ಯೂಟ್ಯೂಬ್ನಲ್ಲಿ ರಿಲೀಸ್ ಆಗೋಕಿಂತ ಮೊದಲೇ ಅಭಿಮಾನಿಗಳು ಇದನ್ನು ಕಣ್ತುಂಬಿಕೊಳ್ಳಬಹುದು. ಹೇಗೆ ಅಂತೀರಾ? ಉತ್ತರ ಸಿಂಪಲ್. ಡಿ.9ರ ಬೆಳಗ್ಗೆ 10 ಗಂಟೆಗೆ ನಿಮ್ಮ ಹತ್ತಿರದ ಚಿತ್ರಮಂದಿರಕ್ಕೆ ಹೋದರೆ ‘ಆರ್ಆರ್ಆರ್’ ಟ್ರೇಲರ್ (RRR Trailer) ನೋಡಬಹುದು. ಯಾವ ಯಾವ ಥಿಯೇಟರ್ಗಳಲ್ಲಿ ಲಭ್ಯವಾಗಲಿದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ..
ಬೆಂಗಳೂರಿನ ಊರ್ವಶಿ, ಅಂಜನ್, ಕಾವೇರಿ, ಮಾನಸ ಸೇರಿದಂತೆ 15ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಡಿ.9ರಂದು ಬೆಳಗ್ಗೆ 10 ಗಂಟೆಗೆ ‘ಆರ್ಆರ್ಆರ್’ ಟ್ರೇಲರ್ ಪ್ರದರ್ಶನ ಆಗಲಿದೆ. ಮೈಸೂರು, ಬಳ್ಳಾರಿ, ದಾವಣಗೆರೆ ಮುಂತಾದ ಕಡೆಗಳಲ್ಲೂ ಟ್ರೇಲರ್ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಆ ಬಳಿಕ ಯೂಟ್ಯೂಬ್ನಲ್ಲಿ ಟ್ರೇಲರ್ ರಿಲೀಸ್ ಆಗಲಿದೆ.
ರಾಜಮೌಳಿ ನಿರ್ದೇಶನದ ಸಿನಿಮಾಗಳು ಬಿಗ್ ಬಜೆಟ್ನಲ್ಲಿ ತಯಾರಾಗುತ್ತವೆ. ಅತ್ಯಾಧುನಿಕ ಗ್ರಾಫಿಕ್ಸ್ ತಂತ್ರಜ್ಞಾನ ಮತ್ತು ಬೃಹತ್ ಸೆಟ್ಗಳ ಮೂಲಕ ಅವರು ಹೊಸ ಲೋಕವನ್ನು ಕಟ್ಟಿಕೊಡುತ್ತಾರೆ. ಅದನ್ನು ಬಿಗ್ ಸ್ಕ್ರೀನ್ ಮೇಲೆ ನೋಡುವುದೇ ಒಂದು ವೈಭವ. ಹಾಗಾಗಿ ಟ್ರೇಲರ್ ಕೂಡ ಚಿತ್ರಮಂದಿರಗಳಲ್ಲಿ ರಿಲೀಸ್ ಆಗುತ್ತಿದೆ. 2022ರ ಜ.7ರಂದು ಈ ಚಿತ್ರ ವಿಶ್ವಾದ್ಯಂತ ಬಿಡುಗಡೆ ಆಗಲಿದೆ. ಕನ್ನಡಕ್ಕೂ ಡಬ್ ಆಗಿದ್ದು, ಏಕಕಾಲಕ್ಕೆ ಕನ್ನಡ ವರ್ಷನ್ ಕೂಡ ತೆರೆಕಾಣಲಿದೆ.
‘ಆರ್ಆರ್ಆರ್’ ಚಿತ್ರಕ್ಕೆ ಎಂಎಂ ಕೀರವಾಣಿ ಸಂಗೀತ ನಿರ್ದೇಶನ ಮಾಡಿದ್ದಾರೆ. ಈಗಾಗಲೇ ಬಿಡುಗಡೆ ಆಗಿರುವ ‘ನಾಟು ನಾಟು’ ಮತ್ತು ‘ಜನನಿ’ ಹಾಡುಗಳು ಸಖತ್ ಸೌಂಡು ಮಾಡುತ್ತಿವೆ. ಸಿನಿಮಾ ರಿಲೀಸ್ಗೂ ಮುನ್ನ ಅದ್ದೂರಿಯಾಗಿ ಪ್ರೀ-ರಿಲೀಸ್ ಇವೆಂಟ್ ನಡೆಯಲಿದೆ. ಅದಕ್ಕಾಗಿಯೂ ಅಭಿಮಾನಿಗಳು ತುದಿಗಾಲಿನಲ್ಲಿ ಕಾಯುತ್ತಿದ್ದಾರೆ.
ಈ ಸಿನಿಮಾದಲ್ಲಿ ಜ್ಯೂ. ಎನ್ಟಿಆರ್ ಮತ್ತು ರಾಮ್ ಚರಣ್ ಮುಖ್ಯಭೂಮಿಕೆ ನಿಭಾಯಿಸಿದ್ದಾರೆ. ಆಲಿಯಾ ಭಟ್ ನಾಯಕಿಯಾಗಿ ಇದೇ ಮೊದಲ ಬಾರಿಗೆ ದಕ್ಷಿಣ ಭಾರತಕ್ಕೆ ಕಾಲಿಟ್ಟಿದ್ದಾರೆ. ಅಜಯ್ ದೇವಗನ್ ಅವರು ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕನ್ನಡದ ನಟ ಅರುಣ್ ಸಾಗರ್ ಕೂಡ ಈ ಚಿತ್ರದಲ್ಲಿ ನಟಿಸಿದ್ದಾರೆ. ‘ಬಾಹುಬಲಿ’ ಯಶಸ್ಸಿನ ನಂತರ ರಾಜಮೌಳಿ ನಿರ್ದೇಶನ ಮಾಡಿರುವ ಸಿನಿಮಾ ಇದಾಗಿರುವುದರಿಂದ ನಿರೀಕ್ಷೆ ಜಾಸ್ತಿ ಇದೆ.
ಇದನ್ನೂ ಓದಿ:
ಪುಷ್ಪ, ಆರ್ಆರ್ಆರ್ ಮೀರಿಸಿ ಟ್ರೆಂಡ್ ಆದ ‘ಗಂಧದ ಗುಡಿ’; ಪುನೀತ್ ಡಾಕ್ಯುಮೆಂಟರಿಗೆ ಬಹುಪರಾಕ್
ರಿಲೀಸ್ಗೂ ಮೊದಲೇ ಸಾವಿರ ಕೋಟಿ ಸಮೀಪಿಸಿತು ‘ಆರ್ಆರ್ಆರ್’ ಗಳಿಕೆ; ರಾಜಮೌಳಿ ಹೊಸ ದಾಖಲೆ