
ಸಿನಿಮಾ (Cinema) ಹಾಗೂ ರಾಜಕಾರಣ ಎರಡಕ್ಕೂ ಬಹಳ ಹತ್ತಿರದ ಸಂಬಂಧ. ಅದರಲ್ಲೂ ರಾಜಕಾರಣಿಗಳು ಪಕ್ಷದ ಅಥವಾ ವೈಯಕ್ತಿಕ ಲಾಭಕ್ಕಾಗಿ ದಶಕಗಳಿಂದಲೂ ಸಿನಿಮಾಗಳನ್ನು ಬಳಸಿಕೊಂಡೇ ಬರುತ್ತಿದ್ದಾರೆ. ಸಾಮಾನ್ಯರ ಮೇಲೆ ಅಪಾರ ಪ್ರಭಾವ ಬೀರಬಲ್ಲ ಸಿನಿಮಾದ ಶಕ್ತಿಯನ್ನು ಅರಿತಿರುವ ರಾಜಕಾರಣಿಗಳು ಸಿನಿಮಾದವರೊಟ್ಟಿಗೆ ಉತ್ತಮ ಬಾಂಧವ್ಯವನ್ನೇ ಇರಿಸಿಕೊಂಡಿದ್ದಾರೆ. ರಾಜಕೀಯ ಪಕ್ಷ ಅಲ್ಲದೇ ಇದ್ದರೂ ಸಹ ಆರ್ಎಸ್ಎಸ್ ದೇಶದ ರಾಜಕೀಯದ ಮೇಲೆ ಪ್ರತ್ಯಕ್ಷ, ಪರೋಕ್ಷ ಪ್ರಭಾವ ಬೀರುತ್ತಲೇ ಬರುತ್ತಿದೆ. ಇದೀಗ ಸಂಘದ ರಾಷ್ಟ್ರ ಪ್ರಮುಖ್ ಆಗಿರುವ ಮೋಹನ್ ಭಾಗವತ್ ಅವರು ತೆಲುಗು ಚಿತ್ರರಂಗದ ಸ್ಟಾರ್ ನಟರು ಮತ್ತು ಕೆಲ ಪ್ರಮುಖ ನಿರ್ಮಾಪಕರನ್ನು ಭೇಟಿ ಆಗಿರುವುದು ಕುತೂಹಲ ಮೂಡಿಸಿದೆ.
ಮೋಹನ್ ಭಾಗವತ್ ಅವರು ಎರಡು ದಿನಗಳ ಹೈದರಾಬಾದ್ ಪ್ರವಾಸದಲ್ಲಿದ್ದು ಸುಮಾರು 150 ಮಂದಿ ಮಾಜಿ ಮತ್ತು ಹಾಲಿ ಐಎಎಸ್, ಐಪಿಎಸ್ ಅಧಿಕಾರಿಗಳು ಹಾಗೂ ನ್ಯಾಯಾಧೀಶರನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಈ ಕಾರ್ಯಕ್ರಮ ಹೈದರಾಬಾದ್ನ ಜಲ ವಿಹಾರ್ನಲ್ಲಿ ಆಯೋಜನೆ ಆಗಿತ್ತು. ಕಾರ್ಯಕ್ರಮದ ಬಳಿಕ ಸಂಜೆ ವೇಳೆಗೆ ತೆಲುಗು ಚಿತ್ರರಂಗದ ಸ್ಟಾರ್ ನಟ ವಿಕ್ಟರಿ ವೆಂಕಟೇಶ್ ಅವರ ನಿವಾಸದಲ್ಲಿ ಆಯೋಜಿಸಲಾಗಿದ್ದ ಸಭೆಯಲ್ಲಿ ಭಾಗವತ್ ಅವರು ಹಲವಾರು ಮಂದಿ ತೆಲುಗು ನಟ-ನಟಿಯರು ಮತ್ತು ಸಿನಿಮಾ ನಿರ್ಮಾಪಕರನ್ನು ಭೇಟಿ ಆಗಿ ಮಾತುಕತೆ ನಡೆಸಿದ್ದಾರೆ.
ವೆಂಕಟೇಶ್ ಅವರ ನಿವಾಸದಲ್ಲಿ ನಡೆದ ಸಭೆಯಲ್ಲಿ ತೆಲುಗು ಸಿನಿಮಾ ರಂಗಕ್ಕೆ ಸಂಬಂಧಿಸಿದ ಸುಮಾರು 140 ಮಂದಿ ಭಾಗಿ ಆಗಿದ್ದರು ಎನ್ನಲಾಗುತ್ತಿದೆ. ಈ ಕಾರ್ಯಕ್ರಮದ ಆಯೋಜನೆ ಮಾಡಿದ್ದು ಎಸ್ಎಸ್ ರಾಜಮೌಳಿ ಅವರ ತಂದೆ, ರಾಜ್ಯಸಭಾ ಸದಸ್ಯರೂ ಆಗಿರುವ ಕತೆಗಾರ ವಿಜಯೇಂದ್ರ ಪ್ರಸಾದ್ ಎನ್ನಲಾಗಿದೆ.
ಇದನ್ನೂ ಓದಿ:ಒಟಿಟಿಗೆ ಬಂತು ಆಶಿಕಾ, ದುಷ್ಯಂತ್, ಸಿಂಪಲ್ ಸುನಿ ಸಿನಿಮಾ ‘ಗತವೈಭವ’
ಮೋಹನ್ ಭಾಗವತ್ ಅವರ ಕಾರ್ಯಕ್ರಮದಲ್ಲಿ ನಟರಾದ ವೆಂಕಟೇಶ್, ಅಕ್ಕಿನೇನಿ ನಾಗಾರ್ಜು, ತೇಜ್ ಸಜ್ಜಾ, ನಟ ನಾನಿ, ವರುಣ್ ತೇಜ್, ರಾಣಾ ದಗ್ಗುಬಾಟಿ, ರಾಮ್ ಪೋತಿನೇನಿ ಇನ್ನೂ ಹಲವರು ಭಾಗಿ ಆಗಿದ್ದರು. ಮೈತ್ರಿ ಮೂವಿ ಮೇಕರ್ಸ್ನ ನಿರ್ಮಾಪಕರಾದ ಮೈತ್ರಿ ರವಿ, ಖ್ಯಾತ ನಿರ್ಮಾಪಕ ಸುರೇಶ್ ಬಾಬು ಇನ್ನೂ ಹಲವರು ಭಾಗಿ ಆಗಿದ್ದರು ಎನ್ನಲಾಗುತ್ತಿದೆ.
ವಿಜಯೇಂದ್ರ ಪ್ರಸಾದ್ ಅವರು ಈ ಹಿಂದೆ ತಾವು ಆರ್ಎಸ್ಎಸ್ ಬಗ್ಗೆ ಸಿನಿಮಾ ಮಾಡುವ ಆಶಯವನ್ನು ವ್ಯಕ್ತಪಡಿಸಿದ್ದರು. ಅದರ ಬೆನ್ನಲ್ಲೇ ಇದೀಗ ತೆಲುಗು ಚಿತ್ರರಂಗದ ಗಣ್ಯರು ಮೋಹನ್ ಭಾಗವತ್ ಅವರನ್ನು ಭೇಟಿ ಆಗಿರುವುದು ಕುತೂಹಲ ಕೆರಳಿಸಿದೆ. ಆದರೆ ಸಭೆಯಲ್ಲಿ ಚರ್ಚೆ ಆದ ವಿಷಯಗಳ ಮಾಹಿತಿ ಬಹಿರಂಗವಾಗಿಲ್ಲ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ