2 ವರ್ಷದ ಬಳಿಕ ಅದ್ಭುತ ಪಾತ್ರದೊಂದಿಗೆ ಪ್ರೇಕ್ಷಕರೆದುರು ಬಂದ ಸಾಯಿ ಪಲ್ಲವಿ

Sai Pallavi: ಸಾಯಿ ಪಲ್ಲವಿಯ ಸಿನಿಮಾ ಒಂದು ಬಿಡುಗಡೆ ಆಗಿ ಎರಡು ವರ್ಷಕ್ಕೂ ಹೆಚ್ಚು ಸಮಯವಾಯ್ತು. ಇದೀಗ ಸಾಯಿ ಪಲ್ಲವಿ ನಟಿಸಿರುವ ಹೊಸ ಸಿನಿಮಾದ ಕ್ಯಾರೆಕ್ಟರ್ ಟೀಸರ್ ಬಿಡುಗಡೆ ಮಾಡಿದ್ದು, ಒಂದು ಅದ್ಭುತ ಪಾತ್ರದ ಮೂಲಕ ಮರಳಿ ಬಂದಿದ್ದಾರೆ ಸಾಯಿ ಪಲ್ಲವಿ.

2 ವರ್ಷದ ಬಳಿಕ ಅದ್ಭುತ ಪಾತ್ರದೊಂದಿಗೆ ಪ್ರೇಕ್ಷಕರೆದುರು ಬಂದ ಸಾಯಿ ಪಲ್ಲವಿ

Updated on: Sep 27, 2024 | 5:28 PM

ಸಾಯಿ ಪಲ್ಲವಿ, ಹೇಟರ್​ಗಳೇ ಇಲ್ಲದ ನಟಿ. ಎಲ್ಲ ವಯೋಮಾನದ ಪ್ರೇಕ್ಷಕರಿಂದಲೂ ಸಮಾನ ಪ್ರೀತಿ, ಗೌರವ ಪಡೆಯುತ್ತಿರುವ ನಟಿ. ಸಾಯಿ ಪಲ್ಲವಿ ಆಯ್ಕೆ ಮಾಡಿಕೊಳ್ಳುತ್ತಿರುವ ಪಾತ್ರಗಳು, ಸಿನಿಮಾಗಳಲ್ಲಿ ತಮ್ಮನ್ನು ತಾವು ಪ್ರಸ್ತುತ ಪಡಿಸಿಕೊಳ್ಳುತ್ತಿರುವ ರೀತಿ, ಸಿನಿಮಾಗಳ ಹೊರಗೆ ಸಹ ಸಾಯಿ ಪಲ್ಲವಿ ನಡೆದುಕೊಳ್ಳುವ, ಮಾತನಾಡುವ, ವರ್ತಿಸುವ ರೀತಿಯಿಂದಾಗಿ ಆಕೆಯ ನಟನೆಯ ಜೊತೆಗೆ ಆಕೆಯ ವ್ಯಕ್ತಿತ್ವಕ್ಕೂ ಸಹ ಕೋಟ್ಯಂತರ ಮಂದಿ ಮಾರು ಹೋಗಿದ್ದಾರೆ. ಆದರೆ ಸಾಯಿ ಪಲ್ಲವಿ ನಟನೆ ಸಿನಿಮಾ ಒಂದು ಬಿಡುಗಡೆ ಆಗಿ ಎರಡು ವರ್ಷಕ್ಕೂ ಹೆಚ್ಚು ಸಮಯವಾಗಿದೆ. ಸಾಯಿ ಪಲ್ಲವಿಯನ್ನು ಮತ್ತೆ ತೆರೆಯ ಮೇಲೆ ಯಾವಾಗ ನೋಡುವುದು ಎಂದು ಕಾದಿದ್ದ ಅಭಿಮಾನಿಗಳಿಗೆ ಒಂದು ಅದ್ಭುತ ಪಾತ್ರದ ಮೂಲಕ ಶಾಕ್ ಕೊಟ್ಟಿದ್ದಾರೆ ಸಾಯಿ ಪಲ್ಲವಿ.

ಸಾಯಿ ಪಲ್ಲವಿ ‘ಅಮರನ್’ ಹೆಸರಿನ ಸಿನಿಮಾದಲ್ಲಿ ನಟಿಸಿದ್ದು ಸಿನಿಮಾದ ಟೀಸರ್ ಇಂದಷ್ಟೆ ಬಿಡುಗಡೆ ಆಗಿದೆ. ವಿಶೇಷವೆಂದರೆ ಈ ಟೀಸರ್​ ಕೇವಲ ಸಾಯಿ ಪಲ್ಲವಿ ಪಾತ್ರಕ್ಕೆ ಮಾತ್ರವೇ ಸೀಮಿತ. ಸಿನಿಮಾದ ಕತೆ ವೀರ ಯೋಧನ ಕತೆಯಾಗಿದ್ದರೂ ಸಹ ಚಿತ್ರತಂಡ ಸಾಯಿ ಪಲ್ಲವಿ ಪಾತ್ರದ ಟೀಸರ್ ಅನ್ನು ಮಾತ್ರವೇ ಬಿಡುಗಡೆ ಮಾಡಿದ್ದು, ಸಣ್ಣ ಟೀಸರ್​ನಲ್ಲಿಯೂ ಸಹ ಸಾಯಿ ಪಲ್ಲವಿ ಬಹುವಾಗಿ ಇಷ್ಟವಾಗುತ್ತಾರೆ.

ಇದನ್ನೂ ಓದಿ:ನಟಿ ಸಾಯಿ ಪಲ್ಲವಿಯ ಕೂದಲಿನ ಆರೈಕೆಯ ರಹಸ್ಯ ಈ ಎಲೆಯ ರಸ

‘ಅಮರನ್’ ಸಿನಿಮಾ ವೀರಯೋಧ ಮೇಜರ್ ಮುಕುಂದ ವರದಾರಜನ್ ಅವರ ನಿಜ ಜೀವನದ ಕತೆಯನ್ನು ಆಧರಿಸಿದೆ. ಸಿನಿಮಾದಲ್ಲಿ ಸಾಯಿ ಪಲ್ಲವಿ, ಮೇಜರ್ ಮುಕುಂದ ವರದಾರಜನ್ ಅವರ ಪತ್ನಿ ಇಂದು ರೆಬೆಕಾ ವರ್ಗೀಸ್ ಪಾತ್ರದಲ್ಲಿ ನಟಿಸಿದ್ದಾರೆ. ಈಗ ಕೇವಲ 1:22 ನಿಮಿಷದ ಟೀಸರ್ ಆಗಿದ್ದು, ಟೀಸರ್ ತುಂಬ ಸಾಯಿ ಪಲ್ಲವಿ ಇದ್ದಾರೆ. ಅಸಲಿಗೆ ಈ ಟೀಸರ್ ಅನ್ನು ಸಾಯಿ ಪಲ್ಲವಿಯ ಪಾತ್ರವನ್ನು ಪರಿಚಯಿಸಲೆಂದೇ ಬಿಡುಗಡೆ ಮಾಡಲಾಗಿದೆ. ಸಣ್ಣ ಟೀಸರ್​ನಲ್ಲಿಯೇ ಸಾಯಿ ಪಲ್ಲವಿಯ ನಟನೆ, ಲುಕ್​ ಹೃದಯಸೂರೆಗೊಳ್ಳುವಂತಿದೆ.

ಸಿನಿಮಾದಲ್ಲಿ, ಮೇಜರ್ ಮುಕುಂದ ವರದಾರಜನ್ ಅವರ ಪಾತ್ರದಲ್ಲಿ ನಟ ಶಿವಕಾರ್ತಿಕೇಯನ್ ನಟಿಸಿದ್ದಾರೆ. ಅವರ ಪಾತ್ರದ ಟೀಸರ್ ಇನ್ನಷ್ಟೆ ಬಿಡುಗಡೆ ಆಗಬೇಕಿದೆ. ಮೇಜರ್ ಮುಕುಂದ ವರದರಾಜನ್ ಅವರು ಚೆನ್ನೈನವರಾಗಿದ್ದು ಭಾರತೀಯ ಸೇನೆಯಲ್ಲಿ ಮೇಜರ್ ಆಗಿ ಸೇವೆ ಸಲ್ಲಿಸಿದ್ದರು. 2014 ರಲ್ಲಿ ಭಯೊತ್ಪಾದಕರೊಂದಿಗೆ ನಡೆದ ಹೋರಾಟದಲ್ಲಿ ಅವರು ಅಮರರಾದರು. ಅವರ ಜೀವನ ಕತೆ ಆಧರಸಿ ‘ಅಮರನ್’ ಸಿನಿಮಾ ನಿರ್ಮಾಣ ಮಾಡಲಾಗಿದ್ದು, ಸಿನಿಮಾವನ್ನು ರಾಜಕುಮಾರ ಪೆರಿಯಸ್ವಾಮಿ ನಿರ್ದೇಶನ ಮಾಡಿದ್ದಾರೆ. ಸಿನಿಮಾಕ್ಕೆ ಕಮಲ್ ಹಾಸನ್ ಬಂಡವಾಳ ಹೂಡಿದ್ದಾರೆ. ಜಿವಿ ಪ್ರಕಾಶ್ ಈ ಸಿನಿಮಾಕ್ಕೆ ಬಂಡವಾಳ ಹೂಡಿದ್ದಾರೆ. ಸಿನಿಮಾ ಅಕ್ಟೋಬರ್ 31ಕ್ಕೆ ತೆರೆಗೆ ಬರಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:27 pm, Fri, 27 September 24