ಪವಿತ್ರಾ ಗೌಡ ಜಾಮೀನು ವಿಚಾರಣೆ ಮುಂದೂಡಿಕೆ, ಇಂದು ನಡೆದ ವಾದವೇನು?
ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಮೊದಲ ಆರೋಪಿ ಪವಿತ್ರಾ ಗೌಡ ಜಾಮೀನು ಅರ್ಜಿಯ ವಿಚಾರಣೆ ಇಂದು (ಸೆಪ್ಟೆಂಬರ್ 27) ಸೆಷನ್ಸ್ ನ್ಯಾಯಾಲಯದಲ್ಲಿ ನಡೆದಿದ್ದು, ವಿಚಾರಣೆಯನ್ನು ಸೆಪ್ಟೆಂಬರ್ 30ಕ್ಕೆ ಮುಂದೂಡಲಾಗಿದೆ. ಇಂದು ಪವಿತ್ರಾ ಗೌಡ ಪರ ವಕೀಲರು ಮಂಡಿಸಿದ ವಾದವೇನು?
ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಎ1 ಆರೋಪಿ ಪವಿತ್ರಾ ಗೌಡ ಅವರ ಜಾಮೀನು ಅರ್ಜಿ ವಿಚಾರಣೆ ಇಂದು ಬೆಂಗಳೂರು ಸೆಷನ್ಸ್ ನ್ಯಾಯಾಲಯದಲ್ಲಿ ನಡೆದಿದ್ದು, ವಿಚಾರಣೆಯನ್ನು ಮತ್ತೊಮ್ಮೆ ಮುಂದೂಡಲಾಗಿದೆ. ಮುಂದಿನ ವಿಚಾರಣೆ ಸೆಪ್ಟೆಂಬರ್ 30ಕ್ಕೆ ನಡೆಯಲಿದೆ. ಇದೇ ಪ್ರಕರಣದ ಎರಡನೇ ಆರೋಪಿ ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆಯೂ ಸಹ ಸೆಪ್ಟೆಂಬರ್ 30ರಂದೇ ನಡೆಯಲಿದೆ. ಇಂದು ಪವಿತ್ರಾ ಗೌಡ ಪರ ವಕೀಲರಾದ ಟಾಮಿ ಸೆಬಾಸ್ಟಿಯನ್ ವಾದ ಮಂಡಿಸಿದರು. ಪವಿತ್ರಾ ಅವರಿಗೆ ಕೊಲ್ಲುವ ಉದ್ದೇಶವೇ ಇರಲಿಲ್ಲ, ಆಕೆ ಈ ಪ್ರಕರಣದಲ್ಲಿ ಷಡ್ಯಂತ್ರವನ್ನೂ ಮಾಡಿರಲಿಲ್ಲ ಎಂದು ಸೆಬಾಸ್ಟಿಯನ್ ವಾದಿಸಿದರು.
ಪವಿತ್ರಾ ಅವರ ಜಾಮೀನು ಅರ್ಜಿಗೆ ಎಸ್ಪಿಪಿ ಪ್ರಸನ್ನ ಕುಮಾರ್ ಆಕ್ಷೇಪಣೆ ಸಲ್ಲಿಸಿದ ಬಳಿಕ ವಾದ ಮಂಡನೆ ಆರಂಭಿಸಿದ ಟಾಮಿ ಸೆಬಾಸ್ಟಿಯನ್, ಮೊದಲಿಗೆ ಆಕ್ಷೇಪಣೆಯಲ್ಲಿನ ಅಂಶಗಳನ್ನು ಓದಿದರು. ರೇಣುಕಾ ಸ್ವಾಮಿಯನ್ನು ಷೆಡ್ಗೆ ಕರೆದೊಯ್ದು ಇತರರೊಂದಿಗೆ ಸೇರಿ ಹಲ್ಲೆ ನಡೆಸಿದ ಆರೋಪವಿದೆ, ಹಲ್ಲೆಯಿಂದಾಗಿ ರೇಣುಕಾಸ್ವಾಮಿ ಮೃತಪಟ್ಟಿದ್ದಾರೆಂದು ಹೇಳಲಾಗಿದೆ. ತುಂಬಾ ಕ್ರೂರವಾಗಿ ಹಲ್ಲೆ ನಡೆಸಿದ್ದರೆಂದು ಆರೋಪಿಸಲಾಗಿದೆ. ನಾಲ್ಕು ಪ್ರತ್ಯಕ್ಷ ಸಾಕ್ಷಿಗಳ ಹೇಳಿಕೆ ಪಡೆಯಲಾಗಿದೆ, ಷೆಡ್ ಒಳಗೆ ಏನಾಯಿತೆಂಬುದನ್ನು ಇಬ್ಬರು ಸಾಕ್ಷಿಗಳು ಹೇಳಿಕೆ ದಾಖಲಿಸಿದ್ದಾರೆ’ ಎಂದು ಪವಿತ್ರಾ ಮೇಲಿನ ಆರೋಪದ ಔಟ್ಲೈನ್ ನೀಡಿದರು.
ಇದನ್ನೂ ಓದಿ:ದರ್ಶನ್ ಜಾಮೀನು ಅರ್ಜಿ ವಿಚಾರಣೆ ಸೆಪ್ಟೆಂಬರ್ 30ಕ್ಕೆ ಮುಂದೂಡಿಕೆ: ಕಾರಣ?
‘ದರ್ಶನ್ ಜೊತೆ ಪವಿತ್ರಾ ಬಂದು ರೇಣುಕಾ ಸ್ವಾಮಿ ಕಪಾಳಕ್ಕೆ ಹೊಡೆದಳು. ಹೀಗೆಂದು ಸಾಕ್ಷಿ ಹೇಳಿಕೆಯಲ್ಲಿ ತಿಳಿಸಿದ್ದಾನೆ. ಕಪಾಳಕ್ಕೆ ಹೊಡೆದಿರುವುದನ್ನು ಬಿಟ್ಟರೆ ಬೇರೆ ಆರೋಪವಿಲ್ಲ, ನಂತರ ಆಕೆಯನ್ನು ಮನೆಗೆ ಡ್ರಾಪ್ ಮಾಡಲಾಗಿದೆ. ಆರೋಪಪಟ್ಟಿಯಲ್ಲಿ ಪದೇ ಪದೇ ಪವಿತ್ರಾ ಗೌಡ ಷಡ್ಯಂತ್ರ ಮಾಡಿದ್ದಾರೆ ಎಂದು ಹೇಳಲಾಗಿದೆ. ಆದರೆ ಷಡ್ಯಂತ್ರ ಏನೆಂದು ಸ್ಪಷ್ಟವಾಗಿಲ್ಲ. ಮೃತ ರೇಣುಕಾ ಸ್ವಾಮಿ ಪವಿತ್ರಾ ಗೌಡ ಇಮೇಜ್ಗೆ ಧಕ್ಕೆ ತಂದಿದ್ದ, ಹೀಗಾಗಿ ಆಕೆಗೆ ಆತನನ್ನು ದೂಷಿಸುವ ಹಕ್ಕಿದೆ, ಆಕೆ ರೇಣುಕಾಸ್ವಾಮಿ ಮಾಡಿರುವ ಕೃತ್ಯವನ್ನು ದರ್ಶನ್, ಪವನ್ಗೆ ಹೇಳಿದ್ದಾಳೆ. ಆಕೆ ಹೀಗೆ ಹೇಳುವುದರಲ್ಲಿ ತಪ್ಪೇನಿದೆ? ಕಪಾಳಕ್ಕೆ ಹೊಡೆದದ್ದನ್ನು ಬಿಟ್ಟರೆ ಪವಿತ್ರಾ ಗೌಡ ಅವರದ್ದು ಈ ಪ್ರಕರಣದಲ್ಲಿ ಬೇರೆ ಪಾತ್ರವಿಲ್ಲ. ಪವಿತ್ರಾ ಮಾಸ್ಟರ್ ಮೈಂಡ್ ಎಂದು ಹೇಳುವುದು ಸರಿಯಲ್ಲ. ಕೊಲೆಯಲ್ಲಿ ಆಕೆಯ ಯಾವುದೇ ಪಾತ್ರವಿಲ್ಲ. ಆಕೆಗೆ ಕೊಲೆಯ ಉದ್ದೇಶವಿತ್ತೆಂದು ಹೇಳಲಾಗುವುದಿಲ್ಲ, ಹೀಗಾಗಿ ಪವಿತ್ರಾಗೆ ಜಾಮೀನು ನೀಡಬೇಕು ಎಂದು ಟಾಮಿ ಸೆಬಾಸ್ಟಿಯನ್ ನ್ಯಾಯಾಧೀಶರ ಮುಂದೆ ವಾದಿಸಿದರು.
ಇದೇ ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಎಂಟನೇ ಆರೋಪಿ ರವಿ ಅಲಿಯಾಸ್ ರವಿಶಂಕರ್ ಜಾಮೀನು ಅರ್ಜಿಯ ವಿಚಾರಣೆಯೂ ನಡೆಯಿತು. ರವಿಶಂಕರ್ ಪರ ವಾದಿಸಿದ ವಕೀಲ ರಂಗನಾಥ ರೆಡ್ಡಿ, ರೇಣುಕಾಸ್ವಾಮಿ ಅಪಹರಣ, ಕೊಲೆಯಲ್ಲಿ ರವಿಶಂಕರ್ ಪಾತ್ರವಿಲ್ಲ, ಕಾರು ಬಾಡಿಗೆಗೆ ತೆಗೆದುಕೊಂಡಿದ್ದು ಬಿಟ್ಟರೆ ಘಟನೆ ಬಗ್ಗೆ ಗೊತ್ತಿಲ್ಲ, ಅಪಹರಣದ ಷಡ್ಯಂತ್ರದಲ್ಲೂ ಪಾತ್ರವಿಲ್ಲ, ಕೊಲೆಯಲ್ಲೂ ರವಿಶಂಕರ್ ಇಲ್ಲ, ರವಿಶಂಕರ್ ಕಾರು ಚಾಲಕನಾಗಿ ತನ್ನ ಕಾರನ್ನು ಬಾಡಿಗೆಗೆ ನೀಡಿದ್ದ, ಸೆಕ್ಷನ್ 364 ಆಗಲೀ, 302 ಆಗಲೀ ಅನ್ವಯವಾಗಲ್ಲವೆಂದು ವಾದ ಮಂಡಿಸಿದರು. ಇಬ್ಬರೂ ವಕೀಲರ ವಾದ ಆಲಿಸಿದ ನ್ಯಾಯಾಧೀಶರು ಪ್ರಕರಣದ ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 30ಕ್ಕೆ ಮುಂದೂಡಿದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ