AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಣ ಬಂದರೂ ಸಿನಿಮಾ ನಿರ್ಮಾಣ ಕೈಬಿಟ್ಟಿದ್ದೇಕೆ ಸೈಫ್ ಅಲಿ ಖಾನ್?

ಸೈಫ್ ಅಲಿ ಖಾನ್ ತಮ್ಮ ನಿರ್ಮಾಣ ಸಂಸ್ಥೆ 'ಇಲ್ಯುಮಿನಾಟಿ ಫಿಲ್ಮ್ಸ್' ಮುಚ್ಚಿದ ಅಸಲಿ ಕಾರಣ ಬಹಿರಂಗಪಡಿಸಿದ್ದಾರೆ. ಸಿನಿಮಾ ನಿರ್ಮಾಣ ಕೃತಜ್ಞತೆ ಇಲ್ಲದ, ಅತಿ ದೊಡ್ಡ ತಲೆನೋವಿನ ಕೆಲಸ ಎಂದು ಹೇಳಿದ್ದಾರೆ. ಸೃಜನಾತ್ಮಕ ಚರ್ಚೆ ಇಷ್ಟಪಟ್ಟರೂ, ನಿರ್ಮಾಣದ ತೊಂದರೆಗಳಿಂದ ದೂರ ಉಳಿದಿದ್ದೇನೆ ಎಂದ ಸೈಫ್, ದಿನೇಶ್ ವಿಜನ್ ಯಶಸ್ಸನ್ನು ಶ್ಲಾಘಿಸಿದರು. ಅಲ್ಲದೆ, ಶಾರುಖ್ ಖಾನ್ ಅವರ ನಿರ್ಮಾಣ ಶೈಲಿ ಉತ್ತಮವೆಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಹಣ ಬಂದರೂ ಸಿನಿಮಾ ನಿರ್ಮಾಣ ಕೈಬಿಟ್ಟಿದ್ದೇಕೆ ಸೈಫ್ ಅಲಿ ಖಾನ್?
ಸೈಫ್
 ಶ್ರೀಲಕ್ಷ್ಮೀ ಎಚ್
| Edited By: |

Updated on: May 19, 2026 | 11:59 AM

Share

ಬಾಲಿವುಡ್‌ನ ಖ್ಯಾತ ನಟ ಸೈಫ್ ಅಲಿ ಖಾನ್ (Saif Ali Khan), ಕೇವಲ ನಟನೆಯಷ್ಟೇ ಅಲ್ಲದೆ ಸಿನಿಮಾ ನಿರ್ಮಾಣದಲ್ಲೂ ಕೈಹಾಕಿ ಯಶಸ್ಸು ಕಂಡವರು. 2009ರಲ್ಲಿ ‘ಇಲ್ಯುಮಿನಾಟಿ ಫಿಲ್ಮ್ಸ್’ ಬ್ಯಾನರ್ ಆರಂಭಿಸಿ ‘ಲವ್ ಆಜ್ ಕಲ್’, ‘ಕಾಕ್‌ಟೇಲ್’, ‘ಗೋ ಗೋವಾ ಗಾನ್’ ನಂತಹ ಚಿತ್ರಗಳನ್ನು ನೀಡಿದ್ದರು. ಆದರೆ, ಯಶಸ್ಸಿನ ಉತ್ತುಂಗದಲ್ಲಿರುವಾಗಲೇ ಅವರು ತಮ್ಮ ಪ್ರೊಡಕ್ಷನ್ ಹೌಸ್ ಅನ್ನು ದಿಢೀರ್ ಮುಚ್ಚಿ ಎಲ್ಲರಿಗೂ ಶಾಕ್ ನೀಡಿದ್ದರು. ಇದೀಗ ವರ್ಷಗಳ ಬಳಿಕ ತಾವು ಸಿನಿಮಾ ನಿರ್ಮಾಣದಿಂದ ದೂರ ಸರಿದಿದ್ದಕ್ಕೆ ಅಸಲಿ ಕಾರಣವನ್ನು ಸೈಫ್ ಅಲಿ ಖಾನ್ ಬಹಿರಂಗಪಡಿಸಿದ್ದಾರೆ.

ಸಿನಿಮಾ ನಿರ್ಮಾಣ ಅತಿ ದೊಡ್ಡ ತಲೆನೋವು!

ಖಾಸಗಿ ಸುದ್ದಿ ಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಸೈಫ್, ‘ಸಿನಿಮಾ ನಿರ್ಮಾಣ ಎನ್ನುವುದು ಕೃತಜ್ಞತೆ ಇಲ್ಲದ ಕೆಲಸ. ಇದೊಂದು ಕ್ರಿಯೇಟಿವ್ ಕೆಲಸ ಹೌದು. ಸಿನಿಮಾ ಕಥೆ ಬಗ್ಗೆ, ಮ್ಯೂಸಿಕ್ ಬಗ್ಗೆ ಚರ್ಚಿಸುವುದು ನನಗೂ ಇಷ್ಟವಿತ್ತು. ಆದರೆ ಸಿನಿಮಾ ನಿರ್ಮಾಣ ಮಾಡುವುದು ಅತಿ ದೊಡ್ಡ ತಲೆನೋವು. ಹಾಗಾಗಿ ನಾನು ಅದರಿಂದ ದೂರ ಉಳಿದೆ’ ಎಂದು ಮುಕ್ತವಾಗಿ ಹೇಳಿಕೊಂಡಿದ್ದಾರೆ.

ತಮ್ಮ ನಿರ್ಮಾಣ ಸಂಸ್ಥೆಯ ಯಶಸ್ಸಿಗೆ ವಿತರಕರಾದ ‘ಇರೋಸ್ ಇಂಟರ್ನ್ಯಾಷನಲ್’ ಹಾಗೂ ತಮ್ಮ ಅಂದಿನ ಸಹ-ನಿರ್ಮಾಪಕ ದಿನೇಶ್ ವಿಜನ್ ಅವರ ‘ಮ್ಯಾಡಾಕ್ ಫಿಲ್ಮ್ಸ್’ ಕಾರಣ ಎಂದು ಸೈಫ್ ನೆನೆದಿದ್ದಾರೆ. ಸದ್ಯ ದಿನೇಶ್ ವಿಜನ್ ಬಾಲಿವುಡ್‌ನ ಅತ್ಯಂತ ಯಶಸ್ವಿ ನಿರ್ಮಾಪಕರಾಗಿ ಹೊರಹೊಮ್ಮಿದ್ದು, ‘ಸ್ತ್ರೀ’ ಫ್ರಾಂಚೈಸಿ, ‘ಭೇಡಿಯಾ’, ‘ಮುಂಜ್ಯಾ’ ನಂತಹ ಹಿಟ್ ಚಿತ್ರಗಳನ್ನು ನೀಡುತ್ತಿದ್ದಾರೆ. ಈ ಬಗ್ಗೆ ಸಂತಸ ವ್ಯಕ್ತಪಡಿಸಿದ ಸೈಫ್, ‘ಕೆಲವು ವಿಷಯಗಳು ಎಷ್ಟು ದಿನ ಇರಬೇಕೋ ಅಷ್ಟು ದಿನ ಮಾತ್ರ ಇರುತ್ತವೆ’ ಎಂದಿದ್ದಾರೆ.

ಇತ್ತೀಚೆಗಷ್ಟೇ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾದ ಕ್ರೈಮ್ ಡ್ರಾಮಾ ‘ಕರ್ತವ್ಯ’ ಸಿನಿಮಾದಲ್ಲಿ ಸೈಫ್ ಅಲಿ ಖಾನ್ ನಟಿಸಿದ್ದರು. ಈ ಚಿತ್ರವನ್ನು ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್ ಅವರ ‘ರೆಡ್ ಚಿಲ್ಲಿಸ್ ಎಂಟರ್‌ಟೈನ್‌ಮೆಂಟ್’ ಸಂಸ್ಥೆ ನಿರ್ಮಿಸಿದೆ.

ಇದನ್ನೂ ಓದಿ: ‘ಕೆಲಸ ಮುಗಿಸಿ ರಾತ್ರಿ 11 ಗಂಟೆಗೆ ಮನೆಗೆ ಹೋದ್ರೆ ಅದು ಜೀವನವೇ ಅಲ್ಲ’: ಸೈಫ್ ಅಲಿ ಖಾನ್

ತಮ್ಮ ‘ಕಲ್ ಹೋ ನಾ ಹೋ’ ಚಿತ್ರದ ಸಹನಟ ಶಾರುಖ್ ಅವರ ನಿರ್ಮಾಣ ಶೈಲಿಯನ್ನು ಸೈಫ್ ಅಲಿ ಖಾನ್ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ‘ಒಳ್ಳೆಯ ನಿರ್ಮಾಪಕರು, ನಿರ್ದೇಶಕರಿಗೆ ಮತ್ತು ಚಿತ್ರತಂಡಕ್ಕೆ ಮುಕ್ತವಾಗಿ ಕೆಲಸ ಮಾಡಲು ಸಂಪೂರ್ಣ ಸ್ವಾತಂತ್ರ್ಯ ನೀಡುತ್ತಾರೆ. ಶಾರುಖ್ ಖಾನ್ ಕೂಡ ಅದನ್ನೇ ಮಾಡಿದ್ದಾರೆ. ಶಾರುಖ್ ಅವರಿಗೆ ಸಿನಿಮಾಗಳ ಮೇಲೆ ಅಪಾರ ಪ್ರೀತಿ ಇದೆ. ಅದು ಅವರ ನಿರ್ಮಾಣದ ಚಿತ್ರಗಳ ಕಥೆಯ ಆಯ್ಕೆಯಲ್ಲೇ ಎದ್ದು ಕಾಣುತ್ತದೆ’ ಎಂದು ಸೈಫ್ ಅಲಿ ಖಾನ್ ತಿಳಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Shreelaxmi H
Shreelaxmi H

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More