ಪ್ರಭಾಸ್ (Prabhas) ನಟನೆಯ ‘ಕಲ್ಕಿ’ ಸಿನಿಮಾ ಕಳೆದ ವಾರವಷ್ಟೆ ಬಿಡುಗಡೆ ಆಗಿ ಭಾರಿ ಕಲೆಕ್ಷನ್ ಮಾಡುತ್ತಿದೆ. ಸಿನಿಮಾಕ್ಕೆ ಎಲ್ಲೆಡೆಯಿಂದ ಬಹಳ ಒಳ್ಳೆಯ ಪ್ರತಿಕ್ರಿಯೆ ಬರುತ್ತಿದೆ. ಸಿನಿಮಾ ಕೆಲವೇ ದಿನಗಳಲ್ಲಿ ವಿಶ್ವದಾದ್ಯಂತ 500 ಕೋಟಿಗೂ ಹೆಚ್ಚು ಗಳಿಕೆ ಮಾಡಿದ್ದು, ಸಿನಿಮಾ 1000 ಕೋಟಿ ಗಳಿಸಲಿದೆ ಎನ್ನಲಾಗುತ್ತಿದೆ. ಪ್ರಭಾಸ್ ಮತ್ತೊಂದು ಹಿಟ್ ಸಿನಿಮಾ ಖಾತೆಗೆ ಸೇರಿಸಿಕೊಂಡಿದ್ದಾರೆ. ಅಂದಹಾಗೆ ಸತತ ಸೋಲುಗಳಿಂದ ಕಂಗೆಟ್ಟಿದ್ದ ಪ್ರಭಾಸ್ ಅವರನ್ನು ಮತ್ತೆ ಗೆಲುವಿನ ಹಳಿಗೆ ತಂದಿದ್ದು ಪ್ರಶಾಂತ್ ನೀಲ್ ನಿರ್ದೇಶನದ ‘ಸಲಾರ್’ ಸಿನಿಮಾ. ಆದರೆ ‘ಸಲಾರ್ 2’ ಸಿನಿಮಾ ಬಗ್ಗೆ ಕೆಲವು ಊಹಾಪೋಗಳು ಹರಿದಾಡುತ್ತಿದ್ದವು ಅವೆಲ್ಲ ಈಗ ಬಂದ್ ಆಗಿವೆ.
‘ಸಲಾರ್ 2’ ಸಿನಿಮಾಕ್ಕೆ ಸಂಬಂಧಿಸಿದಂತೆ ಪ್ರಶಾಂತ್ ನೀಲ್ ಹಾಗೂ ಪ್ರಭಾಸ್ ನಡುವೆ ಕತೆಯ ವಿಷಯವಾಗಿ ಪರಸ್ಪರ ಭಿನ್ನಾಭಿಪ್ರಾಯ ಮೂಡಿದ್ದು, ಈ ಕಾರಣದಿಂದಲೇ ‘ಸಲಾರ್ 2’ ಸಿನಿಮಾ ನಿಂತು ಹೋಗಿದೆ ಎಂಬ ಸುದ್ದಿ ಕೆಲ ತಿಂಗಳ ಹಿಂದೆ ತುಸು ಗಟ್ಟಿಯಾಗಿ ಹರಿದಾಡಿತ್ತು. ಆದರೆ ಈ ಬಗ್ಗೆ ಪ್ರಭಾಸ್ ಆಗಲಿ ಪ್ರಶಾಂತ್ ನೀಲ್ ಆಗಲಿ ಪ್ರತಿಕ್ರಿಯೆ ನೀಡಿರಲಿಲ್ಲ. ಆದರೆ ಹೊಂಬಾಳೆ ಫಿಲಮ್ಸ್ನವರು ಈ ಸುದ್ದಿಯನ್ನು ತಳ್ಳಿ ಹಾಕಿದ್ದರು. ಆದರೆ ಈಗ ‘ಸಲಾರ್ 2’ ಪ್ರಾರಂಭದ ಬಗ್ಗೆ ಪಕ್ಕಾ ಸುದ್ದಿ ದೊರೆತಿದೆ.
ಇದನ್ನೂ ಓದಿ:ಬಂಗಾರದ ಬೆಳೆ ತೆಗೆದ ‘ಕಲ್ಕಿ’; ನಾಲ್ಕೇ ದಿನಕ್ಕೆ 500 ಕೋಟಿ ರೂ. ಗಳಿಕೆ ಮಾಡಿದ ಪ್ರಭಾಸ್ ಸಿನಿಮಾ
ಮುಂದಿನ ತಿಂಗಳು ಅಂದರೆ ಆಗಸ್ಟ್ 10ರಿಂದ ‘ಸಲಾರ್ 2’ ಸಿನಿಮಾದ ಚಿತ್ರೀಕರಣವನ್ನು ಪ್ರಭಾಸ್ ಪ್ರಾರಂಭಿಸಲಿದ್ದಾರಂತೆ. ಅಸಲಿಗೆ ಜೂನ್ ತಿಂಗಳಿನಲ್ಲಿಯೇ ಸಿನಿಮಾದ ಚಿತ್ರೀಕರಣ ಪ್ರಾರಂಭವಾಗಬೇಕಿತ್ತು. ಆದರೆ ಮಳೆ ಮತ್ತು ಪ್ರಭಾಸ್ರ ಡೇಟ್ಸ್ ಸಮಸ್ಯೆಯಿಂದ ಸಿನಿಮಾದ ಚಿತ್ರೀಕರಣ ತಡವಾಗಿದೆ. ಆಗಸ್ಟ್ ತಿಂಗಳಲ್ಲಿ ಚಿತ್ರೀಕರಣ ಪ್ರಾರಂಭ ಆಗಲಿರುವ ಬಗ್ಗೆ ಹೊಂಬಾಳೆ ಫಿಲಮ್ಸ್ ಸಹ ಖಾತ್ರಿ ನೀಡಿದೆ.
ರಾಮೋಜಿ ರಾವ್ ಫಿಲಂ ಸಿಟಿಯಲ್ಲಿ ‘ಸಲಾರ್’ನ ಸೆಟ್ ರೆಡಿಯಾಗಿದೆ. ಅಲ್ಲದೆ ‘ಸಲಾರ್ 2’ ಸಿನಿಮಾದ ಸುಮಾರು 20% ಭಾಗದ ಚಿತ್ರೀಕರಣವನ್ನು ಪ್ರಶಾಂತ್ ನೀಲ್ ಈ ಹಿಂದೆಯೇ ಮಾಡಿದ್ದರಂತೆ. ಹಾಗಾಗಿ ‘ಸಲಾರ್’ ಮೊದಲ ಭಾಗ ತೆಗೆದುಕೊಂಡಷ್ಟು ಹೆಚ್ಚು ಸಮಯವನ್ನು ‘ಸಲಾರ್ 2’ ಚಿತ್ರೀಕರಣ ತೆಗೆದುಕೊಳ್ಳುವುದಿಲ್ಲ ಎಂಬ ಖಾತ್ರಿ ಅಭಿಮಾನಿಗಳದ್ದು. ಆದರೆ ಈ ಬೆಳವಣಿಗೆ ನಡುವೆ ಜೂ ಎನ್ಟಿಆರ್ ಕತೆ ಏನು ಎಂಬ ಅನುಮಾನ ಮೂಡಿದೆ.
ಪ್ರಶಾಂತ್ ನೀಲ್ 2024 ರ ಅಂತ್ಯಕ್ಕೆ ಜೂ ಎನ್ಟಿಆರ್ ನಟನೆಯ ‘ಡ್ರಾಗನ್’ ಸಿನಿಮಾದ ಚಿತ್ರೀಕರಣ ಪರಾರಂಭ ಮಾಡಬೇಕಿದೆ. ಆ ಸಿನಿಮಾವನ್ನು ಮೈತ್ರಿ ಮೂವಿ ಮೇಕರ್ಸ್ ತೆರೆಗೆ ತರಲಿದ್ದಾರೆ. ಆದರೆ ಈಗ ಪ್ರಶಾಂತ್ ನೀಲ್ ‘ಸಲಾರ್ 2’ ಸಿನಿಮಾದಲ್ಲಿ ತೊಡಗಿಕೊಳ್ಳುತ್ತಿರುವ ಕಾರಣ ಜೂ ಎನ್ಟಿಆರ್ ಸಿನಿಮಾದ ಕತೆ ಏನಾಗಲಿದೆ ಎಂಬ ಅನುಮಾನ ಮೂಡಿದೆ. ಪ್ರಶಾಂತ್ ನೀಲ್, ಎರಡೂ ಸಿನಿಮಾಗಳ ಚಿತ್ರೀಕರಣವನ್ನು ಒಟ್ಟಿಗೆ ಪೂರ್ಣಗೊಳಿಸಲಿದ್ದಾರೆ ಎಂಬ ಮಾತುಗಳು ಸಹ ಕೇಳಿ ಬರುತ್ತಿವೆ.
‘ಸಲಾರ್’ ಸಿನಿಮಾದ ಅಂತ್ಯದಲ್ಲಿ ಆತ್ಮೀಯ ಗೆಳೆಯರಾದ ಪೃಥ್ವಿರಾಜ್ ಸುಕುಮಾರನ್ ಪಾತ್ರ ಹಾಗೂ ಪ್ರಭಾಸ್ ಪಾತ್ರದ ನಡುವೆಯೇ ವೈರತ್ವ ಶುರುವಾಗುವ ಸನ್ನಿವೇಶ ಸೃಷ್ಟಿಯಾಗಲಿದೆ. ಇಬ್ಬರು ಗೆಳೆಯರು ಪರಸ್ಪರ ದುಷ್ಮನ್ಗಳಾಗಿ ಹೇಗೆ ಹೊಡೆದಾಡಲಿದ್ದಾರೆ ಎಂಬುದನ್ನು ‘ಸಲಾರ್ 2’ನಲ್ಲಿ ತೋರಿಸಲು ಮುಂದಾಗಿದ್ದಾರೆ ನೀಲ್.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ