ಪಾಕಿಸ್ತಾನಿ ನಟ ಫವಾದ್ ಖಾನ್ಗೆ ಭಾರತದ ಸಿನಿಮಾದಲ್ಲಿ ಮತ್ತೆ ಸಿಕ್ಕಿದೆ ಅವಕಾಶ
ಭಾರತದಲ್ಲಿ ಕಲಾವಿದರಿಗೆ ಕೊರತೆ ಇದೆಯೇ? ಖಂಡಿತಾ ಇಲ್ಲ. ಹಾಗಿದ್ದರೂ ಕೂಡ ಪಾಕಿಸ್ತಾನಿ ಕಲಾವಿದರನ್ನು ಕರೆದು ಬಾಲಿವುಡ್ ಸಿನಿಮಾದಲ್ಲಿ ಅವಕಾಶ ನೀಡಲಾಗುತ್ತಿದೆ. ಬ್ಯಾನ್ ಕಾರಣದಿಂದ ಪಾಕ್ ನಟ ಫವಾದ್ ಖಾನ್ ಅವರನ್ನು ಹಿಂದಿ ಸಿನಿಮಾಗಳಿಂದ ದೂರ ಇಡಲಾಗಿತ್ತು. ಆದರೆ ಈಗ ಮತ್ತೆ ಅವರಿಗೆ ಬಾಲಿವುಡ್ ಮಂದಿ ಆಫರ್ ನೀಡಿದ್ದಾರೆ ಎನ್ನಲಾಗಿದೆ. ಆ ಬಗ್ಗೆ ಸುದ್ದಿ ಹೊರಬಿದ್ದಿದೆ.
ಪಾಕಿಸ್ತಾನಿ ನಟ ಫವಾದ್ ಖಾನ್ (Fawad Khan) ಅವರು ಹಿಂದಿ ಸಿನಿಮಾ ಮತ್ತು ಪಾಕಿಸ್ತಾನದ ಸೀರಿಯಲ್ಗಳಲ್ಲಿ ನಟಿಸಿ ಹೆಸರು ಮಾಡಿದ್ದಾರೆ. ಕಳೆದ ಒಂದಷ್ಟು ವರ್ಷಗಳಿಂದ ಅವರನ್ನು ಬ್ಯಾನ್ ಮಾಡಲಾಗಿತ್ತು. ಅವರನ್ನು ಮಾತ್ರವಲ್ಲದೇ ಪಾಕಿಸ್ತಾನದ ಎಲ್ಲ ಕಲಾವಿದರು, ಗಾಯಕರು, ಸಂಗೀತಗಾರರನ್ನು ಬಾಲಿವುಡ್ ಸಿನಿಮಾಗಳಿಂದ ಹೊರಗೆ ಇಡಲಾಗಿತ್ತು. ಆದರೆ ಈಗ ಫವಾದ್ ಖಾನ್ ಅವರಿಗೆ ಮತ್ತೆ ಬಾಲಿವುಡ್ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿದೆ. ಹೊಸ ಸಿನಿಮಾದಲ್ಲಿ ಫವಾದ್ ಖಾನ್ಗೆ ಜೋಡಿಯಾಗಿ ವಾಣಿ ಕಪೂರ್ (Vaani Kapoor) ನಟಿಸುತ್ತಾರೆ ಎಂದು ಸುದ್ದಿ ಆಗಿದೆ.
2016ರಲ್ಲಿ ಉರಿ ಭಯೋತ್ಪಾದಕ ದಾಳಿ ಬಳಿಕ ಪಾಕಿಸ್ತಾನದ ಜೊತೆ ಭಾರತದ ಸಂಬಂಧ ಸಂಪೂರ್ಣ ಹದಗೆಟ್ಟಿತು. ಆ ಘಟನೆ ಬಳಿಕ ಪಾಕಿಸ್ತಾನದ ಯಾರೊಂದಿಗೂ ಸಿನಿಮಾ, ಸೀರಿಯಲ್, ಮ್ಯೂಸಿಕ್ ವಿಡಿಯೋ ಇತ್ಯಾದಿ ಮನರಂಜನಾ ಕಾಂಟೆಂಟ್ ಮಾಡಬಾರದು ಎಂದು ಭಾರತದ ನಿರ್ಮಾಪಕರು ನಿರ್ಧರಿಸಿದರು. ‘ಭಾರತೀಯ ಚಲನಚಿತ್ರ ನಿರ್ಮಾಪಕರ ಸಂಘ’ವು ಪಾಕ್ ಮಂದಿಯ ಜೊತೆ ಕೆಲಸ ಮಾಡುವುದಿಲ್ಲ ಎಂದು ಘೋಷಣೆ ಹೊರಡಿಸಿತ್ತು.
ಆ ಬ್ಯಾನ್ ಬಳಿಕ ಪಾಕಿಸ್ತಾನದ ಸೆಲೆಬ್ರಿಟಿಗಳಾದ ಫವಾದ್ ಖಾನ್, ಮಹೀರಾ ಖಾನ್, ಅತೀಫ್ ಅಸ್ಲಂ, ರಾಹತ್ ಫತೇ ಅಲಿ ಖಾನ್ ಮುಂತಾದವರು ಭಾರತದ ಸಿನಿಮಾಗಳಿಂದ ಹೊರಗೆ ಉಳಿದರು. ಆದರೆ ಕಳೆದ ವರ್ಷ ನವೆಂಬರ್ನಲ್ಲಿ ಈ ಬ್ಯಾನ್ ಸೂಕ್ತವಲ್ಲ ಎಂದು ಭಾರತದ ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ಈ ಹಿನ್ನೆಲೆಯಲ್ಲಿ ಪಾಕಿಸ್ತಾನದ ಕಲಾವಿದರು ಭಾರತದ ಸಿನಿಮಾಗಳಲ್ಲಿ ಮತ್ತೆ ಕೆಲಸ ಮಾಡಲು ಆರಂಭಿಸಿದ್ದಾರೆ.
ಇದನ್ನೂ ಓದಿ: ಶಾರುಖ್, ಆಮಿರ್, ಸಲ್ಲು ಬಗ್ಗೆ ಪಾಕ್ ನಟಿಯ ಹೇಳಿಕೆ ವೈರಲ್; ಏನಿದೆ ಈ ವಿಡಿಯೋದಲ್ಲಿ?
ಸದ್ಯಕ್ಕೆ ಫವಾದ್ ಖಾನ್ ಒಪ್ಪಿಕೊಂಡಿರುವ ಸಿನಿಮಾದ ಬಗ್ಗೆ ಹೆಚ್ಚಿನ ಮಾಹಿತಿ ಹೊರಬಿದ್ದಿಲ್ಲ. ಈ ಚಿತ್ರಕ್ಕೆ ವಾಣಿ ಕಪೂರ್ ನಾಯಕಿ ಎಂಬುದಷ್ಟೇ ಸುದ್ದಿ ಆಗಿದೆ. ಸದ್ಯಕ್ಕೆ ಈ ಸಿನಿಮಾದ ಪ್ರೀ-ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಶೀಘ್ರವೇ ಲಂಡನ್ನಲ್ಲಿ ಈ ಸಿನಿಮಾದ ಚಿತ್ರೀಕರಣ ಆರಂಭ ಆಗಲಿದೆ. 2014ರಲ್ಲಿ ‘ಖೂಬ್ಸೂರತ್’ ಸಿನಿಮಾ ಮೂಲಕ ಫವಾದ್ ಖಾನ್ ಅವರು ಬಾಲಿವುಡ್ಗೆ ಕಾಲಿಟ್ಟಿದ್ದರು. ಬಳಿಕ ‘ಕಪೂರ್ ಆ್ಯಂಡ್ ಸನ್ಸ್’, ‘ಏ ದಿಲ್ ಹೈ ಮುಷ್ಕಿಲ್’ ಚಿತ್ರಗಳಲ್ಲಿ ಅವರು ನಟಿಸಿದರು. ಬ್ಯಾನ್ ಕಾರಣದಿಂದ ಕಳೆದ 8 ವರ್ಷಗಳಿಂದ ಅವರಿಗೆ ಬಾಲಿವುಡ್ನಲ್ಲಿ ಯಾವುದೇ ಅವಕಾಶ ಸಿಕ್ಕಿರಲಿಲ್ಲ. ಆದರೆ ಈಗ ಮತ್ತೆ ಹೊಸ ಸಿನಿಮಾಗೆ ಅವರು ಸಹಿ ಮಾಡಿದ್ದಾರೆ ಎಂದು ‘ಫಿಲ್ಮ್ಫೇರ್’ ವರದಿ ಮಾಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.