
ಪ್ರಭಾಸ್ ನಟನೆಯ ‘ಸಲಾರ್‘ (Salaar) ಸಿನಿಮಾ ಭಾರತದ ಅತಿ ಹೆಚ್ಚು ನಿರೀಕ್ಷೆಯುಳ್ಳ ಸಿನಿಮಾ. ಮೂರು ವರ್ಷಗಳ ಕಾಲ ಸತತವಾಗಿ ಈ ಸಿನಿಮಾದ ಚಿತ್ರೀಕರಣ ನಡೆದಿದ್ದು, ಕೊನೆಗೂ ಸಿನಿಮಾದ ಬಿಡುಗಡೆಯ ಅಂತಿಮ ದಿನಾಂಕ ಘೋಷಣೆ ಆಗಿದೆ. ಡಿಸೆಂಬರ್ 22 ರಂದು ಸಿನಿಮಾ ಬಿಡುಗಡೆ ಆಗಲಿದ್ದು, ಸಿನಿಮಾದ ಪ್ರಚಾರ ಕಾರ್ಯವನ್ನು ಚಿತ್ರತಂಡ ಇನ್ನಷ್ಟೆ ಆರಂಭಿಸಬೇಕಿದೆ. ಆದರೆ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ (Social Media) ಸಿನಿಮಾದ ಪ್ರಚಾರವನ್ನು ಜೋರಾಗಿಯೇ ಮಾಡುತ್ತಿದ್ದಾರೆ. ವಿಶೇಷವೆಂದರೆ ‘ಸಲಾರ್’ ಸಿನಿಮಾದ ಪ್ರಚಾರಕ್ಕೆ ನರೇಂದ್ರ ಮೋದಿಯ ‘ಬಲ’ವೂ ದೊರೆತಿದೆ.
ಹೌದು, ಸಾಮಾಜಿಕ ಈಗಾಗಲೇ ‘ಸಲಾರ್’ ಸಿನಿಮಾದ ಟೀಸರ್ ಸದ್ದು ಮಾಡುತ್ತಿದೆ. ಜೊತೆಗೆ ಕೆಲವು ಸಣ್ಣ ದೃಶ್ಯದ ತುಣುಕುಗಳು ಸಹ ಹರಿದಾಡುತ್ತಿವೆ. ‘ಸಲಾರ್’ನ ದೃಶ್ಯದ ತುಣುಕುಗಳಿಗೆ ಪ್ರಧಾನಿ ನರೇಂದ್ರ ಮೋದಿಯವರ ಧ್ವನಿ ಬಳಸಿಕೊಳ್ಳಲಾಗುತ್ತಿದೆ. ನರೇಂದ್ರ ಮೋದಿ ಅವರ ಧ್ವನಿಯಲ್ಲಿ ‘ಸಲಾರ್’ ಸಿನಿಮಾದ ಟೀಸರ್ ಹಾಗೂ ಇನ್ನಿತರೆ ವಿಡಿಯೋಗಳನ್ನು ಮರುಸೃಷ್ಠಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ವಿಡಿಯೋಗಳು ಸಖತ್ ವೈರಲ್ ಸಹ ಆಗುತ್ತಿವೆ.
ಕೆಲ ತಿಂಗಳ ಹಿಂದೆ ಬಿಡುಗಡೆ ಆಗಿದ್ದ ‘ಸಲಾರ್’ ಸಿನಿಮಾದ ಟೀಸರ್ನಲ್ಲಿ ನಟ ಟೀನು ಆನಂದ್, ‘ಸಲಾರ್’ ಕುರಿತು ವರ್ಣಿಸುವ ಸಂಭಾಷಣೆಯೊಂದಿತ್ತು, ಆ ಸಂಭಾಷಣೆ ಸಖತ್ ವೈರಲ್ ಆಗಿತ್ತು, ಅದೇ ಸಂಭಾಷಣೆಯನ್ನು ಮೋದಿ ಹೇಳಿದ ರೀತಿಯಲ್ಲಿ ಬದಲಾಯಿಸಿ ವಿಡಿಯೋಗಳನ್ನು ಪ್ರಭಾಸ್ ಅಭಿಮಾನಿಗಳು ಹಂಚಿಕೊಳ್ಳುತ್ತಿದ್ದಾರೆ. ಮೋದಿ ಧ್ವನಿಯಲ್ಲಿ ಸಲಾರ್ ಡೈಲಾಗ್ ಸಖತ್ ಆಗಿಯೇ ಕೇಳಿಸುತ್ತಿದೆ.
ಇದನ್ನೂ ಓದಿ:‘ಸಲಾರ್’ ಟ್ರೇಲರ್ ರಿಲೀಸ್ ದಿನಾಂಕದಲ್ಲಿಲ್ಲ ಬದಲಾವಣೆ; ರಿವೀಲ್ ಆಗಲಿದೆ ದೊಡ್ಡ ವಿಚಾರ?
ಹಾಡು, ಸಿನಿಮಾ ಸಂಭಾಷಣೆಗಳಿಗೆ ನರೇಂದ್ರ ಮೋದಿಯವರ ಧ್ವನಿ ಬಳಸಿಕೊಳ್ಳುವ ಪರಿಪಾಠ ಹೆಚ್ಚಾಗುತ್ತಿದೆ. ಹಲವು ಜನಪ್ರಿಯ ಹಾಡುಗಳಿಗೆ ನರೇಂದ್ರ ಮೋದಿಯವರ ಧ್ವನಿ ಅಳವಡಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಕನ್ನಡದ ‘ಖರಾಬು ಬಾಸು ಖರಾಬು’ ಹಾಡು ಸೇರಿದಂತೆ ಇನ್ನೂ ಹಲವು ಮಾಸ್ ಹಾಡುಗಳಿಗೆ ಸಹ ನರೇಂದ್ರ ಮೋದಿಯವರ ಧ್ವನಿ ಬಳಸಲಾಗಿದೆ. ಅಪ್ಲಿಕೇಶನ್ ಒಂದನ್ನು ಬಳಸಿ ಯುವಕರು ಹೀಗೆ ಹಾಡುಗಳನ್ನು ತಿರುಚುತ್ತಿದ್ದಾರೆ.
‘ಸಲಾರ್’ ವಿಷಯಕ್ಕೆ ಮರಳುವುದಾದರೆ ಈ ಸಿನಿಮಾದ ಪ್ರಭಾಸ್ ನಟಿಸಿರುವ ಈ ಸಿನಿಮಾ ಎರಡು ಭಾಗಗಳಲ್ಲಿ ಬಿಡುಗಡೆ ಆಗುತ್ತಿದ್ದು, ಮೊದಲ ಭಾಗ ಡಿಸೆಂಬರ್ 22 ಕ್ಕೆ ತೆರೆಗೆ ಬರಲಿದೆ. ಸಿನಿಮಾದಲ್ಲಿ ಪ್ರಭಾಸ್ ಜೊತೆಗೆ ಮಲಯಾಳಂನ ಸೂಪರ್ ಸ್ಟಾರ್ ಪೃಥ್ವಿರಾಜ್ ಸುಕುಮಾರ್ ನಟಿಸಿದ್ದಾರೆ. ಶೃತಿ ಹಾಸನ್ ನಾಯಕಿ, ಕನ್ನಡದ ಮಧು ಸ್ವಾಮಿ, ಪಂಜು, ಜಗಪತಿ ಬಾಬು ಇನ್ನೂ ಹಲವರು ನಟಿಸಿದ್ದಾರೆ. ಸಿನಿಮಾವನ್ನು ಪ್ರಶಾಂತ್ ನೀಲ್ ನಿರ್ದೇಶಿಸಿದ್ದರೆ, ಸಂಗೀತ ನೀಡಿರುವುದು ರವಿ ಬಸ್ರೂರು, ಕ್ಯಾಮೆರಾ ಕೆಲಸ ಭುವನ್ ಗೌಡ ಅವರದ್ದು, ನಿರ್ಮಾಣ ಮಾಡಿರುವುದು ಹೊಂಬಾಳೆ ಫಿಲಮ್ಸ್.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ