ಕೊವಿಡ್ ಕಾರಣದಿಂದ ಚಿತ್ರರಂಗಕ್ಕೆ ಸಾಕಷ್ಟು ನಷ್ಟ ಆಗಿತ್ತು. ಹಲವು ತಿಂಗಳ ಕಾಲ ಸಿನಿಮಾ ಚಟುವಟಿಕೆಗಳು ನಿಂತುಹೋಗಿದ್ದವು. ಈಗ ಮತ್ತೆ ಅನೇಕ ಸಮಸ್ಯೆಗಳು ಕಾಡುತ್ತಿವೆ. ಅವುಗಳಿಗೆಲ್ಲ ಪರಿಹಾರ ಕಂಡುಕೊಳ್ಳಲು ತೆಲುಗು ಸಿನಿಮಾ (Telugu Film Industry) ನಿರ್ಮಾಪಕರ ಸಂಘದವರು ನಿರ್ಧರಿಸಿದ್ದಾರೆ. ಆಗಸ್ಟ್ 1ರಿಂದ ಯಾವುದೇ ಸಿನಿಮಾದ ಶೂಟಿಂಗ್ ಮಾಡದಂತೆ ತೀರ್ಮಾನಿಸಲಾಗಿದೆ. ಈ ಬಗ್ಗೆ ಸಂಘದ ವತಿಯಿಂದ ಅಧಿಕೃತವಾಗಿ ಪ್ರಕಟಣೆ ಹೊರಡಿಸಲಾಗಿದೆ. ಇದರಿಂದ ಅನೇಕ ಬಹುನಿರಿಕ್ಷಿತ ಸಿನಿಮಾಗಳ ಚಿತ್ರೀಕರಣ ಕೂಡ ನಿಲ್ಲುವ ಸಾಧ್ಯತೆ ದಟ್ಟವಾಗಿದೆ. ಪ್ರಭಾಸ್ (Prabhas) ನಟನೆಯ ‘ಸಲಾರ್’, ಮಹೇಶ್ ಬಾಬು ನಟನೆಯ ಹೊಸ ಚಿತ್ರ ಸೇರಿದಂತೆ ಹಲವು ಸಿನಿಮಾಗಳ ಶೂಟಿಂಗ್ ಸ್ಥಗಿತಗೊಳ್ಳುವ ಬಗ್ಗೆ ಟಾಲಿವುಡ್ (Tollywood) ಅಂಗಳದಿಂದ ಸುದ್ದಿ ಕೇಳಿಬಂದಿದೆ.
ಸದ್ಯಕ್ಕೆ ಬಾಕ್ಸ್ ಆಫೀಸ್ನಲ್ಲಿ ಗೆಲ್ಲುತ್ತಿರುವ ಸಿನಿಮಾಗಳ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ. ಇದು ಟಾಲಿವುಡ್ ನಿರ್ಮಾಪಕರ ಚಿಂತೆಗೆ ಕಾರಣ ಆಗಿದೆ. ಕೊವಿಡ್ ಬಳಿಕ ಚಿತ್ರರಂಗದಲ್ಲಿ ನಿರ್ಮಾಣದ ವೆಚ್ಚ ಜಾಸ್ತಿ ಆಗಿದೆ. ಟಿಕೆಟ್ ಬೆಲೆಗಳು ಸಹ ದುಬಾರಿ ಆಗಿವೆ. ಇದರಿಂದ ನಿರ್ಮಾಪಕರಿಗೆ ಮತ್ತು ಪ್ರೇಕ್ಷಕರಿಗೆ ಹೊರೆ ಆಗುತ್ತಿದೆ. ಆ ಕಾರಣದಿಂದಲೇ ಚಿತ್ರಮಂದಿರಕ್ಕೆ ಜನರು ಬರುತ್ತಿಲ್ಲ ಎಂಬ ವಾದ ಇದೆ.
ತೆಲುಗು ಚಿತ್ರರಂಗದಲ್ಲಿ ನಿರ್ಮಾಪಕರು ಹಲವು ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ಟಾಲಿವುಡ್ನ ಪ್ರಮುಖರೆಲ್ಲರೂ ಸಭೆ ಸೇರಿ ಈ ಬಗ್ಗೆ ಚರ್ಚೆ ಮಾಡಬೇಕು. ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳಬೇಕು. ಅಲ್ಲಿಯವರೆಗೂ ಯಾವುದೇ ಸಿನಿಮಾಗಳ ಶೂಟಿಂಗ್ ಮಾಡದಿರಲು ನಿರ್ಮಾಪಕರ ಸಂಘದವರು ನಿರ್ಧರಿಸಿದ್ದಾರೆ. ಇದರಿಂದಾಗಿ ಕೆಲವು ಬಹುನಿರೀಕ್ಷಿತ ಸಿನಿಮಾಗಳ ಚಿತ್ರೀಕರಣ ಸಾಕಷ್ಟು ವಿಳಂಬ ಆಗುವ ಸಾಧ್ಯತೆ ಹೆಚ್ಚಾಗಿದೆ.
ಪ್ರಭಾಸ್ ನಟನೆಯ ‘ಸಲಾರ್’ ಚಿತ್ರಕ್ಕೆ ಶೂಟಿಂಗ್ ನಡೆಯುತ್ತಿದೆ. ಈ ಸಿನಿಮಾದ ಕೆಲಸಗಳು ಬೇಗ ಮುಗಿಯಲಿ ಎಂದು ಅಭಿಮಾನಿಗಳು ಅಪೇಕ್ಷಿಸುತ್ತಿದ್ದಾರೆ. ಅಲ್ಲು ಅರ್ಜುನ್ ಅವರು ಆದಷ್ಟು ಬೇಗ ‘ಪುಷ್ಪ 2’ ಶೂಟಿಂಗ್ ಆರಂಭಿಸಲಿ ಎಂದು ಸಿನಿಪ್ರಿಯರು ಹಂಬಲಿಸುತ್ತಿದ್ದಾರೆ. ಮಹೇಶ್ ಬಾಬು, ಜ್ಯೂ. ಎನ್ಟಿಆರ್ ಮುಂತಾದ ಸ್ಟಾರ್ ನಟರ ಹೊಸ ಸಿನಿಮಾಗಳು ಕೂಡ ಚಿತ್ರೀಕರಣಕ್ಕೆ ಸಕಲ ತಯಾರಿ ಮಾಡಿಕೊಂಡಿವೆ. ಆದರೆ ಈ ಸಂದರ್ಭದಲ್ಲಿ ನಿರ್ಮಾಪಕರ ಸಂಘದವರು ಮುಷ್ಕರ ಹೂಡಿರುವುದರಿಂದ ತೆಲುಗು ಚಿತ್ರರಂಗದಲ್ಲಿ ಗೊಂದಲದ ವಾತಾವರಣ ನಿರ್ಮಾಣ ಆಗಿದೆ. ಎಲ್ಲ ಸಮಸ್ಯೆಗಳಿಗೆ ಆದಷ್ಟು ಬೇಗ ಪರಿಹಾರ ಸಿಗಲಿ ಎಂದು ಸಿನಿಪ್ರಿಯರು ಆಶಿಸುತ್ತಿದ್ದಾರೆ.
Published On - 8:05 am, Wed, 27 July 22