Salman Khan: ರಾಧೆ ಚಿತ್ರಕ್ಕೆ 21 ಕಡೆ ಕತ್ತರಿ; ಸಲ್ಮಾನ್ ಖಾನ್ ಸಿನಿಮಾದಲ್ಲಿ ಅಂಥದ್ದೇನಿದೆ?
Radhe: ಸೆನ್ಸಾರ್ ಮಂಡಳಿಯಿಂದ ಆಕ್ಷೇಪ ಎದುರಾದಾಗ ಚಿತ್ರತಂಡದವರು ತಮ್ಮ ಸಿನಿಮಾದ ದೃಶ್ಯಗಳಿಗೆ ಕತ್ತರಿ ಹಾಕುವುದು ಸಹಜ. ಆದರೆ ರಾಧೆ ವಿಚಾರದಲ್ಲಿ ಆಗಿರುವುದು ಬೇರೆ.
ಸಲ್ಮಾನ್ ಖಾನ್ ನಟನೆಯ ‘ರಾಧೆ: ಯುವರ್ ಮೋಸ್ಟ್ ವಾಂಟೆಡ್ ಭಾಯ್’ ಸಿನಿಮಾ ಹತ್ತು ಹಲವು ಕಾರಣಗಳಿಗಾಗಿ ಸುದ್ದಿ ಮಾಡುತ್ತಿದೆ. ಇನ್ನೇನು ಕೆಲವೇ ದಿನಗಳಲ್ಲಿ, ಅಂದರೆ ಮೇ 13ರಂದು ಈ ಚಿತ್ರ ಬಿಡುಗಡೆ ಆಗಲಿದೆ. ಕೆಲವು ಚಿತ್ರಮಂದಿರ ಮತ್ತು ಓಟಿಟಿ ಪ್ಲಾಟ್ಫಾರ್ಮ್ಗಳಲ್ಲಿ ನೇರವಾಗಿ ರಾಧೆ ತೆರೆಕಾಣಲಿದೆ. ಬಿಡುಗಡೆಗೂ ಮುನ್ನ ಒಂದು ಅಚ್ಚರಿಯ ವಿಚಾರ ಹೊರಬಿದ್ದಿದೆ. ಚಿತ್ರಕ್ಕೆ ಸೆನ್ಸಾರ್ ಪ್ರಕ್ರಿಯೆ ಮುಗಿದ ನಂತರವೂ ಬರೋಬ್ಬರಿ 21 ಕಡೆ ಕತ್ತರಿ ಹಾಕಲಾಗಿದೆ ಎಂಬ ಮಾಹಿತಿ ಕೇಳಿಬಂದಿದೆ.
ಸೆನ್ಸಾರ್ ಮಂಡಳಿಯಿಂದ ಆಕ್ಷೇಪ ಎದುರಾದಾಗ ಚಿತ್ರತಂಡದವರು ತಮ್ಮ ಸಿನಿಮಾದ ದೃಶ್ಯಗಳಿಗೆ ಕತ್ತರಿ ಹಾಕುವುದು ಸಹಜ. ಆದರೆ ರಾಧೆ ವಿಚಾರದಲ್ಲಿ ಆಗಿರುವುದು ಬೇರೆ. ಸೆನ್ಸಾರ್ನವರು ಏನೂ ಹೇಳದಿದ್ದರೂ ಕೂಡ ಚಿತ್ರತಂಡ 21 ಕಡೆಗಳಲ್ಲಿ ಕತ್ತರಿ ಪ್ರಯೋಗ ಮಾಡಿದೆ. ಈ ಬಗ್ಗೆ ತಂಡದಿಂದ ಯಾವುದೇ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲವಾದರೂ ಬಿ-ಟೌನ್ನಲ್ಲಿ ಸುದ್ದಿ ಹರಿದಾಡುತ್ತಿರುವುದು ನಿಜ.
ಅಷ್ಟಕ್ಕೂ ರಾಧೆ ತಂಡ ಯಾಕೆ ಇಂಥ ನಿರ್ಧಾರ ತೆಗೆದುಕೊಂಡಿದೆ? ಕಾರಣ ಇಷ್ಟೇ; ಈ ಸಿನಿಮಾ ಓಟಿಟಿ ಪ್ಲಾಟ್ಫಾರ್ಮ್ ಮತ್ತು ಡಿ2ಎಚ್ ಸೇವೆಗಳ ಮೂಲಕ ಮನೆಮನೆಗೆ ತಲುಪಲಿದೆ. ಸಲ್ಮಾನ್ ಖಾನ್ ಅಭಿಮಾನಿಗಳು ಮನೆಯಲ್ಲಿ ಕುಟುಂಬ ಸಮೇತರಾಗಿ ಸಿನಿಮಾ ನೋಡಲಿದ್ದಾರೆ. ಅಂಥ ಪ್ರೇಕ್ಷಕರಿಗೆ ಮುಜುಗರ ಅಥವಾ ಕಿರಿಕಿರಿ ಆಗಬಾರದು ಎಂಬ ಕಾರಣಕ್ಕೆ ಹಲವು ಶಾಟ್ಗಳನ್ನು ಕತ್ತರಿಸಲಾಗಿದೆ.
ಈ ಸಿನಿಮಾದಲ್ಲಿ ಡ್ರಗ್ಸ್ ಪಿಡುಗಿನ ಕುರಿತು ಹೇಳಲಾಗಿದೆ. ಚಿಕ್ಕ ಹುಡುಗರು ಮಾದಕ ವಸ್ತು ಸೇವಿಸುತ್ತಿರುವ ಶಾಟ್ಗೆ ಕತ್ತರಿ ಹಾಕಲಾಗಿದೆ. ಯಾಕೆಂದರೆ, ಈ ದೃಶ್ಯಗಳಿಂದ ಯುವ ಜನತೆ ಪ್ರೇರೇಪಿತರಾಗಬಾರದು ಎಂಬುದು ರಾಧೆ ತಂಡದ ಉದ್ದೇಶ. ಅಲ್ಲದೆ, ಕೆಲವು ಆ್ಯಕ್ಷನ್ ದೃಶ್ಯಗಳನ್ನೂ ಕಟ್ ಮಾಡಲಾಗಿದೆ. ಫ್ಯಾಮಿಲಿ ಪ್ರೇಕ್ಷಕರಿಗೆ ಅವುಗಳನ್ನು ನೋಡಲು ತುಂಬ ಕ್ರೂರ ಎನಿಸಬಹುದು ಎಂಬುದು ಚಿತ್ರತಂಡ ಅಭಿಪ್ರಾಯ. ಹಾಗಾಗಿ ಅವುಗಳನ್ನು ತೆಗೆಯಲಾಗಿದೆ.
ಈ ಎಲ್ಲ ಕತ್ತರಿ ಪ್ರಯೋಗ ಮಾಡಿದ ಮೇಲೆ ಚಿತ್ರದ ಅವಧಿ 114 ನಿಮಿಷ ಆಗಿದೆಯಂತೆ. ಆ ಮೂಲಕ ಇದು ಸಲ್ಮಾನ್ ಖಾನ್ ವೃತ್ತಿಜೀವನದ ಇತಿಹಾಸದಲ್ಲೇ ಅತಿ ಚಿಕ್ಕ ಸಿನಿಮಾ ಎನಿಸಿಕೊಳ್ಳುತ್ತಿದೆ. ಇದರಲ್ಲಿ ಸಲ್ಲುಗೆ ಜೋಡಿಯಾಗಿ ದಿಶಾ ಪಠಾಣಿ ಅಭಿನಯಿಸಿದ್ದಾರೆ. ಪ್ರಭುದೇವ ಆ್ಯಕ್ಷನ್-ಕಟ್ ಹೇಳಿದ್ದಾರೆ. ಜಾಕಿ ಶ್ರಾಫ್, ರಣದೀಪ್ ಹೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ:
Salman Khan: ಟೈಗರ್ ಶ್ರಾಫ್ ಪ್ರೇಯಸಿ ದಿಶಾಗೆ ಸಲ್ಮಾನ್ ಕಿಸ್ ಮಾಡಿದ್ದು ನಿಜ; ಆದರೆ ಇಲ್ಲಿದೆ ಟ್ವಿಸ್ಟ್
Salman Khan: ಸಲ್ಮಾನ್ ಖಾನ್ ವಿರುದ್ಧ ತಿರುಗಿ ಬಿದ್ದ ಸುಶಾಂತ್ ಫ್ಯಾನ್ಸ್; ‘ರಾಧೆ’ ಬಹಿಷ್ಕಾರ ಮಾಡಲು ಶಪಥ