ಸಲ್ಮಾನ್ ಖಾನ್ ಸಖತ್ ಟ್ರೋಲ್, ಕಾರಣ ರಶ್ಮಿಕಾ ಮಂದಣ್ಣ
Salman Khan: ಬಾಲಿವುಡ್ ಸ್ಟಾರ್ ನಟ ಸಲ್ಮಾನ್ ಖಾನ್ ಆಗಾಗ್ಗೆ ಬೇರೆ ಬೇರೆ ಕಾರಣಕ್ಕೆ ಚರ್ಚೆಯಲ್ಲಿರುತ್ತಾರೆ. ಈಗ ಸಲ್ಮಾನ್ ಖಾನ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ಟ್ರೋಲ್ ಆಗುತ್ತಿದ್ದಾರೆ. ಅದಕ್ಕೆ ರಶ್ಮಿಕಾ ಮಂದಣ್ಣ ಕಾರಣ.
ಸಲ್ಮಾನ್ ಖಾನ್ (Salman Khan) ಕುರಿತಂತೆ ಹಲವು ಮೀಮ್ಗಳು, ಜೋಕ್ಗಳು ಅಂತರ್ಜಾಲದಲ್ಲಿ ಈಗಾಗಲೇ ಇವೆ. ಸಲ್ಮಾನ್ ಖಾನ್ರನ್ನು ಬೇರೆ ಬೇರೆ ಕಾರಣಗಿಂದ ಟ್ರೋಲ್ ಮಾಡುತ್ತಲೇ ಬರಲಾಗುತ್ತಿದೆ. ಇದೀಗ ಹೊಸ ಕಾರಣವೊಂದಕ್ಕೆ ಸಲ್ಮಾನ್ ಖಾನ್ ಟ್ರೋಲ್ ಆಗುತ್ತಿದ್ದಾರೆ. ಆದರೆ ಈ ಬಾರಿ ಸಲ್ಮಾನ್ ಖಾನ್ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗಲು ಪರೋಕ್ಷವಾಗಿ ಕರ್ನಾಟಕ ಮೂಲದ ನಟಿ ರಶ್ಮಿಕಾ ಮಂದಣ್ಣ ಪ್ರಮುಖ ಕಾರಣವಾಗಿದ್ದಾರೆ.
ಕೆಲವು ದಿನಗಳ ಹಿಂದಷ್ಟೆ, ರಶ್ಮಿಕಾ ಮಂದಣ್ಣ ಹಾಗೂ ಸಲ್ಮಾನ್ ಖಾನ್ ಸಿನಿಮಾ ಒಂದರಲ್ಲಿ ಒಟ್ಟಿಗೆ ನಟಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಸ್ವತಃ ರಶ್ಮಿಕಾ ಮಂದಣ್ಣ ಸಹ ಸಾಮಾಜಿಕ ಜಾಲತಾಣದಲ್ಲಿ ಈ ಸುದ್ದಿ ಹಂಚಿಕೊಂಡಿದ್ದರು. ಸಲ್ಮಾನ್ ಖಾನ್ ಜೊತೆಗೆ ತೆರೆ ಹಂಚಿಕೊಳ್ಳುತ್ತಿರುವುದಕ್ಕೆ ಖುಷಿಯಾಗುತ್ತಿದೆ ಎಂದು ಸಹ ಹೇಳಿದ್ದರು. ಆದರೆ ಈಗ ಇದೇ ಕಾರಣಕ್ಕೆ ಸಲ್ಮಾನ್ ಖಾನ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಗಿ ಟ್ರೋಲ್ ಆಗುತ್ತಿದ್ದಾರೆ.
‘ಸಿಖಂದರ್’ ಸಿನಿಮಾನಲ್ಲಿ ರಶ್ಮಿಕಾ ಮಂದಣ್ಣ ಹಾಗೂ ಸಲ್ಮಾನ್ ಖಾನ್ ಇಬ್ಬರೂ ಒಟ್ಟಿಗೆ ನಟಿಸುತ್ತಿದ್ದಾರೆ. ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ, ಸಲ್ಮಾನ್ ಖಾನ್ ಎದುರು ನಾಯಕಿ. ಈಗ ಸಲ್ಮಾನ್ ಖಾನ್ ಹಾಗೂ ರಶ್ಮಿಕಾ ಮಂದಣ್ಣ ನಡುವಿನ ವಯಸ್ಸಿನ ಅಂತರವನ್ನಿಟ್ಟುಕೊಂಡು ಸಲ್ಮಾನ್ ಖಾನ್ ಅನ್ನು ಟ್ರೋಲ್ ಮಾಡಲಾಗುತ್ತಿದೆ.
ಇದನ್ನೂ ಓದಿ:‘ಸಿಕಂದರ್’ ಮಾತ್ರವಲ್ಲ, ರಶ್ಮಿಕಾ ಮಂದಣ್ಣ ಕೈಯಲ್ಲಿವೆ 5 ಹೈವೋಲ್ಟೇಜ್ ಸಿನಿಮಾಗಳು
ಸಲ್ಮಾನ್ ಖಾನ್ ವಯಸ್ಸು ಈಗ 58, ರಶ್ಮಿಕಾ ಮಂದಣ್ಣ ವಯಸ್ಸು 28 ವರ್ಷ. ಸಲ್ಮಾನ್ ಖಾನ್ ಹಾಗೂ ರಶ್ಮಿಕಾ ಮಂದಣ್ಣ ನಡುವಿನ ವಯಸ್ಸಿನ ಅಂತರ ಬರೋಬ್ಬರಿ 31 ವರ್ಷಗಳು. ಸಲ್ಮಾನ್ ಖಾನ್ ಇಷ್ಟು ಚಿಕ್ಕ ವಯಸ್ಸಿನ ನಟಿಯೊಟ್ಟಿಗೆ ರೊಮ್ಯಾನ್ಸ್ ಮಾಡುತ್ತಿದ್ದಾರೆ ಎಂದು ಹಲವರು ಟ್ವಿಟ್ಟರ್, ಫೇಸ್ಬುಕ್ಗಳಲ್ಲಿ ಆಡಿಕೊಂಡಿದ್ದಾರೆ. ಈ ಹಿಂದೆ ಸಲ್ಮಾನ್ ಖಾನ್ ‘ಕಿಸಿ ಕಿ ಭಾಯ್ ಕಿಸಿ ಕಿ ಜಾನ್’ ಸಿನಿಮಾ ಮಾಡಿದಾಗಲೂ ಸಹ ಪೂಜಾ ಹೆಗ್ಡೆಯನ್ನು ನಾಯಕಿಯನ್ನಾಗಿ ಹಾಕಿಕೊಂಡಿದ್ದಕ್ಕೆ ಇದೇ ಟೀಕೆ ಎದುರಿಸಿದ್ದರು.
‘ಸಿಖಂಧರ್’ ಸಿನಿಮಾವನ್ನು ತಮಿಳಿನ ಜನಪ್ರಿಯ ನಿರ್ದೇಶಕ ಎಆರ್ ಮುರುಗದಾಸ್ ನಿರ್ದೇಶನ ಮಾಡಲಿದ್ದಾರೆ. ಸಿನಿಮಾಕ್ಕೆ ಸಲ್ಮಾನ್ ಖಾನ್ರ ಆತ್ಮೀಯ ಗೆಳೆಯ ಸಾಜಿದ್ ನಾಡಿಯಾವಾಲ ಬಂಡವಾಳ ಹೂಡಿದ್ದಾರೆ. ಸಿನಿಮಾವು ಆಕ್ಷನ್ ಥ್ರಿಲ್ಲರ್ ಆಗಿರಲಿದ್ದು, ರಶ್ಮಿಕಾ ಮಂದಣ್ಣ ದಕ್ಷಿಣ ಭಾರತದ ಯುವತಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ