ತಮಿಳುನಾಡು ಸಿಎಂ ದಳಪತಿ ವಿಜಯ್ ಭೇಟಿಯಾದ ನಟಿ ಸಮಂತಾ ರುತ್ ಪ್ರಭು
ಸಮಂತಾ ರುತ್ ಪ್ರಭು ಅವರು ತಮ್ಮ ಮುಂಬರುವ ಬಹುನಿರೀಕ್ಷಿತ ‘ಮಾ ಇಂಟಿ ಬಂಗಾರಂ’ ಚಿತ್ರದ ಪ್ರಚಾರಕ್ಕಾಗಿ ಚೆನ್ನೈಗೆ ಆಗಮಿಸಿದ್ದರು. ಈ ವೇಳೆ ಅವರು ಮುಖ್ಯಮಂತ್ರಿ ವಿಜಯ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಈ ಸಂದರ್ಭದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಬಹಳ ಖುಷಿಯಿಂದ ಅವರು ಪೋಸ್ಟ್ ಮಾಡಿದ್ದಾರೆ.

ಬಹುಭಾಷಾ ನಟಿ ಸಮಂತಾ ರುತ್ ಪ್ರಭು (Samantha) ಅವರು ಬುಧವಾರ (ಜೂನ್ 17) ಚೆನ್ನೈನಲ್ಲಿ ತಮಿಳುನಾಡಿನ ನೂತನ ಮುಖ್ಯಮಂತ್ರಿ ದಳಪತಿ ವಿಜಯ್ ಅವರನ್ನು ಭೇಟಿಯಾಗಿದ್ದಾರೆ. ಇತ್ತೀಚೆಗಷ್ಟೇ ರಾಜಕೀಯ ರಂಗ ಪ್ರವೇಶಿಸಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ವಿಜಯ್ (CM Vijay) ಅವರನ್ನು ಭೇಟಿ ಮಾಡಿದ ಫೋಟೋಗಳನ್ನು ಸಮಂತಾ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ಅವರ ಬಗ್ಗೆ ದೀರ್ಘವಾದ ಪೋಸ್ಟ್ ಬರೆದುಕೊಂಡಿದ್ದಾರೆ. ‘ಮಾ ಇಂಟಿ ಬಂಗಾರಂ’ (Maa Inti Bangaram) ಸಿನಿಮಾದ ಪ್ರಚಾರ ಕಾರ್ಯಗಳ ನಡುವೆ ಅವರು ಈ ಭೇಟಿ ಮಾಡಿದ್ದಾರೆ.
ವಿಜಯ್ ಅವರೊಂದಿಗೆ ಇರುವ ಎರಡು ಸುಂದರ ಫೋಟೋಗಳನ್ನು ಹಂಚಿಕೊಂಡಿರುವ ಸಮಂತಾ, ತಮಿಳುನಾಡಿನ ಮುಖ್ಯಮಂತ್ರಿಯಾಗಿ ಸಿನಿಮಾ ರಂಗದ ತಮ್ಮ ಹಳೆಯ ಸಹ-ನಟನನ್ನು ನೋಡಿದಾಗ ಆದ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ. ‘ಇಂದು ನಾನು ಚೆನ್ನೈನಲ್ಲಿ ಕಾಲಿಟ್ಟಾಗ ಮನಸ್ಸಿನಲ್ಲಿ ಅಪಾರ ಸಂತೋಷ ಮೂಡಿತು. ನಾನು ನಮ್ಮ ಮುಖ್ಯಮಂತ್ರಿಗಳನ್ನು ಭೇಟಿಯಾಗಲು ಹೊರಟಿದ್ದೆ. ವಿಜಯ್ ಸರ್ ಕೇವಲ ಬೆಳ್ಳಿಪರದೆಯ ಮೇಲಿನ ಹೀರೋ ಆಗಿರಲು ಮಾತ್ರ ಸೀಮಿತವಲ್ಲ ಎಂದು ನನಗೆ ಯಾವಾಗಲೂ ಅನಿಸುತ್ತಿತ್ತು. ಅವರ ಎನರ್ಜಿ, ಅವರ ವ್ಯಕ್ತಿತ್ವ ಮತ್ತು ಅವರ ಪರವಾಗಿ ಜನರು ತೋರುವ ಪ್ರೀತಿಯನ್ನು ನೋಡಿದಾಗ, ಅವರು ಇದಕ್ಕಿಂತ ದೊಡ್ಡ ಸಾಧನೆಗಾಗಿಯೇ ಬಂದಿದ್ದಾರೆ ಅಂತ ಭಾವಿಸಿದ್ದೆ’ ಎಂದು ಸಮಂತಾ ಬರೆದಿದ್ದಾರೆ.
View this post on Instagram
‘ತಾವು ಈಗಾಗಲೇ ಸಂಪೂರ್ಣ ಹಿಡಿತ ಸಾಧಿಸಿರುವ, ಉತ್ತುಂಗದಲ್ಲಿರುವ ಕ್ಷೇತ್ರವನ್ನು (ಸಿನಿಮಾ ರಂಗ) ಬಿಟ್ಟು, ತಮಗೆ ಹೊಸದಾದ, ದೊಡ್ಡ ಸವಾಲುಗಳು ಹಾಗೂ ಜವಾಬ್ದಾರಿಗಳಿರುವ ರಾಜಕೀಯ ರಂಗಕ್ಕೆ ಕಾಲಿಡಲು ಬಹಳ ಧೈರ್ಯ ಬೇಕು. ವಿಜಯ್ ಸರ್ ಆ ಧೈರ್ಯ ತೋರಿದ್ದಾರೆ. ಅವರು ಕೇವಲ ಒಂದು ಹುದ್ದೆಯಲ್ಲಿದ್ದಾರೆ ಎನ್ನುವುದಕ್ಕಿಂತ, ಅವರು ಯಾವ ಉದಾತ್ತ ಉದ್ದೇಶದಿಂದ ಈ ಕ್ಷೇತ್ರಕ್ಕೆ ಬಂದಿದ್ದಾರೆ ಎನ್ನುವುದು ಮುಖ್ಯ. ಅವರು ಇದಕ್ಕಿಂತಲೂ ಹೆಚ್ಚಿನದಾಗಿ ಎಲ್ಲರನ್ನೂ ಆಶ್ಚರ್ಯಗೊಳಿಸಲಿದ್ದಾರೆ ಎನ್ನುವ ನಂಬಿಕೆ ನನಗಿದೆ’ ಎಂದು ವಿಜಯ್ ಅವರ ರಾಜಕೀಯ ಯಾನಕ್ಕೆ ಸಮಂತಾ ಶುಭ ಕೋರಿದ್ದಾರೆ.
ಸಿನಿಮಾ ರಂಗದಿಂದ ಬಂದು ತಮಿಳುನಾಡು ರಾಜಕೀಯದಲ್ಲಿ ಇತಿಹಾಸ ಸೃಷ್ಟಿಸಿದ ಎನ್.ಟಿ. ರಾಮರಾವ್, ಎಂ.ಜಿ. ರಾಮಚಂದ್ರನ್ ಹಾಗೂ ಜೆ. ಜಯಲಲಿತಾ ಅವರ ಸಾಲಿಗೆ ನಟ ವಿಜಯ್ ಕೂಡ ಸೇರ್ಪಡೆಯಾಗಿದ್ದಾರೆ. 2024ರ ಫೆಬ್ರವರಿಯಲ್ಲಿ ತಮ್ಮ ‘ತಮಿಳಗ ವೆಟ್ರಿ ಕಳಗಂ’ ಪಕ್ಷವನ್ನು ಸ್ಥಾಪಿಸಿದ್ದ ವಿಜಯ್, 2026ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಯಶಸ್ಸು ಸಾಧಿಸಿ ಮುಖ್ಯಮಂತ್ರಿಯಾಗಿ ಅಧಿಕಾರ ಚುಕ್ಕಾಣಿ ಹಿಡಿದಿದ್ದಾರೆ.
ಇದನ್ನೂ ಓದಿ: ವೇದಿಕೆ ಮೇಲೆ ಸಮಂತಾಗೆ ‘ಐ ಲವ್ ಯೂ’ ಹೇಳಲು ನಿರಾಕರಿಸಿದ ಪತಿ ರಾಜ್ ನಿಡಿಮೋರು
ರಾಜಕೀಯ ಪ್ರವೇಶಕ್ಕಾಗಿ ಸಿನಿಮಾ ರಂಗಕ್ಕೆ ವಿದಾಯ ಹೇಳಿರುವ ವಿಜಯ್ ನಟನೆಯ ಕೊನೆಯ ಚಿತ್ರ ‘ಜನ ನಾಯಕನ್’ ಸದ್ಯ ಸೆನ್ಸಾರ್ ಮಂಡಳಿಯ ಒಪ್ಪಿಗೆಗಾಗಿ ಕಾಯುತ್ತಿದೆ. ಸಮಂತಾ ಮತ್ತು ವಿಜಯ್ ಈ ಹಿಂದೆ ಸೂಪರ್ ಹಿಟ್ ಚಿತ್ರಗಳಾದ ‘ಕತ್ತಿ’, ‘ಥೇರಿ’ ಮತ್ತು ‘ಮೆರ್ಸಲ್’ ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದರು. ಈಗ ಇವರಿಬ್ಬರ ಭೇಟಿಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




