ಚಿಕಿತ್ಸೆಗೆ 25 ಕೋಟಿ ಖರ್ಚು ಮಾಡಿದರೇ ಸಮಂತಾ? ಅವರೇ ಕೊಟ್ಟರು ಉತ್ತರ
Samantha: ನಟಿ ಸಮಂತಾ ಮೈಯೋಟಿಸ್ ಸಮಸ್ಯೆಯ ಚಿಕಿತ್ಸೆಗಾಗಿ 25 ಕೋಟಿ ರೂ ಖರ್ಚು ಮಾಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದ್ದು, ಆ ಬಗ್ಗೆ ಸ್ವತಃ ಸಮಂತಾ ಪ್ರತಿಕ್ರಿಯಿಸಿದ್ದಾರೆ.
ಸತತ ಆರೋಗ್ಯ ಸಮಸ್ಯೆಗಳಿಂದ ಬಳಲಿದ್ದ ಸಮಂತಾ (Samantha), ಇದೀಗ ಚಿತ್ರೀಕರಣದಿಂದ ಬಿಡುವು ಪಡೆದು ಪ್ರವಾಸದಲ್ಲಿ ತೊಡಗಿಕೊಂಡಿದ್ದಾರೆ. ಒಪ್ಪಿಕೊಂಡಿದ್ದ ಸಿನಿಮಾಗಳ ಚಿತ್ರೀಕರಣ ಮುಗಿಸಿದ ಕೂಡಲೇ ಇಶಾ ಫೌಂಡೇಶನ್ಗೆ (Isha Foundation) ತೆರಳಿ ಯೋಗ, ಧ್ಯಾನದಲ್ಲಿ ತೊಡಗಿಸಿಕೊಂಡ ಸಮಂತಾ ಅದರ ಬಳಿಕ ಗೆಳತಿಯೊಟ್ಟಿಗೆ ಬಾಲಿಗೆ ತೆರಳಿದರು. ಕಳೆದ ಒಂದು ವರ್ಷದಿಂದಲೂ ಸಮಂತಾ ಒಂದಲ್ಲ ಒಂದು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಲೇ ಇದ್ದರು. ಅದರಲ್ಲಿಯೂ ಅವರನ್ನು ಮೈಯೋಟಿಸ್ ಸಮಸ್ಯೆ ಬಹುವಾಗಿ ಕಾಡಿತ್ತು. ಅದಕ್ಕಾಗಿ ಚಿಕಿತ್ಸೆಯನ್ನೂ ಸಮಂತಾ ಪಡೆಯುತ್ತಿದ್ದಾರೆ.
ಆದರೆ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಸಮಂತಾರ ಮೈಯೋಟಿಸ್ ಚಿಕಿತ್ಸೆ ಬಗ್ಗೆ ಕೆಲ ಸುದ್ದಿಗಳು ವೈರಲ್ ಆಗಿದ್ದವು. ಸಮಂತಾ. ಮೈಯೋಟಿಸ್ ಖಾಯಿಲೆಯ ಚಿಕಿತ್ಸೆಗಾಗಿ ಕೋಟ್ಯಂತರ ರೂಪಾಯಿ ಹಣ ವ್ಯಯಿಸಿದ್ದಾರೆ. ಈ ಚಿಕಿತ್ಸೆಗಾಗಿಯೇ ಸುಮಾರು 25 ಕೋಟಿ ಹಣ ಖರ್ಚು ಮಾಡಿದ್ದಾರೆ ಎಂಬಿತ್ಯಾದಿ ಸುದ್ದಿಗಳನ್ನು ಹರಿಬಿಡಲಾಗಿತ್ತು. ಆದರೆ ಈ ಎಲ್ಲ ಸುದ್ದಿಗಳಿಗೆ ಸ್ವತಃ ಸಮಂತಾ ಸ್ಪಷ್ಟನೆ ನೀಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಸಮಂತಾ ಹಂಚಿಕೊಂಡಿದ್ದು, ”ಮಯೋಟಿಸ್ ಚಿಕಿತ್ಸೆಗೆ 25 ಕೋಟಿ ರೂಪಾಯಿ ಹಣವೇ? ಹಾಗಿದ್ದರೆ ಯಾರೋ ಬಹಳ ಕೆಟ್ಟ ಡೀಲ್ ಅನ್ನು ನೀಡಿದ್ದಾರೆಂದೇ ಅರ್ಥ. ನಾನು ಕಡಿಮೆ ಮೊತ್ತವನ್ನು ನನ್ನ ಚಿಕಿತ್ಸೆಗೆ ನೀಡುತ್ತಿದ್ದೇನೆ ಎಂಬ ಬಗ್ಗೆ ಖುಷಿ ಇದೆ” ಎಂದಿದ್ದಾರೆ.
ಮುಂದುವರೆದು, ”ನಾನು ಇಷ್ಟು ವರ್ಷ ಚಿತ್ರರಂಗಕ್ಕೆ ಕೆಲಸ ಮಾಡಿದ್ದಕ್ಕೆ ನನಗೆ ಕಲ್ಲುಗಳನ್ನು ನೀಡಲಾಗಿಲ್ಲ. ಉತ್ತಮ ಮೊತ್ತವನ್ನೇ ನಾನು ಸಂಪಾದಿಸಿದ್ದೇನೆ. ನಾನು ನನ್ನ ಕಾಳಜಿಯನ್ನು ವಹಿಸಬಲ್ಲೆ. ಮಯೋಟಿಸ್ ಸಮಸ್ಯೆಯನ್ನು ಸಾವಿರಾರು ಜನ ಎದುರಿಸುತ್ತಿದ್ದಾರೆ. ಹಾಗಾಗಿ ಸಮಸ್ಯೆಯ ಚಿಕಿತ್ಸೆಯ ಬಗ್ಗೆ ಮಾಹಿತಿ ಹಂಚಿಕೊಳ್ಳುವಾಗ ದಯವಿಟ್ಟು ಹೆಚ್ಚು ಜವಾಬ್ದಾರಿಯಿಂದ ವರ್ತಿಸಿ” ಎಂದಿದ್ದಾರೆ.
ಇದನ್ನೂ ಓದಿ:ಸಮಂತಾ ಜೊತೆ ಬಾಲಿ ಸುತ್ತಿ ಬಂದ ಆತ್ಮೀಯ ಗೆಳತಿ ಯಾರು? ಈಕೆಯ ಹಿನ್ನೆಲೆ ಏನು?
ಸಮಂತಾ ಕಳೆದ ಒಂದೂವರೆ ವರ್ಷದಿಂದಲೂ ಮಯೋಟಿಸ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಸಮಸ್ಯೆ ಕಾಣಿಸಿಕೊಂಡವರಿಗೆ ಮಾಂಸಖಂಡಗಳಲ್ಲಿ ನೋವು, ಉಸಿರಾಟದ ಸಮಸ್ಯೆ, ಬೇಗ ಸುಸ್ತಾಗುವುದು, ನಿದ್ರೆಯಲ್ಲಿ ಬೆವರುವುದು, ಚರ್ಮ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಸಮಸ್ಯೆಗೆ ಚಿಕಿತ್ಸೆಯನ್ನು ಸಮಂತಾ ಪಡೆದುಕೊಳ್ಳುತ್ತಿದ್ದಾರೆ. ಇದಕ್ಕಾಗಿ ಶುದ್ಧ ಆಮ್ಲಜನಕವನ್ನು ನಳಿಕೆ ಮೂಲಕ ನಿಗದಿತ ವೇಗದಲ್ಲಿ ಪಡೆದುಕೊಳ್ಳುವ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದಾರೆ. ಇದರಿಂದ ಶ್ವಾಸಕೋಶ ಬಲಗೊಳ್ಳುವ ಜೊತೆಗೆ, ರೋಗನಿರೊಧಕ ಶಕ್ತಿ ಹೆಚ್ಚಾಗುತ್ತದೆ. ನಿದ್ರಾಹೀನತೆ ನಿವಾರಣೆ ಆಗುತ್ತದೆ. ನಿಯಮಿತವಾಗಿ ಈ ಚಿಕಿತ್ಸೆಯನ್ನು ಸಮಂತಾ ಪಡೆದುಕೊಳ್ಳುತ್ತಿದ್ದಾರೆ. ಚಿಕಿತ್ಸೆಯ ಕುರಿತಾದ ಕೆಲವು ಚಿತ್ರಗಳನ್ನು ಸಹ ಸಾಮಾಜಿಕ ಜಾಲತಾಣದಲ್ಲಿ ಸಮಂತಾ ಹಂಚಿಕೊಂಡಿದ್ದರು.
ಸಮಂತಾ ಪ್ರಸ್ತುತ ಒಂದು ವರ್ಷಗಳ ಕಾಲ ಸಿನಿಮಾಗಳಿಂದ ದೂರ ಉಳಿಯಲು ನಿಶ್ಚಯಿಸಿದ್ದಾರೆ. ಆದರೆ ಈಗಾಗಲೇ ಅವರು ತೆಲುಗಿನ ‘ಖುಷಿ’ ಸಿನಿಮಾ ಹಾಗೂ ಹಿಂದಿಯ ‘ಸಿಟಾಡೆಲ್’ ವೆಬ್ ಸರಣಿ ಚಿತ್ರೀಕರಣ ಮುಗಿಸಿದ್ದಾರೆ. ‘ಖುಷಿ’ ಸಿನಿಮಾದಲ್ಲಿ ಅವರು ವಿಜಯ್ ದೇವರಕೊಂಡ ಜೊತೆ ನಟಿಸಿದ್ದರೆ, ‘ಸಿಟಾಡೆಲ್’ ನಲ್ಲಿ ವರುಣ್ ಧವನ್ ಜೊತೆಗೆ ನಟಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ