
ನಟಿ ನಿಧಿ ಅಗರ್ವಾಲ್ (Nidhi Agarwal) ಅವರಿಗೆ ಅಭಿಮಾನಿಗಳಿಂದ ಇತ್ತೀಚೆಗೆ ಕಿರಿಕಿರಿ ಉಂಟಾಗಿತ್ತು. ‘ದಿ ರಾಜಾ ಸಾಬ್’ ಸಿನಿಮಾದ ಹಾಡಿನ ಬಿಡುಗಡೆ ಕಾರ್ಯಕ್ರಮಕ್ಕೆ ಬಂದಿದ್ದ ಅವರನ್ನು ಅಭಿಮಾನಿಗಳು ಮುತ್ತಿಕೊಂಡಿದ್ದರು. ಜನಸಂದಣಿಯಲ್ಲಿ ಅವರ ಜೊತೆ ಕೆಲವರು ಅನುಚಿತವಾಗಿ ವರ್ತಿಸಿದರು. ಆ ಘಟನೆಯ ವಿಡಿಯೋ ವೈರಲ್ ಆಗಿತ್ತು. ಈಗ ಅದೇ ರೀತಿ ಸಮಂತಾ ರುತ್ ಪ್ರಭು (Samantha Ruth Prabhu) ಅವರಿಗೂ ಆಗಿದೆ. ಖಾಸಗಿ ಕಾರ್ಯಕ್ರಮಕ್ಕೆ ಬಂದಿದ್ದ ಸಮಂತಾ ಅವರನ್ನು ಅಭಿಮಾನಿಗಳು ಸುತ್ತುವರಿದಿದ್ದಾರೆ. ಈ ವಿಡಿಯೋ ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಸಮಂತಾ ಅವರಿಗೆ ಸಖತ್ ಜನಪ್ರಿಯತೆ ಇದೆ. ಅವರು ಎಲ್ಲೇ ಹೋದರೂ ಜನರು ಸೇರುತ್ತಾರೆ. ಹೈದರಾಬಾದ್ನಲ್ಲಿ ಅವರು ಕಾರ್ಯಕ್ರಮವೊಂದಕ್ಕೆ ಬಂದಿದ್ದರು. ಅಂಗಡಿ ಉದ್ಘಾಟನೆಗೆ ಬಂದಿದ್ದ ಅವರ ಜೊತೆ ಫೋಟೋ ತೆಗೆದುಕೊಳ್ಳಲು ಅಭಿಮಾನಿಗಳು ಮುಗಿಬಿದ್ದರು. ಆ ಸಂದರ್ಭದಲ್ಲಿ ಪರಿಸ್ಥಿತಿ ಕೈ ಮೀರುವಂತಾಯಿತು. ಆದರೆ ಅದೃಷ್ಟವಾಶಾತ್ ಏನೂ ಅಚಾತುರ್ಯ ಸಂಭವಿಸಿಲ್ಲ.
ಕಾರ್ಯಕ್ರಮ ಮುಗಿಸಿ ತಮ್ಮ ಕಾರಿನ ಕಡೆಗೆ ಸಮಂತಾ ರುತ್ ಪ್ರಭು ಹೋಗುತ್ತಿದ್ದರು. ಸೀರೆ ಧರಿಸಿದ್ದ ಅವರು ಪಟಪಟನೆ ನಡೆದು ಹೋಗುವುದು ಕೂಡ ಕಷ್ಟ ಆಗುತ್ತಿತ್ತು. ಆ ವೇಳೆ ಫೋಟೋಗಾಗಿ ಫ್ಯಾನ್ಸ್ ಮೇಲೆ ಬೀಳಲು ಆರಂಭಿಸಿದರು. ಅಕ್ಕ-ಪಕ್ಕ ಬಾಡಿ ಗಾರ್ಡ್ ಇದ್ದರೂ ಕೂಡ ಸಮಂತಾ ಅವರನ್ನು ಸೇಫ್ ಆಗಿ ಕಾರಿನ ತನಕ ಕರೆದುಕೊಂಡು ಹೋಗುವುದು ಕಷ್ಟ ಆಯಿತು.
ಪರಿಸ್ಥಿತಿ ಹೀಗೆ ಇದ್ದರೂ ಕೂಡ ಸಮಂತಾ ಅವರು ಗಲಿಬಿಲಿ ಆಗಲಿಲ್ಲ. ನಗುನಗುತ್ತಲೇ, ತಾಳ್ಮೆಯಿಂದ ಅವರು ಎಲ್ಲವನ್ನೂ ನಿಭಾಯಿಸಿದರು. ವೈರಲ್ ಆಗಿರುವ ವಿಡಿಯೋ ನೋಡಿ ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ನಟಿಯರು ಈ ರೀತಿ ಸಾರ್ವಜನಿಕವಾಗಿ ಕಾಣಿಸಿಕೊಂಡಾಗ ಹೇಗೆ ನಡೆದುಕೊಳ್ಳಬೇಕು ಎಂಬ ಪರಿಜ್ಞಾನ ಜನರಿಗೆ ಇಲ್ಲದೇ ಇರುವುದನ್ನು ನೆಟ್ಟಿಗರು ಖಂಡಿಸುತ್ತಿದ್ದಾರೆ.
ಇದನ್ನೂ ಓದಿ: ನಿಧಿ ಅಗರ್ವಾಲ್ ಜೊತೆ ಅನುಚಿತ ವರ್ತನೆ: ಮಾಲ್ ವಿರುದ್ಧ ಕೇಸ್ ದಾಖಲು
2025ರಲ್ಲಿ ಕಾಲ್ತುಳಿತದ ಪ್ರಕರಣಗಳು ಆಗಾಗ ವರದಿ ಆಗಿವೆ. ಹಾಗಿದ್ದರೂ ಕೂಡ ಜನರು ಬುದ್ಧಿ ಕಲಿಯುತ್ತಿಲ್ಲ. ಅಲ್ಲದೇ ಕಾರ್ಯಕ್ರಮಗಳ ಆಯೋಜಕರು ಕೂಡ ಎಚ್ಚರಿಕೆ ವಹಿಸಬೇಕಾಗುತ್ತದೆ. ಪ್ರತಿ ಬಾರಿ ಕಾರ್ಯಕ್ರಮಗಳು ನಡೆದಾದ ಜನರು ಈ ರೀತಿ ಮುಗಿಬೀಳುವುದನ್ನು ತಪ್ಪಿಸಬೇಕಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.