‘ಅವರು ಯಾವ ನೋವಲ್ಲಿದ್ದಾರೋ ಗೊತ್ತಿಲ್ಲ’; ವಿಜಯಲಕ್ಷ್ಮೀ ಬಗ್ಗೆ ಕಿಚ್ಚನ ಮಾತು
ಕಿಚ್ಚ ಸುದೀಪ್ ತಮ್ಮ 'ಯುದ್ಧಕ್ಕೆ ಸಜ್ಜಾದ ಸೇನೆ' ಹೇಳಿಕೆಯ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಈ ಹೇಳಿಕೆ ದರ್ಶನ್ ಅಥವಾ ಶಿವರಾಜ್‌ಕುಮಾರ್ ಅವರಿಗೆ ಸಂಬಂಧಿಸಿದ್ದಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಬದಲಾಗಿ, ತಮ್ಮ ಸಿನಿಮಾ ಬಿಡುಗಡೆಯ ಸಮಯದಲ್ಲಿ ಆಗುವ ಪೈರಸಿಯ ವಿರುದ್ಧ ಹೋರಾಡಲು ಈ ಮಾತು ಆಡಿದ್ದೇನೆ ಎಂದು ಸುದೀಪ್ ತಿಳಿಸಿದ್ದಾರೆ. ಪೈರಸಿ ಮಾಡುವವರ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ.

ಕಿಚ್ಚ ಸುದೀಪ್ ಹಾಗೂ ವಿಜಯಲಕ್ಷ್ಮೀ (Vijayalakshmi) ಮಧ್ಯೆ ನೇರ ಮಾತಿನ ಫೈಟ್ ಏರ್ಪಟ್ಟಿದೆ. ಆದರೆ, ಇದನ್ನು ತಪ್ಪಿಸಲು ಸುದೀಪ್ ಪ್ರಯತ್ನಿಸಿದ್ದಾರೆ. ‘ನನ್ನ ಸಿನಿಮಾ ರಿಲೀಸ್ ಆಗುವಾಗ ಒಂದು ಪಡೆ ಯುದ್ಧಕ್ಕೆ ಸಜ್ಜಾಗಿದೆ’ ಎಂದು ಕಿಚ್ಚ ಹೇಳಿದ್ದರು. ಈ ಹೇಳಿಕೆ ಬೆನ್ನಲ್ಲೇ ಸಾಕಷ್ಟು ಚರ್ಚೆಗಳು ನಡೆದವು. ವಿಜಯಲಕ್ಷ್ಮೀ ಕೂಡ ರಿಯಾಕ್ಷನ್ ಕೊಟ್ಟರು. ಆದರೆ, ಈ ಹೇಳಿಕೆಯನ್ನು ಕಿಚ್ಚ ತಾಗಿಸಿಕೊಳ್ಳಲೇ ಇಲ್ಲ. ಅವರು ಈ ವಿವಾದಕ್ಕೆ ಪ್ರತಿಕ್ರಿಯಿಸಿದ್ದಾರೆ.
‘ನಾನು ಹೇಳಿದ ಮಾತು ವಿವಾದ ಆಗಬೇಕಿದ್ದರೆ ಮರುದಿನವೇ ಬೆಂಕಿ ಹತ್ತಿಕೊಳ್ಳಬೇಕಿತ್ತು. ಎಲ್ಲರೂ ಮರುದಿನವೇ ಬಂದು ನೀವು ಯಾಕೆ ಹೀಗೆ ಹೇಳಿದ್ರಿ ಎಂದು ಮೈಕ್ ಹಿಡಿಯಬೇಕಿತ್ತು. ಸುದೀಪ್ ಯಾವಾಗಲೂ ಏಕೆ ಹೀಗೆ ಮಾತನಾಡಿಲ್ಲ, ಈಗ ಹೀಗೆಕೆ ಮಾತನಾಡಿದ್ರಿ ಎಂದು ಕೇಳಬೇಕಿತ್ತು. ಆದರೆ, ಹಾಗಾಗಿಲ್ಲ. ಅಲ್ಲಿ ಅಡ್ಡ ಗೋಡೆ ಮೇಲೆ ದೀಪ ಇಟ್ಟ ರೀತಿ ಮಾತನಾಡಿದರೆ ಅವರನ್ನು ಕೇಳಿ, ನೀವು ಯಾರಿಗೆ ಹೇಳಿದ್ದು ಎಂದು’ ಎಂದಿದ್ದಾರೆ ಸುದೀಪ್.
‘ಮಾರ್ಕ್ ಹಾಗೂ ‘45’ ಒಟ್ಟಿಗೆ ತೆರೆಗೆ ಬರುತ್ತಿದೆ. ಹೀಗಾಗಿ, ಇದು ಶಿವಣ್ಣನ ಸಿನಿಮಾ ಬಗ್ಗೆ ಆಡಿದ ಮಾತಾ ಎಂದು ಕೇಳಲಾಯಿತು. ಆದರೆ, ಇದನ್ನು ಸುದೀಪ್ ಅಲ್ಲ ಗಳೆದಿದ್ದಾರೆ. ‘ನಾನು 45 ಸಿನಿಮಾ ಬಗ್ಗೆ ಆಡಿದ ಮಾತು ಇದಲ್ಲ. ನಾನು ಮಾತನಾಡಿದ್ದು ಪೈರಸಿ ಬಗ್ಗೆ. ಪೈರಸಿ ಬಗ್ಗೆ ಮಾತನಾಡುವ ಅಧಿಕಾರ ನನಗಿಲ್ಲವಾ? ಚಿತ್ರರಂಗದಲ್ಲಿ ರಕ್ಷಿತ್, ರಿಷಬ್ ಸೇರಿದಂತೆ ಅನೇಕರಿದ್ದಾರೆ. ಆದರೆ, ಒಂದು ಘಂಟೆ ಮಾತ್ರ ಹೊಡೆದುಕೊಳ್ಳುತ್ತದೆ. ಅದು ನಾನು’ ಎಂದರು ಸುದೀಪ್.
‘ಕಮಲ್ ಹಾಸನ್ ವಿಷಯ ಬಂದಾಗ ನನಗೆ ಶಿವಣ್ಣ ಪರ ನಿಲ್ಲಬೇಕಿರಲಿಲ್ಲ.ಆದರೂ ನಿಂತೆ. ಅವರು ನಮ್ಮ ಹೆಮ್ಮೆ. ಅವರ ಬಗ್ಗೆ ಅಪಾರ ಗೌರವ ಇದೆ. ಸುದೀಪ್ ಕೊಟ್ಟ ಹೇಳಿಕೆ ನಿಮ್ಮ ಬಗ್ಗೆನಾ ಎಂದು ಶಿವಣ್ಣನಿಗೆ ಕೇಳಿದ್ರೆ ನಗುತ್ತಾರೆ.
ಇದನ್ನೂ ಓದಿ: ದರ್ಶನ್ ಅಭಿಮಾನಿಯನ್ನು ಕಾಪಾಡಿದ್ದು ಸುದೀಪ್: ಆ ಘಟನೆ ವಿವರಿಸಿದ ರಜತ್
‘ವೇದಿಕೆ ಹತ್ತಿ ಸಂದರ್ಶನ ಕೊಡ್ತಿದಾರೆ ಎಂದು ಅವರು (ವಿಜಯಲಕ್ಷ್ಮೀ) ಹೇಳಿದ್ದಾರೆ. ನನಗೆ ಹೇಳಿದ್ರೆ ನಾನು ಉತ್ತರ ಕೊಡ್ತೀನಿ. ಸಿದ್ದರಾಮಯ್ಯ, ಡಿಕೆ ಸಾಹೇಬ್ರು ವೇದಿಕೆ ಹತ್ತುತ್ತಿದ್ದಾರೆ. ಅವರಿಗೂ ಹೇಳಿದ್ದು ಇರಬಹುದಲ್ಲ. ಅವರಿಗೆ ಏನು ನೋವಿದೆ ಗೊತ್ತಿಲ್ಲ. ನನ್ನ ಸಿನಿಮಾ ಕಾಪಾಡಿಕೊಳ್ಳಬೇಕಿದೆ, ಜಿದ್ದಾಜಿದ್ದಿ ಮಾಡ್ತಿಲ್ಲ. ಪೈರಸಿ ಮಾಡೋರನ್ನ ಕರುಣೆ ಇಲ್ಲದೆ ಒಳಗೆ ಹಾಕಿಸುತ್ತೇವೆ’ ಎಂದಿದ್ದಾರೆ ಸುದೀಪ್.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




