Samantha: ಮತ್ತೆ ಸಮಂತಾಗೆ ಅನಾರೋಗ್ಯ; ಶೂಟಿಂಗ್ ಬಂದ್ ಮಾಡಿ 1 ವರ್ಷ ಯಾರ ಕೈಗೂ ಸಿಗಲ್ಲ ಸ್ಟಾರ್ ನಟಿ
Samantha Ruth Prabhu: ಬಿಡುವಿಲ್ಲದೇ ಕೆಲಸ ಮಾಡಿದ್ದರಿಂದ ಸಮಂತಾ ರುತ್ ಪ್ರಭು ಅವರಿಗೆ ಮತ್ತೆ ಅನಾರೋಗ್ಯ ಉಂಟಾಗಿದೆ. ಅಮೆರಿಕಕ್ಕೆ ತೆರಳಿ ಅವರು ಚಿಕಿತ್ಸೆ ಪಡೆಯಲಿದ್ದಾರೆ.
ಎಷ್ಟೇ ಪ್ರಯತ್ನಿಸಿದರೂ ನಟಿ ಸಮಂತಾ ರುತ್ ಪ್ರಭು (Samantha Ruth Prabhu) ಅವರು ಅನಾರೋಗ್ಯದಿಂದ ಸಂಪೂರ್ಣ ಚೇತರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಹಿಂದೆ ಅವರು Myositis ಕಾಯಿಲೆಗೆ ತಿಂಗಳುಗಟ್ಟಲೆ ಚಿಕಿತ್ಸೆ ಪಡೆದಿದ್ದರು. ಇನ್ನೇನು ಅವರು ಗುಣಮುಖರಾದರು ಎಂದು ಫ್ಯಾನ್ಸ್ ಖುಷಿಪಟ್ಟರು. ಆದರೆ ಈಗ ಅವರ ಪರಿಸ್ಥಿತಿ ಮತ್ತೆ ಬಿಗಡಾಯಿಸುತ್ತಿದೆ. ಹಾಗಾಗಿ ಅವರು ಒಂದು ವರ್ಷ ಬ್ರೇಕ್ ಪಡೆಯಲು ನಿರ್ಧರಿಸಿದ್ದಾರೆ. ಅಮೆರಿಕಕ್ಕೆ ತೆರಳಿ ಅಲ್ಲಿ ಚಿಕಿತ್ಸೆ ಪಡೆದುಕೊಳ್ಳಲಿದ್ದಾರೆ. ಸಮಂತಾ ರುತ್ ಪ್ರಭು (Samantha) ಅವರಿಗೆ ಈಗ ವಿಶ್ರಾಂತಿಯ ಅಗತ್ಯವಿದೆ. ಪೂರ್ತಿ ಗುಣಮುಖರಾಗುವ ತನಕ ಅವರು ಯಾರ ಕೈಗೂ ಸಿಗುವುದಿಲ್ಲ ಎಂದು ಹೇಳಲಾಗುತ್ತಿದೆ.
Myositis ಸಮಸ್ಯೆ ನಡುವೆಯೂ ‘ಯಶೋದಾ’ ಚಿತ್ರಕ್ಕೆ ಸಮಂತಾ ಅವರು ಡಬ್ಬಿಂಗ್ ಮಾಡಿದ್ದರು. ನಂತರ ಅವರು ಚೇತರಿಸಿಕೊಂಡು ‘ಶಾಕುಂತಲಂ’ ಚಿತ್ರದ ಪ್ರಮೋಷನ್ನಲ್ಲಿ ಭಾಗಿ ಆಗಿದ್ದರು. ಬಳಿಕ ‘ಖುಷಿ’ ಸಿನಿಮಾದ ಶೂಟಿಂಗ್ ಮುಗಿಸಿಕೊಟ್ಟರು. ಅದರ ಜೊತೆಗೆ ‘ಸಿಟಾಡೆಲ್’ ವೆಬ್ ಸರಣಿಯ ಇಂಡಿಯನ್ ವರ್ಷನ್ನಲ್ಲೂ ನಟಿಸಿದರು. ಅದಕ್ಕಾಗಿ ಅವರು ಸಖತ್ ಕಷ್ಟಪಟ್ಟರು. ಹೀಗೆ ಬಿಡುವಿಲ್ಲದೇ ಕೆಲಸ ಮಾಡಿದ್ದರಿಂದ ಅವರಿಗೆ ಮತ್ತೆ ಅನಾರೋಗ್ಯ ಉಂಟಾಗಿದೆ.
ಇದನ್ನೂ ಓದಿ: ವಿತೌಟ್ ಮೇಕಪ್ನಲ್ಲಿ ನಟಿ ಸಮಂತಾ ಹೇಗಿದ್ದಾರೆ ನೋಡಿ
ಸಮಂತಾ ಅವರು ಕಳೆದ ಆರು ತಿಂಗಳು ತುಂಬ ಶ್ರಮವಹಿಸಿ ಕೆಲಸ ಮಾಡಿದ್ದಾರೆ. ಶೂಟಿಂಗ್ ಸಲುವಾಗಿ ಬಹುಪಾಲು ಸಮಯವನ್ನು ಕ್ಯಾರವ್ಯಾನ್ನಲ್ಲಿ ಕಳೆದಿದ್ದಾರೆ. ‘ಇನ್ನು ಕ್ಯಾರವ್ಯಾನ್ ವಾಸ ಕೇವಲ ಮೂರು ದಿನ ಮಾತ್ರ ಉಳಿದಿದೆ’ ಎಂದು ಸಮಂತಾ ಅವರು ಇತ್ತೀಚೆಗೆ ಇನ್ಸ್ಟಾಗ್ರಾಮ್ ಸ್ಟೋರಿ ಅಪ್ಲೋಡ್ ಮಾಡುವ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದರು. ಈಗ ಅವರು ಒಂದು ವರ್ಷ ಬ್ರೇಕ್ ತೆಗೆದುಕೊಳ್ಳುವುದು ಖಚಿತವಾಗಿದೆ.
ಇದನ್ನೂ ಓದಿ: ವಿಶೇಷ ಆಮ್ಲಜನಕ ಚಿಕಿತ್ಸೆ ಪಡೆಯುತ್ತಿರುವ ಸಮಂತಾ: ಏನಿದರ ವಿಶೇಷತೆ?
ಸಮಂತಾ ಅವರು ನಟಿಸುತ್ತಿರುವ ಕೆಲವು ಜಾಹೀರಾತುಗಳ ಶೂಟಿಂಗ್ ಬಾಕಿಯಿದೆ. ಮೂರು ದಿನಗಳಲ್ಲಿ ಅದನ್ನು ಮುಗಿಸಿಕೊಳ್ಳಲಿದ್ದಾರೆ. ಆ ನಂತರ ಅವರು ವಿಶ್ರಾಂತಿ ಪಡೆಯುತ್ತಾರೆ. ಚಿಕಿತ್ಸೆಗಾಗಿ ಅಮೆರಿಕಕ್ಕೆ ತೆರಳಲಿರುವ ಅವರು ಅಲ್ಲಿಂದಲೇ ಆನ್ಲೈನ್ ಮೂಲಕ ‘ಸಿಟಾಡೆಲ್’ ವೆಬ್ ಸಿರೀಸ್ ಮತ್ತು ‘ಖುಷಿ’ ಸಿನಿಮಾದ ಪ್ರಮೋಷನ್ ಮಾಡಲಿದ್ದಾರೆ. ಒಂದು ವೇಳೆ ಬೇಗ ಗುಣಮುಖರಾದರೆ ಕೂಡಲೇ ಭಾರತಕ್ಕೆ ಮರಳಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.