ಕನ್ನಡ ಚಿತ್ರರಂಗದ (Sandalwood) ಹಿರಿಯ ಪಿಆರ್ಒ ಆಗಿದ್ದ ಡಿ.ವಿ. ಸುಧೀಂದ್ರ ಅವರು ‘ಶ್ರೀ ರಾಘವೇಂದ್ರ ಚಿತ್ರವಾಣಿ’ ಸಂಸ್ಥೆ ಆರಂಭಿಸಿ 25 ವರ್ಷಗಳು ಕಳೆದ ಸಂದರ್ಭದಲ್ಲಿ ನಿರ್ಮಾಪಕರಿಗೆ ಮತ್ತು ಪತ್ರಕರ್ತರಿಗೆ ಪ್ರಶಸ್ತಿಗಳನ್ನು ನೀಡಲು ಆರಂಭಿಸಿದರು. ಈಗ ಅದನ್ನು ಅವರ ಕುಟುಂಬದವರು ಮುಂದುವರಿಸಿಕೊಂಡು ಬಂದಿದ್ದಾರೆ. 23ನೇ ವರ್ಷದ ‘ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ’ (Raghavendra Chitravani Award) ಪ್ರಕಟ ಆಗಿದೆ. ಜನವರಿ 27ರಂದು ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಇರುವ ಕಲಾವಿದರ ಸಂಘದಲ್ಲಿ ಈ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು. ಅದೇ ದಿನ ಈ ಸಂಸ್ಥೆಯ 48ನೇ ವಾರ್ಷಿಕೋತ್ಸವ ಸಮಾರಂಭ ನಡೆಯಲಿದೆ.
11 ವಿಭಾಗಗಳಲ್ಲಿ ‘ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ’ ನೀಡಲಾಗುವುದು. ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡಿದ ಹಲವರನ್ನು ಸನ್ಮಾನಿಸಲಾಗುವುದು. ಈ ಬಾರಿ ನಿರ್ಮಾಪಕ ರಾಮು ಅವರಿಗೆ ಮರಣೋತ್ತರವಾಗಿ ‘ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ’ ನೀಡಲಾಗುತ್ತಿದೆ. ಹಿರಿಯ ಚಲನಚಿತ್ರ ಪತ್ರಕರ್ತ ಮುರಳಿಧರ ಖಜಾನೆ ಕೂಡ ಈ ಪ್ರಶಸ್ತಿಗೆ ಭಾಜನರಾಗುತ್ತಿದ್ದಾರೆ.
ಖ್ಯಾತ ಹಿನ್ನಲೆ ಗಾಯಕ ಹೇಮಂತ್ ಕುಮಾರ್ ಅವರಿಗೆ ‘ಡಾ. ರಾಜ್‌ಕುಮಾರ್ ಪ್ರಶಸ್ತಿ’, ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರಿಗೆ ‘ಯಜಮಾನ’ ಚಿತ್ರದ ಖ್ಯಾತಿಯ ಆರ್. ಶೇಷಾದ್ರಿ ಸ್ಮರಣಾರ್ಥ ಪ್ರಶಸ್ತಿ, ಜಯಲಕ್ಷ್ಮಿ ಪಿ (ದುಬೈ) ಅವರಿಗೆ ‘ಜಯಮಾಲ ಎಚ್.ಎಂ. ರಾಮಚಂದ್ರ ಪ್ರಶಸ್ತಿ’ ನೀಡಲಾಗುತ್ತಿದೆ. ‘ಹೊಂದಿಸಿ ಬರೆಯಿರಿ’ ಚಿತ್ರಕ್ಕಾಗಿ ಜೋ ಕೋಸ್ಟ ಅವರಿಗೆ ‘ಅತ್ಯುತ್ತಮ ಸಂಗೀತ ನಿರ್ದೇಶನ’ ಪ್ರಶಸ್ತಿ ಘೋಷಿಸಲಾಗಿದೆ.
ಇದನ್ನೂ ಓದಿ: ‘ವರ್ಷದ ಭಾರತೀಯ 2023’: ಕುಟುಂಬದ ಕಡುಕಷ್ಟದ ಬಳಿಕ ಶಾರುಖ್ ಖಾನ್ಗೆ ಸಿಕ್ತು ಪ್ರಶಸ್ತಿ
‘ಸಪ್ತಸಾಗರದಾಚೆ ಎಲ್ಲೋ’ ಸಿನಿಮಾಗಾಗಿ ಹೇಮಂತ್ ರಾವ್ ಅವರಿಗೆ ‘ಅತ್ಯುತ್ತಮ ಕಥಾಲೇಖಕರು’ ಪ್ರಶಸ್ತಿ ಸಿಗಲಿದೆ. ‘ವಿರಾಟಪುರದ ವಿರಾಗಿ’ ಚಿತ್ರಕ್ಕಾಗಿ ಬಿ.ಎಸ್. ಲಿಂಗದೇವರು ಮತ್ತು ಶರಣು ಹುಲ್ಲೂರು ಅವರು ‘ಅತ್ಯುತ್ತಮ ಸಂಭಾಷಣೆ’ ಪ್ರಶಸ್ತಿ ಪಡೆಯಲಿದ್ದಾರೆ. ಚೊಚ್ಚಲ ಚಿತ್ರದ ನಿರ್ದೇಶನಕ್ಕಾಗಿ ‘ಆಚಾರ್ ಆ್ಯಂಡ್ ಕೋ’ ಸಿನಿಮಾದ ನಿರ್ದೇಶಕಿ ಸಿಂಧು ಶ್ರೀನಿವಾಸಮೂರ್ತಿ ಅವರಿಗೂ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಇದನ್ನೂ ಓದಿ: Golden Globes 2024: 81ನೇ ಸಾಲಿನ ‘ಗೋಲ್ಡನ್ ಗ್ಲೋಬ್ಸ್’ ಅವಾರ್ಡ್; ಇಲ್ಲಿದೆ ವಿಜೇತರ ಪಟ್ಟಿ
‘ಟಗರು ಪಲ್ಯ’ ಸಿನಿಮಾದ ‘ಸಂಬಂಜ ಅನ್ನೋದು ದೊಡ್ಡದು ಕನಾ..’ ಗೀತರಚನೆಗಾಗಿ ಡಾಲಿ ಧನಂಜಯ್ ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಹಿರಿಯ ಪೋಷಕ ಕಲಾವಿದ ಸುಂದರ್ ರಾಜ್ ಅವರಿಗೆ ‘ಸಿ. ಸೀತಾರಾಂ ಸ್ಮರಣಾರ್ಥ ಪ್ರಶಸ್ತಿ’ ಸಿಗಲಿದೆ. ‘ರಾಷ್ಟ್ರ ಪ್ರಶಸ್ತಿ’ ಪುರಸ್ಕೃತರಾದ ಅನಿರುದ್ಧ್ ಜತ್ಕರ್, ಬಿ.ಎನ್. ಸುಬ್ರಹ್ಮಣ್ಯ ಮತ್ತು ರಕ್ಷಿತ್ ಶೆಟ್ಟಿ ಅವರನ್ನು ಈ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ