ಡಾ. ರಾಜ್ಕುಮಾರ್ ನಟನೆಯ ‘ಸಂಪತ್ತಿಗೆ ಸವಾಲ್’ ಸಿನಿಮಾ (Sampathige Savaal Movie) ಬಿಡುಗಡೆ ಆಗಿದ್ದು 1974ರಲ್ಲಿ. ಈ ಸಿನಿಮಾ ಅಂದಿನ ಕಾಲಕ್ಕೆ ದೊಡ್ಡ ಮಟ್ಟದಲ್ಲಿ ಗೆಲುವು ಕಂಡಿತ್ತು. ಎವಿ ಶೇಷಗಿರಿ ರಾವ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದರು. ರಾಜ್ಕುಮಾರ್, ಮಂಜುಳಾ, ವಜ್ರಮುನಿ ಮೊದಲಾದವರು ಈ ಸಿನಿಮಾದಲ್ಲಿ ನಟಿಸಿದ್ದರು. ಈ ಚಿತ್ರದ ಹಾಡುಗಳ ಧ್ವನಿ ಸುರುಳಿಗಿಂತ ಸಂಭಾಷಣೆಗಳ ಧ್ವನಿ ಸುರುಳಿಯೇ ಪ್ರಸಿದ್ಧಿಯನ್ನು ಪಡೆಯಿತು. ಈ ಚಿತ್ರ ಆರಂಭ ಆಗಿದ್ದು ಹೇಗೆ ಎನ್ನುವ ಬಗ್ಗೆ ಇಲ್ಲಿದೆ ವಿವರ.
ಶಾರದಾ ಸಂಗೀತ ನಾಟಕ ಮಂಡಳಿ ಕನಕಪುರದಲ್ಲಿ ‘ಸಂಪತ್ತಿಗೆ ಸವಾಲು’ ನಾಟಕವನ್ನು ಪ್ರದರ್ಶನ ಮಾಡುತ್ತಿತ್ತು. ಆ ನಾಟಕದ ಬಗ್ಗೆ ರಾಜ್ಕುಮಾರ್ ಕೇಳಿದ್ದರು. ಅವರು ಹೋಗಿ ನಾಟಕ ನೋಡಿದರು. ಅವರಿಗೆ ಈ ನಾಟಕ ಸಾಕಷ್ಟು ಇಷ್ಟವಾಯ್ತು. ಅದನ್ನು ಸಿನಿಮಾ ಮಾಡೋ ನಿರ್ಧಾರಕ್ಕೆ ಬಂದರು. ಈ ಬಗ್ಗೆ ಅವರು ಶಾರದಾ ಸಂಗೀತ ನಾಟಕ ಮಂಡಳಿಯ ಮಾಲೀಕ ಬಸವರಾಜಪ್ಪ ಅವರಿಗೆ ಮತ್ತು ನಾಟಕ ರಚನಾಕಾರ ಪಿ.ಬಿ. ಧುತ್ತರಗಿ ಅವರ ಬಳಿ ಈ ಬಗ್ಗೆ ಚರ್ಚಿಸಿ ಅವರನ್ನು ಒಪ್ಪಿಸಿದರು. ಇದೇ ಹೆಸರಲ್ಲಿ ಸಿನಿಮಾ ಕೂಡ ಮಾಡಲಾಯಿತು. ಈ ಸಿನಿಮಾ ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಿಗೂ ರಿಮೇಕ್ ಆಗಿದೆ.
‘ಯಾವ ನಾಯಿಗೆ ಬೇಕೋ, ಯಾವ ನಾಯಿಗೆ ಬೇಕೋ ನಿನ್ನ ಋಣ’, ‘ಬೇವರ್ಸಿ, ಹಳೆ ಬೇವರ್ಸಿ, ಬಿಕನಾಸಿ, ದರ್ವೇಸಿ’ ರೀತಿಯ ಡೈಲಾಗ್ಗಳು ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಪಡೆದವು. ಪಕ್ಕಾ ಹಳ್ಳಿ ಸೊಗಡಿನ ಕಥೆಗೆ, ಹಳ್ಳಿ ಸೊಗಡಿನ ಸಂಭಾಷಣೆಯನ್ನು ಬರೆದಿದ್ದರು ಚಿ. ಉದಯ್ ಶಂಕರ್.
ಇದನ್ನೂ ಓದಿ: ರಾಜ್ಕುಮಾರ್ಗೆ ಅತಿಯಾದ ಪ್ರೀತಿ ಇದ್ದಿದ್ದು ಯಾರ ಮೇಲೆ?
‘ಸಂಪತ್ತಿಗೆ ಸವಾಲ್’ ಚಿತ್ರದ ‘ಯಾರೇ ಕೂಗಾಡಲಿ, ಊರೇ ಹೋರಾಡಲಿ’ ಹಾಡಿಗೆ ಈಗಲೂ ಬೇಡಿಕೆ ಇದೆ. ಈ ಹಾಡು ಬಂದು 50 ವರ್ಷ ಆದರೂ ಈಗಲೂ ಅನೇಕ ಕೇಳುಗರ ಫೇವರಿಟ್ ಎನಿಸಿಕೊಂಡಿದೆ. ಈ ಹಾಡಿನ ಮೂಲಕ ಡಾ. ರಾಜ್ಕುಮಾರ್ ಅವರು ಪೂರ್ಣ ಪ್ರಮಾಣದ ಹಿನ್ನೆಲೆ ಗಾಯಕರಾಗಿ ರೂಪುಗೊಂಡರು. ಆ ಬಳಿಕ ಹಲವು ಹಾಡುಗಳನ್ನು ಹಾಡಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.