
ನಟ ದರ್ಶನ್ ಅವರ ಅಭಿಮಾನಿಗಳ ವರ್ತನೆ ಮಿತಿ ಮೀರಿದೆ. ಕೊಲೆಯಾದ ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂದು ಹೇಳಿರುವ ನಟಿ ರಮ್ಯಾ ಬಗ್ಗೆ ದರ್ಶನ್ ಫ್ಯಾನ್ಸ್ (Darshan Fans) ಬಹಳ ಅಶ್ಲೀಲವಾಗಿ ಕಮೆಂಟ್ ಮಾಡಿದ್ದಾರೆ. ನಟಿಗೆ ನೇರವಾಗಿ ಅವಾಚ್ಯ ಪದಗಳ ಸಂದೇಶ ಕಳಿಸಲಾಗಿದೆ. ಅಂತಹ ಕಿಡಿಗೇಡಿಗಳ ಮೇಲೆ ಕ್ರಮ ಜರುಗಿಸಲು ರಾಜ್ಯ ಮಹಿಳಾ ಆಯೋಗ (Women Commission) ಸಿದ್ಧವಾಗಿದೆ. ಕೆಟ್ಟ ಸಂದೇಶ ಕಳಿಸಿದವರ ಮೇಲೆ ಕ್ರಮ ತೆಗೆದುಕೊಳ್ಳುವಂತೆ ಪೊಲೀಸ್ ಆಯುಕ್ತರಿಗೆ ಮಹಿಳಾ ಆಯೋಗ ತಿಳಿಸಿದೆ. ಈ ಬಗ್ಗೆ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ (Nagalakshmi Choudhary) ಅವರು ಟಿವಿ9ಗೆ ಪ್ರತಿಕ್ರಿಯೆ ನೀಡಿದ್ದಾರೆ.
‘ಈ ರೀತಿ ಅವಹೇಳನಕಾರಿ ಪದಗಳನ್ನು ಉಪಯೋಗಿಸಿ, ಹೆಣ್ಣಿನ ಮಾನಹಾನಿ ಮಾಡುವುದು ದೊಡ್ಡ ಅಪರಾಧ. ಇದನ್ನು ನಾವು ಮಾಧ್ಯಮಗಳಲ್ಲಿ ನೋಡಿದ್ದೇನೆ. ನಮಗೆ ದೂರು ಕೂಡ ಬಂದಿದೆ. ಹಾಗಾಗಿ ನಾವು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದೇವೆ. ಅಶ್ಲೀಲವಾದ ಕಮೆಂಟ್ಗಳನ್ನು ಮಾಡುತ್ತಿರುವುದು ಕಾನೂನಿನ ಅಡಿಯಲ್ಲಿ ದೊಡ್ಡ ಅಪರಾಧ. ನಾವು ಪೊಲೀಸ್ ಆಯುಕ್ತರಿಗೆ ಪತ್ರವನ್ನು ಬರೆದಿದ್ದೇವೆ’ ಎಂದು ನಾಗಲಕ್ಷ್ಮಿ ಚೌಧರಿ ಅವರು ಹೇಳಿದ್ದಾರೆ.
‘ಕೂಡಲೇ ಕ್ರಮ ಜರುಗಿಸಿ, ಈಗಾಗಲೇ ಹಾಕಿರುವ ಕಮೆಂಟ್ಗಳನ್ನು ಬ್ಲಾಕ್ ಮಾಡಿಸಿ, ಅಶ್ಲೀಲ ಸಂದೇಶ ಕಳಿಸಿದವರ ಮೇಲೆ ಕ್ರಮ ತೆಗೆದುಕೊಂಡು, ವರದಿ ಸಲ್ಲಿಸಿ ಎಂದು ನಾವು ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದೇವೆ. ಇದು ರಮ್ಯಾ ಬಗ್ಗೆ ಮಾತ್ರವಲ್ಲ, ಯಾರ ಬಗ್ಗೆ ಈ ರೀತಿ ಕಮೆಂಟ್ ಮಾಡಿದರೂ ಅದು ತಪ್ಪು. ಸ್ವತಂತ್ರವಾಗಿ ಮಾತನಾಡುವ ಹಕ್ಕು ಎಲ್ಲರಿಗೂ ಇದೆ. ಆದರೆ ಅದು ಒಳ್ಳೆಯ ಒಂದು ಚರ್ಚೆ ಆಗಬೇಕೇ ಹೊರತು ಹೆಣ್ಮಗಳ ಬಗ್ಗೆ ಇಷ್ಟು ಕೆಟ್ಟ ರೀತಿಯಲ್ಲಿ, ಸೋಶಿಯಲ್ ಮೀಡಿಯಾದಲ್ಲಿ ಮಾತನಾಡುವುದು ಸರಿಯಲ್ಲ’ ಎಂದಿದ್ದಾರೆ ನಾಗಲಕ್ಷ್ಮಿ ಚೌಧರಿ.
‘ಕಾನೂನು ಇದೆ, ನ್ಯಾಯಾಲಯ ಇದೆ. ತಪ್ಪು ಸಾಬೀತಾದರೆ 7 ವರ್ಷ ಜೈಲು ಶಿಕ್ಷೆ ಆಗುತ್ತದೆ. ಇದು ನಿಮಗೆ ನೆನಪಿರಲಿ. ನೀವು ಕಮೆಂಟ್ ಮಾಡುವುದಕ್ಕೂ ಮುಂಚೆ ಭವಿಷ್ಯದ ಬಗ್ಗೆ ಆಲೋಚನೆ ಮಾಡಬೇಕು. ಇಂಥ ಕಮೆಂಟ್ಗಳನ್ನು ಮಾಡುವುದರಿಂದ ದೂರ ಇರಿ ಎಂದು ನಾನು ಆಯೋಗದ ಅಧ್ಯಕ್ಷೆಯಾಗಿ ಹೇಳುತ್ತಿದ್ದೇನೆ’ ಎಂದು ನಾಗಲಕ್ಷ್ಮಿ ಚೌಧರಿ ಅವರು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ದರ್ಶನ್ ಅಭಿಮಾನಿಗಳ ವಿರುದ್ಧ ರೊಚ್ಚಿಗೆದ್ದಿರುವ ರಮ್ಯಾರಿಂದ ಸೈಬರ್ ಪೊಲೀಸ್ಗೆ ದೂರು ನೀಡುವ ನಿರ್ಧಾರ
‘ಮಾಜಿ ಸಂಸದೆ ಮತ್ತು ಚಲನಚಿತ್ರ ನಟಿ ರಮ್ಯಾ ಅವರ ವಿರುದ್ಧ, ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಸಂದೇಶಗಳನ್ನು ನೀಡಿರುವ ಬಗ್ಗೆ ವರದಿ ಆಗಿರುತ್ತದೆ. ಇದರಿಂದ ಮಹಿಳೆಯ ಸ್ಥಾನಮಾನಕ್ಕೆ ತೊಂದರೆ ಆಗುತ್ತಿದ್ದು, ಈ ಸಂಬಂಧ ರಾಜ್ಯ ಮಹಿಳಾ ಆಯೋಗವು ಇದನ್ನು ಗಂಭೀರವಾಗಿ ಪರಿಗಣಿಸಿರುತ್ತದೆ. ಆದ್ದರಿಂದ ಸದರಿ ಪ್ರಕರಣದ ಬಗ್ಗೆ ನಿಯಮಾನುಸಾರ ಪರಿಶೀಲಿಸಿ, ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗುತ್ತಿರುವ ಅವಹೇಳನಕಾರಿ ಸಂದೇಶಗಳನ್ನು ಕೂಡಲೇ ಸ್ಥಗಿತಗೊಳಿಸಿ, ಸಂಬಂಧಿಸಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿದೆ’ ಎಂದು ಮಹಿಳಾ ಆಯೋಗದ ಕಡೆಯಿಂದ ಪೊಲೀಸ್ ಆಯುಕ್ತರಿಗೆ ಪತ್ರದ ಮೂಲಕ ತಿಳಿಸಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.