ರಮ್ಯಾಗೆ ದರ್ಶನ್ ಫ್ಯಾನ್ಸ್ ಅಶ್ಲೀಲ ಸಂದೇಶ: ಪೊಲೀಸ್ ಆಯುಕ್ತರಿಗೆ ಪತ್ರ ಬರೆದ ಮಹಿಳಾ ಆಯೋಗ
ನಟಿ ರಮ್ಯಾ ದಿವ್ಯ ಸ್ಪಂದನಾ ಅವರಿಗೆ ದರ್ಶನ್ ಅಭಿಮಾನಿಗಳು ಅಶ್ಲೀಲ ಸಂದೇಶಗಳನ್ನು ಕಳಿಸಿದ್ದಾರೆ. ಇದು ಈಗ ವಿವಾದಕ್ಕೆ ಕಾರಣ ಆಗಿದೆ. ರಮ್ಯಾ ಅವರ ಪರವಾಗಿ ರಾಜ್ಯ ಮಹಿಳಾ ಆಯೋಗ ನಿಂತಿದೆ. ಅಶ್ಲೀಲ ಸಂದೇಶ ಕಳಿಸಿದವರ ಮೇಲೆ ಕ್ರಮಕ್ಕೆ ಒತ್ತಾಯಿಸಿ ಪೊಲೀಸ್ ಆಯುಕ್ತರಿಗೆ ಪತ್ರ ಬರೆಯಲಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ದರ್ಶನ್ ಅಭಿಮಾನಿಗಳು (Darshan Fans) ರಮ್ಯಾ ಬಗ್ಗೆ ಅವಹೇಳನಕಾರಿಯಾಗಿ ಕಮೆಂಟ್ ಮಾಡುತ್ತಿದ್ದಾರೆ. ನಟಿಗೆ ಸಂದೇಶ ಕಳಿಸಿರುವ ಅನೇಕರು ಅಶ್ಲೀಲ ಪದ ಬಳಕೆ ಮಾಡಿದ್ದಾರೆ. ಅವುಗಳನ್ನು ರಮ್ಯಾ (Ramya Divya Spandana) ಅವರು ಜಗಜ್ಜಾಹೀರು ಮಾಡಿದ್ದಾರೆ. ಈ ಕುರಿತಂತೆ ಅವರು ದರ್ಶನ್ ಅಭಿಮಾನಿಗಳ ವಿರುದ್ಧ ಸೈಬರ್ ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದಾರೆ. ಇದರ ಬೆನ್ನಲ್ಲೇ ನಟಿ ರಮ್ಯಾಗೆ ರಾಜ್ಯ ಮಹಿಳಾ ಆಯೋಗ ಬೆಂಬಲ ನೀಡಿದೆ. ಅಶ್ಲೀಲವಾಗಿ ಸಂದೇಶ ಕಳಿಸಿದವರ ವಿರುದ್ಧ ತನಿಖೆ ಮಾಡಿ ಕ್ರಮ ಕೈಕೊಳ್ಳಬೇಕು ಎಂದು ಕೋರಿ ಪೊಲೀಸ್ ಆಯುಕ್ತರಿಗೆ ಮಹಿಳಾ ಆಯೋಗ (Women Commission) ಪತ್ರ ಬರೆದಿದೆ.
‘ಮಾಜಿ ಸಂಸದೆ ಹಾಗೂ ಚಲನಚಿತ್ರ ನಟಿ ರಮ್ಯಾರವರ ವಿರುದ್ಧ, ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಸಂದೇಶಗಳನ್ನು ನೀಡಿರುವ ಬಗ್ಗೆ ವರದಿಯಾಗಿರುತ್ತದೆ. ಇದರಿಂದ ಮಹಿಳೆಯ ಸ್ಥಾನಮಾನಕ್ಕೆ ತೊಂದರೆಯಾಗುತ್ತಿದ್ದು, ಈ ಸಂಬಂಧ ರಾಜ್ಯ ಮಹಿಳಾ ಆಯೋಗವು ಇದನ್ನು ಗಂಭೀರವಾಗಿ ಪರಿಗಣಿಸಿರುತ್ತದೆ. ಆದ್ದರಿಂದ ಸದರಿ ಪ್ರಕರಣದ ಬಗ್ಗೆ ನಿಯಮಾನುಸಾರ ಪರಿಶೀಲಿಸಿ, ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗುತ್ತಿರುವ ಅವಹೇಳನಕಾರಿ ಸಂದೇಶಗಳನ್ನು ಕೂಡಲೇ ಸ್ಥಗಿತಗೊಳಿಸಿ, ಸಂಬಂಧಿಸಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿದೆ’ ಎಂದು ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಪತ್ರ ಬರೆದಿದ್ದಾರೆ.
ವಿವಾದ ಶುರುವಾಗಿದ್ದು ಹೇಗೆ?
ಕೆಲವೇ ದಿನಗಳ ಹಿಂದೆ ಸುಪ್ರೀಂ ಕೋರ್ಟ್ನಲ್ಲಿ ದರ್ಶನ್ ಜಾಮೀನು ವಿಚಾರಣೆ ನಡೆಯಿತು. ಆ ಬಳಿಕ ರಮ್ಯಾ ಪ್ರತಿಕ್ರಿಯಿಸಿದ್ದರು. ‘ಭಾರತದ ಜನಸಾಮಾನ್ಯರಿಗೆ ಸುಪ್ರೀಂ ಕೋರ್ಟ್ ಒಂದು ಭರವಸೆಯ ಬೆಳಕಾಗಿದೆ. ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗುವ ಭರವಸೆ ಮೂಡಿದೆ’ ಎಂದು ರಮ್ಯಾ ಅವರು ಇನ್ಸ್ಟಾಗ್ರಾಮ್ ಸ್ಟೋರಿ ಮತ್ತು ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದರು. ಆ ಬಳಿಕ ದರ್ಶನ್ ಅಭಿಮಾನಿಗಳು ರಮ್ಯಾಗೆ ಅಶ್ಲೀಲ ಸಂದೇಶ ಕಳಿಸಲು ಆರಂಭಿಸಿದರು.
ದರ್ಶನ್ ಅಭಿಮಾನಿಗಳ ಸಂದೇಶ ನೋಡಿ ಕೋಪಗೊಂಡ ರಮ್ಯಾ ಅವರು, ‘ಎಲ್ಲ ಡಿ ಬಾಸ್ ಅಭಿಮಾನಿಗಳಿಗಳೂ ನನ್ನ ಇನ್ಸ್ಟಾಗ್ರಾಮ್ ಖಾತೆಗೆ ಸ್ವಾಗತ. ರೇಣುಕಾಸ್ವಾಮಿ ಕುಟುಂಬಕ್ಕೆ ಯಾಕೆ ನ್ಯಾಯ ಸಿಗಬೇಕು ಎಂಬುದಕ್ಕೆ ನಿಮ್ಮ ಕಮೆಂಟ್ಗಳೇ ಸಾಕ್ಷಿ’ ಎಂದು ಬರೆದುಕೊಂಡರು. ದರ್ಶನ್ ಅಭಿಮಾನಿಗಳು ಬಳಸಿರುವ ಅಶ್ಲೀಲ ಪದಗಳಿಗೆ ಸೋಶಿಯಲ್ ಮೀಡಿಯಾದಲ್ಲಿ ಖಂಡನೆ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ: ವಿಜಯಲಕ್ಷ್ಮಿ ದರ್ಶನ್ ನನ್ನ ಗೆಳತಿ, ಹಾಗೆಂದು ನಾನು ಸುಮ್ಮನಿರಲ್ಲ: ರಮ್ಯಾ
ರಮ್ಯಾ ಪರ ನಿಂತ ನಟ ಪ್ರಥಮ್
ಈ ಘಟನೆಗೆ ಸಂಬಂಧಿಸಿದಂತೆ ನಟ ಪ್ರಥಮ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ‘ರಮ್ಯಾ ಮೇಡಂ ಘನತೆ ಪರವಾಗಿ ನಾನು ನಿಲ್ಲುತ್ತೇನೆ. ಎಲ್ಲರೂ ನಟಿ ರಮ್ಯಾ ಪರ ನಿಲ್ಲೋಣ. ಈಗಲೂ ನಾವು ರಮ್ಯರವರ ಆತ್ಮಗೌರವದ ಪರ ನಿಲ್ಲದೇ ಹೋದರೆ ನಾವು ಕಲಾವಿದರಾಗೋಕೆ ನಾಚಿಕೆಯಾಗಬೇಕು. ಕನ್ನಡ ಚಿತ್ರರಂಗವನ್ನ ಭಯದಿಂದ ಮುಕ್ತಗೊಳಿಸೋಣ. ಇಷ್ಟೆಲ್ಲಾ ಆದ್ರೂ ಜಾಣಕಿವುಡರಾಗಿರೋ ಪುಣ್ಯಾತ್ಮ ಕಲಾವಿದರಿಗೆ ದೇವರು ನೂರ್ಕಾಲ ಆಯಸ್ಸು ನೀಡಲೆಂದು ಪ್ರಾರ್ಥನೆ’ ಎಂದು ಪ್ರಥಮ್ ಪೋಸ್ಟ್ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








