‘ಸು ಫ್ರಮ್ ಸೋ’ ಗೆದ್ದ ಬೆನ್ನಲ್ಲೇ ರಾಜ್ ಬಿ. ಶೆಟ್ಟಿಗೆ ಪ್ರೀತಿಯ ಸಂದೇಶ ಕೊಟ್ಟ ರಿಷಬ್
ರಾಜ್ ಬಿ ಶೆಟ್ಟಿ ನಿರ್ಮಾಣದ ಮತ್ತು ಜೆಪಿ ತುಮಿನಾಡ್ ನಿರ್ದೇಶನದ ‘ಸು ಫ್ರಮ್ ಸೋ’ ಚಿತ್ರವು ಬಾಕ್ಸ್ ಆಫೀಸ್ನಲ್ಲಿ ಅದ್ಭುತ ಯಶಸ್ಸು ಕಂಡಿದೆ. ರಿಷಬ್ ಶೆಟ್ಟಿ ಅವರು ಚಿತ್ರತಂಡಕ್ಕೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ತಮ್ಮ ‘ಸಹಿಪ್ರಾ ಶಾಲೆ’ ಚಿತ್ರದ ನೆನಪಾಯಿತು ಎಂದು ಹೇಳಿದ್ದಾರೆ.

ರಾಜ್ ಬಿ ಶೆಟ್ಟಿ ನಿರ್ಮಾಣದ, ಜೆಪಿ ತುಮಿನಾಡ್ ನಿರ್ದೇಶನದ ‘ಸು ಫ್ರಮ್ ಸೋ’ ಸಿನಿಮಾ (Su From So) ಯಶಸ್ಸು ಕಂಡಿದೆ. ಈ ಚಿತ್ರವು ಬಾಕ್ಸ್ ಆಫೀಸ್ನಲ್ಲಿ ಒಳ್ಳೆಯ ಗಳಿಕೆ ಮಾಡುತ್ತಿರುವುದನ್ನು ಇಡೀ ಕರ್ನಾಟಕ ಜನತೆ ನೋಡುತ್ತಾ ಇದೆ. ಇದು ಕನ್ನಡ ಚಿತ್ರರಂಗಕ್ಕೆ ಸಿಕ್ಕ ದೊಡ್ಡ ಗೆಲುವು. ರಾಜ್ ಅವರಿಗೆ ಹಾಗೂ ತಂಡಕ್ಕೆ ಎಲ್ಲರೂ ವಿಶ್ ತಿಳಿಸುತ್ತಾ ಇದ್ದಾರೆ. ಈಗ ರಿಷಬ್ ಶೆಟ್ಟಿ ಕೂಡ ತಂಡಕ್ಕೆ ವಿಶ್ ಮಾಡಿದ್ದಾರೆ ಮತ್ತು ತಮ್ಮ ನಿರ್ದೇಶನದ ‘ಸಹಿಪ್ರಾ ಶಾಲೆ’ ದಿನಗಳು ನೆನಪಾದವು ಎಂದು ಹೇಳಿದ್ದಾರೆ.
‘ನಮಸ್ಕಾರ ಕನ್ನಡ ಸಿನಿಪ್ರಿಯರೇ, ನೀವೆಲ್ಲರೂ ‘ಸು ಫ್ರಮ್ ಸೋ’ ಚಿತ್ರಕ್ಕೆ ನೀಡಿರುವ ಅದ್ಭುತ ಬೆಂಬಲ ಮತ್ತು ಪ್ರೀತಿಗೆ ಹೃತ್ತೂರ್ವಕ ಧನ್ಯವಾದಗಳು. ಈ ಸಿನಿಮಾ ನಿಜಕ್ಕೂ ಮನಸ್ಸಿಗೆ ಖುಷಿ ನೀಡಿದೆ. ರಚಿಸಿ ನಿರ್ದೇಶನ ಮಾಡಿದ ಜೆ.ಪಿ. ತುಮಿನಾಡ ಅವರಿಗೆ ಚಿತ್ರರಂಗಕ್ಕೆ ಸ್ವಾಗತ! ಅವರ ಚೊಚ್ಚಲ ಪ್ರಯತ್ನ ಅತ್ಯಂತ ಯಶಸ್ವಿಯಾಗಿದೆ. ನಿರ್ಮಾಪಕರಾದ ರಾಜ್ ಬಿ. ಶೆಟ್ಟಿ, ರವಿ ರೈ ಮತ್ತು ಶಶಿಧರ್ ಶೆಟ್ಟಿ ಬಾರೋಡ ಅವರ ಈ ಹೊಸ ಪ್ರಯತ್ನಕ್ಕೆ ನನ್ನ ಶುಭಾಶಯಗಳು. ಅವರ ಪ್ರೋತ್ಸಾಹದಿಂದ ಇಂತಹ ಉತ್ತಮ ಚಿತ್ರಗಳು ಹೊರಬರುತ್ತಿವೆ’ ಎಂದಿದ್ದಾರೆ ರಿಷಬ್.
‘ನಟರಾದ ಶನಿಲ್ ಗೌತಮ್, ಜೆ.ಪಿ. ತುಮಿನಾಡ್, ಸಂಧ್ಯಾ ಅರಕೆರೆ, ಪ್ರಕಾಶ್ ತುಮಿನಾಡ್, ದೀಪಕ್ ರೈ ಪನಾಜೆ, ಪುಷ್ಪರಾಜ್ ಬೋಳಾರ್, ಮೈಮ್ ರಾಮದಾಸ್ ಸೇರಿದಂತೆ ಪ್ರತಿಯೊಬ್ಬ ಕಲಾವಿದನ ಅಭಿನಯವೂ ಗಮನ ಸೆಳೆಯುತ್ತದೆ. ಎಲ್ಲರೂ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಒಳ್ಳೆಯ ಮನರಂಜನಾತ್ಮಕ ಚಿತ್ರವನ್ನು ನೀಡಿದ ಇಡೀ ‘ಸು ಫ್ರಮ್ ಸೋ’ ತಂಡಕ್ಕೆ ನನ್ನ ಅಭಿನಂದನೆಗಳು. ಈ ಚಿತ್ರವು ನನ್ನನ್ನು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಸರಗೋಡು ದಿನಗಳಿಗೆ ಕರೆದುಕೊಂಡು ಹೋಯಿತು. ಆ ಚಿತ್ರದಲ್ಲಿ ನಟಿಸಿದ್ದ ಅನೇಕ ಕಲಾವಿದರು ‘ಸು ಫ್ರಮ್ ಸೋ’ ಚಿತ್ರದಲ್ಲಿಯೂ ಇರುವುದು ಹಳೆಯ ನೆನಪುಗಳನ್ನು ಮರುಕಳಿಸುವಂತೆ ಮಾಡಿತು’ ಎಂದಿದ್ದಾರೆ ರಿಷಬ್.
Best Wishes to the team #SuFromSo @RajbShettyOMK @lighterbuddha @jpthuminad @ShaneelGautham pic.twitter.com/jsXMJhGiBB
— Rishab Shetty (@shetty_rishab) July 27, 2025
‘ನಿಮ್ಮ ಈ ಪ್ರಯತ್ನಕ್ಕೆ ಇನ್ನಷ್ಟು ದೊಡ್ಡ ಯಶಸ್ಸು ಸಿಗಲಿ ಎಂದು ಹಾರೈಸುತ್ತೇನೆ. ಕನ್ನಡ ಚಿತ್ರರಂಗಕ್ಕೆ ನಿಮ್ಮ ಬೆಂಬಲ ಹೀಗೆಯೇ ಸದಾ ಇರಲಿ. ಜೈ ಹಿಂದ್, ಜೈ ಕರ್ನಾಟಕ ಮಾತೆ. ಇಂತಿ ನಿಮ್ಮ, ರಿಷಬ್ ಶೆಟ್ಟಿ’ ಎಂದು ಅವರು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ‘ಸು ಫ್ರಮ್ ಸೋ’ ಬ್ಲಾಕ್ಬಸ್ಟರ್ ಕಲೆಕ್ಷನ್; ಮೂರೇ ದಿನಕ್ಕೆ ‘ಎಕ್ಕ’, ‘ಜೂನಿಯರ್ ದಾಖಲೆ ಉಡೀಸ್
‘ಸು ಫ್ರಮ್ ಸೋ’ ಚಿತ್ರದ ನಿರ್ಮಾಪಕರಲ್ಲಿ ರವಿ ರೈ ಕಳಸ ಕೂಡ ಒಬ್ಬರು. ಅವರು ಈ ಮೊದಲು ‘ಸ.ಹಿ.ಪ್ರಾ ಶಾಲೆ ಕಾಸರಗೋಡು’ ಚಿತ್ರವನ್ನು ನಿರ್ಮಾಣ ಮಾಡಿದ್ದರು. ರಿಷಬ್ ಶೆಟ್ಟಿ ಜೊತೆ ಕೆಲಸ ಮಾಡಿದ ಅನೇಕರು ಈ ಚಿತ್ರದಲ್ಲಿ ಕೆಲಸ ಮಾಡಿದ್ದಾರೆ ಅನ್ನೋದು ಇಲ್ಲಿ ಗಮನಿಸಬೇಕಾದ ವಿಚಾರವೇ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 11:48 am, Mon, 28 July 25







