ಕಿಚ್ಚ ಸುದೀಪ್ (Kichcha Sudeep) ಅವರಿಗೆ ಸಿನಿಮಾದ ಹಾಗೆಯೇ ಕ್ರಿಕೆಟ್ ಮೇಲೂ ಆಸಕ್ತಿ ಇದೆ. ಸಿಸಿಎಲ್ ಪಂದ್ಯಾವಳಿ ಸೇರಿದಂತೆ ಅನೇಕ ಬಾರಿ ಅವರು ಬ್ಯಾಟ್ ಬೀಸಿದ್ದಾರೆ. 1983ರಲ್ಲಿ ಭಾರತ ಕ್ರಿಕೆಟ್ ತಂಡ ವಿಶ್ವಕಪ್ ಗೆದ್ದ ಘಟನೆಯನ್ನು ಆಧರಿಸಿ ‘83’ ಸಿನಿಮಾ (83 Movie) ತಯಾರಾಗಿದೆ. ಆ ಸಿನಿಮಾವನ್ನು ಕರ್ನಾಟಕದಲ್ಲಿ ಕಿಚ್ಚ ಸುದೀಪ್ ಪ್ರಸ್ತುತಪಡಿಸುತ್ತಿದ್ದಾರೆ. ‘83’ ಚಿತ್ರದಲ್ಲಿ ಕಪಿಲ್ ದೇವ್ (Kapil Dev) ಪಾತ್ರವನ್ನು ರಣವೀರ್ ಸಿಂಗ್ ಮಾಡಿದ್ದಾರೆ. ಕಪಿಲ್ ದೇವ್ ಎಂದರೆ ಸುದೀಪ್ ಅವರಿಗೆ ಸಖತ್ ಅಭಿಮಾನ. ಅವರ ಜತೆ ಫೋಟೋ ತೆಗೆದುಕೊಳ್ಳಬೇಕು ಎಂಬ ಆಸೆ ಬಾಲ್ಯದಲ್ಲೇ ಸುದೀಪ್ ಅವರ ಮನದಲ್ಲಿ ಚಿಗುರಿತ್ತು. ಆದರೆ ಸಾಧ್ಯವಾಗಿರಲಿಲ್ಲ. 36 ವರ್ಷಗಳ ಬಳಿಕ ಆ ಕ್ಷಣ ಬಂತು ಎಂದು ಸುದೀಪ್ ಹೇಳಿದ್ದಾರೆ.
‘83’ ಸಿನಿಮಾ ಕನ್ನಡಕ್ಕೂ ಡಬ್ ಆಗಿ ತೆರೆಕಾಣುತ್ತಿದೆ. ಶನಿವಾರ (ಡಿ.18) ಬೆಂಗಳೂರಿನಲ್ಲಿ ಈ ಚಿತ್ರದ ಸುದ್ದಿಗೋಷ್ಠಿ ನಡೆಸಲಾಯಿತು. ಅದರಲ್ಲಿ ಕಪಿಲ್ ದೇವ್, ಸುದೀಪ್, ನಿರ್ದೇಶಕ ಕಬೀರ್ ಖಾನ್, ರಣವೀರ್ ಸಿಂಗ್ ಮುಂತಾದವರು ಪಾಲ್ಗೊಂಡಿದ್ದರು. ಈ ವೇಳೆ ತಮ್ಮ ಬಾಲ್ಯದಲ್ಲಿ ನಡೆದ ಘಟನೆಯನ್ನು ಸುದೀಪ್ ವಿವರಿಸಿದರು.
‘ತುಂಬ ವರ್ಷಗಳ ಹಿಂದೆ. 1987-88 ಸಮಯ. ಕಪಿಲ್ ದೇವ್ ಅವರನ್ನು ನೋಡೋಕೆ ನಮ್ಮನ್ನು ಕರೆದುಕೊಂಡು ಹೋಗಿದ್ರು. ನಾನಾಗ ತುಂಬ ಚಿಕ್ಕವನು. ಅಂದು ಕಪಿಲ್ ದೇವ್ ಒಬ್ಬರೇ ನಡೆದುಕೊಂಡು ಹೋಗುತ್ತಿದ್ದರು. ಓಡಿಹೋಗಿ ನಾನು ಅವರ ಕೋಟ್ ಎಳೆದೆ. ಆಗ ನನ್ನ ಬಳಿ ಒಂದು ಚಿಕ್ಕ ಕ್ಯಾಮೆರಾ ಇತ್ತು. ನಿಮ್ಮ ಜತೆ ಫೋಟೋ ಬೇಕು ಅಂತ ಹೇಳಿದೆ. ಫೋಟೋ ತೆಗೆಯಲು ನನ್ನ ಅಕ್ಕ ನನ್ನ ಹಿಂದೆ ಓಡಿ ಬಂದರು. ಆದರೆ ದುರದೃಷ್ಟ ಎಂದರೆ, ಕ್ಯಾಮೆರಾ ವರ್ಕ್ ಆಗುತ್ತಾ ಇರಲಿಲ್ಲ. ನಾನು ಅಳಲು ಆರಂಭಿಸಿದೆ. ಅಂದು ಅವರು ಕಣ್ಣೀರು ಒರೆಸಿ, ನನಗೆ ಸಮಾಧಾನ ಮಾಡಿದ್ದರು. ಮುಂದೊಂದು ದಿನ ನಾವು ಜೊತೆಯಾಗಿ ಫೋಟೋ ತೆಗೆದುಕೊಳ್ಳೋಣ ಅಂತ ಹೇಳಿದ್ರು. ಆ ದಿನ ಈಗ ಬಂದಿದೆ’ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.
36 ವರ್ಷಗಳ ಬಳಿಕ ಕಪಿಲ್ ದೇವ್ ಅವರ ಜೊತೆಯಾಗಿ ನಿಂತು ತೆಗೆಸಿಕೊಂಡಿರುವ ಈ ಫೋಟೋವನ್ನು ಸುದೀಪ್ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
A pic I waited for almost 36 years odd…
Thank u Kapil sir… for making it happen.
Epitome of humility .. ?❤ pic.twitter.com/447I5YseBp— Kichcha Sudeepa (@KicchaSudeep) December 19, 2021
‘1983ರ ವಿಶ್ವಕಪ್ ಬಗ್ಗೆ ಮಾತನಾಡಲು ಹಲವು ವಿಚಾರಗಳಿವೆ. ಅದರಲ್ಲೊಂದು ಕಥೆ ಇದೆ ಅಂತ ಒಂದು ತಂಡ ನಂಬಿದೆ. ಆ ಕಥೆ ಮಹತ್ವದ್ದಾಗಲಿದೆ ಎಂಬ ನಂಬಿಕೆ ಆ ತಂಡಕ್ಕೆ ಇದೆ. ಆ ನಂಬಿಕೆಯೇ ನನಗೆ ಒಂದು ಅದ್ಭುತ ಕಥೆಯಂತೆ ಕಾಣಿಸುತ್ತಿದೆ. ಒಬ್ಬ ಕ್ರಿಕೆಟ್ ಪ್ರೇಮಿಯಾಗಿ, ಭಾರತೀಯನಾಗಿ ಥಿಯೇಟರ್ನಲ್ಲಿ ಈ ಚಿತ್ರವನ್ನು ನೋಡಿ ಎಂಜಾಯ್ ಮಾಡಲು ಬಯಸುತ್ತೇನೆ. ಇಂಥ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದಕ್ಕಾಗಿ ನಿರ್ದೇಶಕ ಕಬೀರ್ ಖಾನ್ ಮತ್ತು ಇಡೀ ತಂಡಕ್ಕೆ ನನ್ನ ಅಭಿನಂದನೆಗಳು. ಭಾರತ ವಿಶ್ವಕಪ್ ಗೆದ್ದಾಗ ಎಷ್ಟು ಖುಷಿ ಆಗಿತ್ತೋ ಅದೇ ರೀತಿ ಈ ಸಿನಿಮಾ ತೆರೆಕಾಣುತ್ತಿರುವುದಕ್ಕೆ ಖುಷಿ ಆಗುತ್ತಿದೆ’ ಎಂದು ಸುದೀಪ್ ಹೇಳಿದ್ದಾರೆ.
ಇದನ್ನೂ ಓದಿ:
‘83’ ಸಿನಿಮಾ ವೇದಿಕೆಯಲ್ಲಿ ರಣವೀರ್ ಸಿಂಗ್ಗೆ ಕನ್ನಡ ಡೈಲಾಗ್ ಹೇಳಿಕೊಟ್ಟ ಕಿಚ್ಚ ಸುದೀಪ್
ಒಂದೇ ವೇದಿಕೆ ಮೇಲೆ ಸುದೀಪ್, ರಣವೀರ್, ಕಪಿಲ್ ದೇವ್; ‘83’ ಸುದ್ದಿಗೋಷ್ಠಿ ನೋಡಲು ಇಲ್ಲಿ ಕ್ಲಿಕ್ ಮಾಡಿ
Published On - 1:07 pm, Sun, 19 December 21