ಒಂದಾಗುತ್ತಿದೆ 3 ಇಡಿಯಟ್ಸ್, ಪಿಕೆ ಜೋಡಿ, ಈ ಬಾರಿ ಗೆದ್ದಾರೆಯೇ ಆಮಿರ್ ಖಾನ್?

|

Updated on: Jul 04, 2023 | 9:55 PM

Aamir Khan: ನಟ ಆಮಿರ್ ಖಾನ್ ಸೋಲಿನ ಸುಳಿಯಿಂದ ಹೊರಬರಲು ಹಳೆ ಗೆಳೆಯನ ಶರಣು ಹೋಗಿದ್ದಾರೆ.

ಒಂದಾಗುತ್ತಿದೆ 3 ಇಡಿಯಟ್ಸ್, ಪಿಕೆ ಜೋಡಿ, ಈ ಬಾರಿ ಗೆದ್ದಾರೆಯೇ ಆಮಿರ್ ಖಾನ್?
ಆಮಿರ್-ಹಿರಾನಿ
Follow us on

ಬಾಲಿವುಡ್​ನ (Bollywood) ಖಾನ್ ತ್ರಯರಲ್ಲಿ ಶಾರುಖ್ ಖಾನ್ (Shah Rukh Khan) ಪಠಾಣ್ ಸಿನಿಮಾ ಮೂಲಕ ಸತತ ಸೋಲಿನ ಸುಳಿಯಿಂದ ಹೊರಬಂದಿದ್ದಾಗಿದೆ. ಸಲ್ಮಾನ್ ಖಾನ್ (Salman Khan) ಮುಂಬರುವ ಟೈಗರ್ 3 ಸಿನಿಮಾ ಮೂಲಕ ಮತ್ತೆ ಗೆಲುವಿನ ಹಳಿಗೆ ಬರುವ ನಿರೀಕ್ಷೆ ಮೂಡಿಸಿದ್ದಾರೆ. ಇನ್ನು ಆಮಿರ್ ಖಾನ್ ಸೋಲಿನ ಸರಪಳಿ ಕಳಚಿಕೊಳ್ಳಲು ಹಳೆ ಗೆಳೆಯನಿಗೆ ಶರಣು ಹೋಗಿದ್ದಾರೆ. ಈ ಹಿಂದೆ 3 ಇಡಿಯಟ್ಸ್ ಹಾಗೂ ಪಿಕೆ ಸಿನಿಮಾಗಳ ಮೂಲಕ ಆಮಿರ್ ಖಾನ್​ಗೆ (Aamir Khan) ದೊಡ್ಡ ಹಿಟ್ ಸಿನಿಮಾಗಳನ್ನು ನೀಡಿದ್ದ ರಾಜ್​ಕುಮಾರ್ ಹಿರಾನಿ ಜೊತೆ ಆಮಿರ್ ಖಾನ್ ಕೈ ಜೋಡಿಸಿದ್ದಾರೆ ಎನ್ನಲಾಗುತ್ತಿದೆ.

ಎಸ್​ಎಸ್ ರಾಜಮೌಳಿಯಂತೆಯೇ ರಾಜ್​ಕುಮಾರ್ ಹಿರಾನಿ ಸಹ ಸೋಲೆ ಇಲ್ಲದ ಸರದಾರ. ಮುನ್ನಾಭಾಯಿ ಎಂಬಿಬಿಎಸ್ ಸಿನಿಮಾದಿಂದ ಆರಂಭಿಸಿ ಈ ವರೆಗೆ ರಾಜ್​ಕುಮಾರ್ ಹಿರಾನಿ ನಿರ್ದೇಶನದ ಒಂದೂ ಸಿನಿಮಾ ಸೋತಿಲ್ಲ ಮಾತ್ರವಲ್ಲ ಕೇವಲ ಮಸಾಲೆ ಸಿನಿಮಾಗಳಲ್ಲದೆ ಸಂದೇಶವುಳ್ಳ ಸಿನಿಮಾಗಳ ಮೂಲಕವೇ ದೊಡ್ಡ ಹಿಟ್​ಗಳನ್ನು ಹಿರಾನಿ ಗಳಿಸುತ್ತಿದ್ದಾರೆ. ಅದೇ ಕಾರಣಕ್ಕೆ ಆಮಿರ್ ಖಾನ್ ಈಗ ಹಿರಾನಿ ಜೊತೆ ಕೈಜೋಡಿಸಿದ್ದಾರೆ ಎನ್ನಲಾಗುತ್ತಿದ್ದು, ಹಿಂದಿನ ಬಾರಿಯಂತೆ ಹೊಸ ಕತೆಯ ಬದಲಿಗೆ ಜೀವನ ಕತೆಯನ್ನು ಸಿನಿಮಾಕ್ಕಾಗಿ ಆಯ್ದುಕೊಂಡಿದೆ ಈ ಜೋಡಿ.

ಈ ಇಬ್ಬರೂ ಸೇರಿ ಬಾಲಿವುಡ್​ನ ಹಿರಿಯ ನಟರೊಬ್ಬರ ಜೀವನವನ್ನೇ ತೆರೆಯ ಮೇಲೆ ತರಲು ಸಜ್ಜಾಗಿದ್ದಾರೆ ಎನ್ನಲಾಗುತ್ತಿದೆ. ಆದರೆ ಯಾರ ಜೀವನ ಕತೆಯನ್ನು ಆಯ್ದುಕೊಂಡಿದ್ದಾರೆ ಎಂಬುದು ಇನ್ನೂ ತಿಳಿದು ಬಂದಿಲ್ಲ. ರಾಜ್​ಕುಮಾರ್ ಹಿರಾನಿ ಪ್ರಸ್ತುತ ಶಾರುಖ್ ಖಾನ್ ಜೊತೆ ಸಿನಿಮಾ ಮಾಡುತ್ತಿದ್ದು ಆ ಸಿನಿಮಾ ಬಿಡುಗಡೆ ಬಳಿಕ ಆಮಿರ್ ಖಾನ್ ಜೊತೆಗಿನ ಸಿನಿಮಾ ಪ್ರಾರಂಭವಾಗಲಿದೆ.

ಇದನ್ನೂ ಓದಿ:‘ನಟನೆಗೆ ಸದ್ಯಕ್ಕಂತೂ ಕಂಬ್ಯಾಕ್ ಮಾಡುವ ಆಲೋಚನೆಯಲ್ಲಿಲ್ಲ’; ಕಾರಣ ತಿಳಿಸಿದ ನಟ ಆಮಿರ್ ಖಾನ್

ರಾಜ್​ಕುಮಾರ್ ಹಿರಾನಿ ಪ್ರಸ್ತುತ ಡಂಕಿ ಹೆಸರಿನ ಸಿನಿಮಾದ ಚಿತ್ರೀಕರಣ ಮಾಡುತ್ತಿದ್ದಾರೆ. ಸಿನಿಮಾದಲ್ಲಿ ಶಾರುಖ್ ಖಾನ್ ನಾಯಕ, ತಾಪ್ಸಿ ಪನ್ನು ನಾಯಕಿ. ಈ ಸಿನಿಮಾವು ಅಕ್ರಮ ವಲಸಿಗರ ಕುರಿತಾದ ಕತೆಯನ್ನು ಹೊಂದಿದೆ. ಸಿನಿಮಾವನ್ನು ಪಂಜಾಬ್ ಹಾಗೂ ಕೆನಡಾ, ಲಂಡನ್​ಗಳಲ್ಲಿ ಚಿತ್ರೀಕರಣ ಮಾಡುತ್ತಿದ್ದಾರೆ ಹಿರಾನಿ. ಈ ಸಿನಿಮಾದ ಬಿಡುಗಡೆಯ ಬಳಿಕವಷ್ಟೆ ಆಮಿರ್ ಖಾನ್ ಜೊತೆಗಿನ ಸಿನಿಮಾದ ಬಗ್ಗೆ ಸ್ಪಷ್ಟನೆ ದೊರಕಲಿದೆ.

ಆಮಿರ್ ಖಾನ್​ರ ಈ ಹಿಂದಿನ ಸಿನಿಮಾ ಲಾಲ್ ಸಿಂಗ್ ಛಡ್ಡ ಹೀನಾಯ ಸೋಲು ಕಂಡಿದೆ. ಇಂಗ್ಲೀಷ್​ನ ಫಾರೆಸ್ಟ್ ಗಂಫ್ ಸಿನಿಮಾವನ್ನು ಆಮಿರ್ ಖಾನ್ ಹಿಂದಿಯಲ್ಲಿ ರೀಮೇಕ್ ಮಾಡಿದ್ದರು. ಇಂಗ್ಲೀಷ್​ನಲ್ಲಿ ದಾಖಲೆಗಳನ್ನು ಬರೆದು ಕಲ್ಟ್ ಕ್ಲಾಸಿಕ್ ಎನಿಸಿಕೊಂಡಿದ್ದ ಈ ಸಿನಿಮಾ ಹಿಂದಿಯಲ್ಲಿ ತೀರ ಹೀನಾಯ ಸೋಲು ಕಂಡಿತು. 2016 ರಲ್ಲಿ ಬಿಡುಗಡೆ ಆಗಿದ್ದ ದಂಗಲ್ ಬಳಿಕ ಆಮಿರ್ ಖಾನ್ ಸತತ ಸೋಲು ಕಾಣುತ್ತಿದ್ದಾರೆ. ಲಾಲ್ ಸಿಂಗ್ ಛಡ್ಡಕ್ಕೆ ಮುನ್ನ ಪೂರ್ಣ ಪ್ರಮಾಣದ ನಾಯಕನ ಪಾತ್ರದಲ್ಲಿ ನಟಿಸಿದ್ದ ಥಗ್ಸ್ ಆಫ್ ಹಿಂದೊಸ್ತಾನ್ ಸಿನಿಮಾ ಸಹ ಸೋಲು ಕಂಡು ನಷ್ಟ ಅನುಭವಿಸಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ