‘ರೇಣುಕಾಸ್ವಾಮಿ ಕುಟುಂಬದ ಬಗ್ಗೆ ಹೇಳಿಕೆ ನೀಡುವಾಗ ಚೂರು ಯೋಚನೆ ಮಾಡಿ’: ಪ್ರಥಮ್

ರೇಣುಕಾ ಸ್ವಾಮಿ ಕುಟುಂಬವನ್ನು ಭೇಟಿ ಮಾಡಿದ ಪ್ರಥಮ್​ ಅವರು ಸಾಂತ್ವನ ಹೇಳಿದ್ದಾರೆ. ‘ನನ್ನ ಒಂದು ಮಾತಿನಿಂದ ನಿಮಗೆ ನೋವಾಗಿದೆ ಎಂಬುದಾದರೆ ಸಹನಾ ಅವರಿಗೆ ಆಗಿರುವ ನೋವು ಏನು? ನೂರು, ಸಾವಿರ ಪಟ್ಟು ನೋವು ಅವರಿಗೆ ಆಗಿದೆ. ಈ ಕುಟುಂಬ ಹೇಗೆ ಚೇತರಿಸಿಕೊಳ್ಳಬೇಕು? ಅದರ ಬಗ್ಗೆ ಚೂರು ಯೋಚನೆ ಮಾಡಿ’ ಎಂದು ಜನರಿಗೆ ಪ್ರಥಮ್​ ಅವರು ಹೇಳಿದ್ದಾರೆ.

‘ರೇಣುಕಾಸ್ವಾಮಿ ಕುಟುಂಬದ ಬಗ್ಗೆ ಹೇಳಿಕೆ ನೀಡುವಾಗ ಚೂರು ಯೋಚನೆ ಮಾಡಿ’: ಪ್ರಥಮ್
ಪ್ರಥಮ್​
Edited By:

Updated on: Aug 15, 2024 | 11:03 PM

ನಟ ದರ್ಶನ್, ನಟಿ ಪವಿತ್ರಾ ಗೌಡ ಹಾಗೂ ಸಹಚರರ ಮೇಲೆ ಕೊಲೆ ಆರೋಪ ಇದೆ. ಅಶ್ಲೀಲ ಸಂದೇಶ ಕಳಿಸಿದ ಎಂಬ ಕಾರಣಕ್ಕೆ ರೇಣುಕಾಸ್ವಾಮಿ ಎಂಬಾತನನ್ನು ಚಿತ್ರದುರ್ಗದಿಂದ ಬೆಂಗಳೂರಿಗೆ ಕರೆತಂದು ಹತ್ಯೆ ಮಾಡಿದ ಆರೋಪದಲ್ಲಿ ಡಿ-ಗ್ಯಾಂಗ್​ನವರು ಜೈಲು ಸೇರಿದ್ದಾರೆ. ಅತ್ತ, ರೇಣುಕಾಸ್ವಾಮಿ ಕುಟುಂಬದವರು ನೋವಿನಲ್ಲಿ ದಿನ ಕಳೆಯುವಂತಾಗಿದೆ. ಅವರ ನಿವಾಸಕ್ಕೆ ಕೆಲವು ಸೆಲೆಬ್ರಿಟಿಗಳು ಭೇಟಿ ನೀಡಿ ಈಗಾಗಲೇ ಸಾಂತ್ವನ ಹೇಳಿದ್ದಾರೆ. ಈಗ ನಟ ಪ್ರಥಮ್​ ಕೂಡ ಚಿತ್ರದುರ್ಗಕ್ಕೆ ತೆರಳಿ ರೇಣುಕಾ ಸ್ವಾಮಿಯ ಮನೆಯವರಿಗೆ ಧೈರ್ಯ ತುಂಬಲು ಪ್ರಯತ್ನಿಸಿದ್ದಾರೆ.

ಕಣ್ಣೀರು ಹಾಕುತ್ತಿರುವ ರೇಣುಕಾಸ್ವಾಮಿ ತಂದೆ-ತಾಯಿ ಜೊತೆ ಮಾತನಾಡಿದ ಬಳಿಕ ಪ್ರಥಮ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪುತ್ತಳಿ ಉದ್ಘಾಟನೆಗೆ ಬಂದಿದ್ದೆ. ಮನಸ್ಸು ನೋಯಿಸಲು ಅಥವಾ ಯಾರನ್ನೋ ಸಮರ್ಥನೆ ಮಾಡಿಕೊಳ್ಳಲು ನಾನು ಇಲ್ಲಿಗೆ ಬಂದಿಲ್ಲ. ನನ್ನ ಮನಸ್ಸಿನಲ್ಲಿ ಒಂದು ವಿಚಾರ ಕಾಡುತ್ತಿತ್ತು. ತುಂಬಾ ಹೀನಾಯವಾಗಿ ಸಾವಾಗಿತ್ತು. ಸಹನಾ ಅವರನ್ನು ಮಾತನಾಡಿಸಬೇಕು ಎಂಬುದು ನನ್ನ ತಲೆಯಲ್ಲಿತ್ತು’ ಎಂದು ಪ್ರಥಮ್​ ಹೇಳಿದ್ದಾರೆ.

ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆಗೆ 699 ರೂ. ಬೆಲೆಯ ವಸ್ತು ಬಳಕೆ; ಡೆಲಿವರಿ ಬಾಯ್​ ಕೂಡ ಮುಖ್ಯ ಸಾಕ್ಷಿ

‘ನನ್ನ ಕೈಯಿಂದ ಏನು ಸಾಧ್ಯವೋ ಅದನ್ನು ಮಾಡಬೇಕು. ಅವರ ನೋವು ನನ್ನನ್ನು ತುಂಬ ಕಾಡುತ್ತಿತ್ತು. ಅವರು ತುಂಬ ಪ್ರಭುದ್ಧರಾಗಿ ಮಾತನಾಡುತ್ತಿದ್ದರು. ಅವರ ಮುಗ್ಧತೆ ನನಗೆ ಹೆಚ್ಚು ನೋವು ನೀಡುತ್ತಿತ್ತು. ಅವರನ್ನು ನೋಡಲೇಬೇಕು ಎಂಬುದು ನನಗಿತ್ತು. ಈಗ ಸತತ ಆರು ವಾರದಿಂದ ಹೊಸ ಶೋ ಮಾಡುತ್ತಿದ್ದೇನೆ. ಅದರಿಂದ ನನಗೆ ವಿಶ್ರಾಂತಿ ಇಲ್ಲದಂತೆ ಆಗಿತ್ತು. ಈ ಕುಟುಂಬದವರನ್ನು ನೋಯಿಸಲು ಅಥವಾ ಇನ್ನಾವುದೋ ಹೇಳಿಕೆ ನೀಡಲು ನಾನು ಬಂದಿಲ್ಲ’ ಎಂದಿದ್ದಾರೆ ಪ್ರಥಮ್​.

‘ಜನರಿಗೆ ಒಂದು ಮಾತು ಹೇಳುತ್ತೇನೆ. ನೀವು ಯಾವುದೇ ಹೇಳಿಕೆ ನೀಡಿದರೆ ಸಹನಾ ಅವರ ಕುಟುಂಬಕ್ಕೆ ಹೆಚ್ಚು ನೋವಾಗುತ್ತದೆ. ನನ್ನ ಮನೆ ಮುಂದೆ ಸೆಕ್ಷನ್​ 144 ಹಾಕಿದ್ದರು. ಆಗ ಮಾಧ್ಯಮದವರು ಮತ್ತು ಪೊಲೀಸರು ಕಷ್ಟಪಟ್ಟು ಕೆಲಸ ಮಾಡಿದ್ದರು. ಆಗ ಸೆಕ್ಷನ್​ 144 ಹಾಕಿದ್ದರು ಎಂಬ ನೋವು ನನಗೆ ಇತ್ತು. ಆ ಸಂದರ್ಭದಲ್ಲಿ ನಾನು ನೀಡಿದ ಹೇಳಿಕೆ ತಿರುಚಿದ್ದಕ್ಕೆ ನನಗೆ ಬಹಳ ನೋವಾಗಿತ್ತು. ನನ್ನ ಹೇಳಿಕೆಯಿಂದ ನಿಮಗೆ ನೋವಾಗಿದೆ ಎಂಬುದಾದರೆ ಈ ಕುಟುಂಬ ಮಗನನ್ನೇ ಕಳೆದುಕೊಂಡ ನೋವಿನಲ್ಲಿದೆ. ಆ ಬಗ್ಗೆ ಸ್ವಲ್ಪ ಯೋಚಿಸಿ’ ಎಂದು ಪ್ರಥಮ್​ ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಬಸವರಾಜ ಮುದನೂರ್, ಚಿತ್ರದುರ್ಗ

ಆದ್ಯ ವಚನಕಾರ ದೇವರ ದಾಸಿಮಯ್ಯನ 'ಮುದನೂರು' ನಮ್ಮ ಮೂಲ ಊರು. ಸಂತಗುಣದ ತಾತ ಕಿರಿ ವಯಸ್ಸಿನಲ್ಲೇ ಊರು-ಮನೆ ತೊರೆದು ಬರಿಗೈಲಿ ಬಂದು ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ಸ್ವಾಭಿಮಾನದ ಬದುಕು ಕಟ್ಟಿಕೊಂಡರು. ಅಪ್ಪ ಶಿಕ್ಷಕರಾಗಿ ಬದುಕು ರೂಪಿಸಿಕೊಂಡರು. ನನಗೂ ಜೀವನ ಪಾಠ ಕಲಿಸಿದ 'ಗುರು' & 'ಗಾಡ್ ಫಾದರ್' ನನ್ನಪ್ಪ. ಓದು ಮತ್ತು ಬರವಣಿಗೆ ನನ್ನ ಹವ್ಯಾಸ. ಕೋಟೆ-ಕೊತ್ತಲು‌, ಕಾಡು-ಮೇಡು‌‌‌ ಸುತ್ತಾಟ, ಚಾರಣವೆಂದರೆ ಪ್ರಾಣಪ್ರೀತಿ. ಹಳೇ ಹಿಂದಿ ಹಾಡು, ಗಝಲ್, ಜನಪದ, ಭಾವಗೀತೆಗಳು ಮತ್ತು ಭಜನೆ ನನಗಿಷ್ಟ. ಕಾಲೇಜು ದಿನಗಳಲ್ಲಿದ್ದ ಕ್ರಿಕೆಟ್ ಹುಚ್ಚು ಕಡಿಮೆ ಆಗಿದೆ. ಕೋಟೆನಾಡು‌ ಚಿತ್ರದುರ್ಗ ಜಿಲ್ಲೆಯ ಟಿವಿ9 ಪ್ರತಿನಿಧಿಯಾಗಿ ಒಂದೂವರೆ ದಶಕದಿಂದ ಕಾರ್ಯ ನಿರ್ವಹಿಸುತ್ತಿದ್ದೇನೆ. 'ಹೆಣ್ಣಾಗಿದ್ದೇ ತಪ್ಪಾ?' ಅಭಿಯಾನದ ಮೂಲಕ ಮೌಢ್ಯದ ವಿರುದ್ಧ ಜಾಗೃತಿ, 'ವಿಷಾಮೃತ' ಅಭಿಯಾನದ ಮೂಲಕ ನೀರಿನ ಕುರಿತು ಸರ್ಕಾರದ ಕಣ್ತೆರೆಸುವ ಕಾರ್ಯ, 'ಕೆರೆ ಉಳಿಸಿ' ಅಭಿಯಾನದ ಮೂಲಕ ಜಲಮೂಲಗಳ ಸಂರಕ್ಷಣೆ, 'ಆಪರೇಷನ್ ಚಿನ್ನ' ಸರಣಿ ವರದಿ ಮೂಲಕ ವಂಚಕರ ಜಾಲ ಬೇಧಿಸುವ ಕರ್ತವ್ಯ, ಬುಡಕಟ್ಟು ಸಮುದಾಯಗಳ ಜೀವನ, ಸಂಸ್ಕೃತಿ, ಆಚರಣೆಗಳ ಅನಾವರಣ, ಬಯಲುಸೀಮೆಯ ರೈತರ ಸಂಕಷ್ಟ, ಭದ್ರಾ ಮೇಲ್ದಂಡೆ ಯೋಜನೆ ಅಗತ್ಯತೆ ಕುರಿತು ವರದಿ, ಭ್ರಷ್ಟರ ಮುಖವಾಡ ಬಯಲು, ಕಾವಿಧಾರಿಗಳ ಕಪಟತನ ತೆರೆದಿಡುವುದು ಸೇರಿ ಅನೇಕ ಜೀವಪರ, ಜನಪರ ವರದಿಗಾರಿಕೆಗೆ ಟಿವಿ9 ವಾಹಿನಿಯಲ್ಲಿ ಅವಕಾಶ ಸಿಕ್ಕಿದ್ದು ಹೆಮ್ಮೆಯ ಸಂಗತಿ.

Read More
Follow Us