ಪುನೀತ್ ರಾಜ್ಕುಮಾರ್ (Puneeth Rajkumar) ನಟನೆಯ ‘ಜೇಮ್ಸ್’ ಸಿನಿಮಾ (James Movie) ಮಾರ್ಚ್ 17ರಂದು ತೆರೆಗೆ ಬರುತ್ತಿದೆ. ಈ ಸಿನಿಮಾದ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ. ಈ ಚಿತ್ರದ ಸುದ್ದಿಗೋಷ್ಠಿ ಇಂದು (ಮಾರ್ಚ್ 6) ಬೆಂಗಳೂರಿನಲ್ಲಿ ನಡೆದಿದೆ. ಈ ಕಾರ್ಯಕ್ರಮದ ವೇದಿಕೆ ಮೇಲೆ ಶಿವರಾಜ್ಕುಮಾರ್ (Shivarajkumar) ಮಾತನಾಡಿದ್ದಾರೆ. ಈ ವೇಳೆ ಸಾಕಷ್ಟು ವಿಚಾರಗಳನ್ನು ಅವರು ಹಂಚಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಶಿವಣ್ಣ ಸಾಕಷ್ಟು ಭಾವುಕರಾದರು. ‘ಮಾತನಾಡೋಕೆ ಕಷ್ಟ ಆಗುತ್ತಿದೆ. ನಾಲ್ಕು ತಿಂಗಳಿಂದ ನಗ್ತೀವೀ, ಊಟ ಮಾಡ್ತೀವಿ, ಶೂಟಿಂಗ್ನಲ್ಲಿ ಭಾಗಿ ಆಗ್ತೀವಿ. ಆದರೆ, ಮನಸ್ಸಲ್ಲಿರೋ ನೋವು ಕಡಿಮೆ ಆಗುತ್ತಿಲ್ಲ. ಬದುಕಬೇಕು ಬದುಕುತ್ತಾ ಇದ್ದೇವೆ. ಅಪ್ಪು ಚಿಕ್ಕ ವಯಸ್ಸಿಗೆ ಹೋದ. ನೆನಪಿಸಿಕೊಂಡಾಗೆಲ್ಲ ನೋವು ಜಾಸ್ತಿನೇ ಆಗುತ್ತದೆ. ಪ್ರೆಸ್ಮೀಟ್ನಲ್ಲಿ ನಾನು ಏನು ಮಾತನಾಡೋಕೆ ಸಾಧ್ಯ? ಇಲ್ಲಿ ಮಾತನಾಡೋದು ಕಷ್ಟ’ ಎಂದರು ಶಿವರಾಜ್ಕುಮಾರ್.
‘ಅಪ್ಪು ವಾಯ್ಸ್ಗೆ ನಾನೇ ಡಬ್ಬಿಂಗ್ ಮಾಡಬೇಕು ಎಂದಾಗ ನಾನು ಹೇಳಿದೆ. ಅವನದ್ದೇ ವಾಯ್ಸ್ ಬಳಕೆ ಮಾಡೋಕೆ ಆಗತ್ತ ನೋಡಿ ಎಂದು ಹೇಳಿದ್ದೆ. ಮಿಮಿಕ್ರಿ ಮಾಡುವವರ ಬಳಿ ಮಾಡಿಸೋಕೆ ಟ್ರೈ ಮಾಡಿ ಎಂದಿದ್ದೆ. ಚೇತನ್ ಅವರು ಟ್ರೈ ಮಾಡಿದರು. ಆದರೆ, ಸರಿಯಾಗಿ ಬರಲಿಲ್ಲ. ನಾನು ತುಂಬಾನೇ ಹೆದರಿಕೊಂಡು ಮಾಡಿದೆ. ಅಪ್ಪು ಅವರದ್ದು ಅದ್ಭುತ ವಾಯ್ಸ್ ಆಗಿತ್ತು. ಸ್ವಲ್ಪ ಟ್ರೈ ಮಾಡಿದ್ದೇನೆ. ಅಪ್ಪು ವಾಯ್ಸ್ಗೆ ಎರಡು ದಿನ ಡಬ್ ಮಾಡಿದ್ದೇನೆ’ ಎಂದರು ಶಿವಣ್ಣ.
‘ಜೇಮ್ಸ್, ಇದು ಒಳ್ಳೆಯ ಮನಸ್ಸಿನ ವ್ಯಕ್ತಿಯ ಚಿತ್ರ. ಯಾವಾಗ ಕಾಲ್ ಮಾಡಿದ್ರೂ ಶಿವಣ್ಣ ಅಂತಿದ್ದ. ಯಾವಾಗಲೂ ಹಗ್ ಮಾಡುವಾಗ ಹೃದಯ ಭಾಗ ಟಚ್ ಆಗುವ ರೀತಿಯಲ್ಲಿ ಹಗ್ ಮಾಡುತ್ತಿದ್ದ. ಸಿನಿಮಾದಲ್ಲಿ ಎಲ್ಲರೂ ಚೆನ್ನಾಗಿ ನಟಿಸಿದ್ದಾರೆ. ಪುನೀತ್ ಇಂಡಸ್ಟ್ರಿಯವರ ಹಾಗೂ ಅಭಿಮಾನಿಗಳ ಹಾರ್ಟ್ನಲ್ಲಿ ಸದಾ ಇರ್ತಾನೆ. ಅಪ್ಪು ಅನೇಕರಿಗೆ ಸ್ಫೂರ್ತಿ ಆಗಿದ್ದ’ ಎಂದು ಭಾವುಕರಾದರು ಶಿವಣ್ಣ.
‘ಅಪ್ಪು ಹಾಗೂ ಚಿಕ್ಕಣ್ಣ ಇಬ್ಬರೂ ಕ್ಲೋಸ್ ಆಗಿದ್ದರು. ನಾನು ಚೆನ್ನೈಗೆ ಹೋದಾಗ ನೀವು ಪುನೀತ್ ಅವರ ಅಣ್ಣ ಅಲ್ಲವಾ ಎಂದು ಜನರು ಕೇಳಿದ್ದರು. ಕೃಷ್ಣಗಿರಿಯಲ್ಲಿ ಶೂಟ್ ಮಾಡುವಾಗಲೂ ಅದೇ ರೀತಿ ಪ್ರಶ್ನೆ ಕೇಳಿದ್ದರು. ಅವನ ಅಣ್ಣನಾಗಿ ಇರೋಕೆ ನಾನು ಅದೃಷ್ಟ ಮಾಡಿದ್ದೆ. ಅಪ್ಪು ಯಾವಾಗಲೂ ಬದುಕಿರುತ್ತಾನೆ. ಜೇಮ್ಸ್ ತಂಡಕ್ಕೆ ಒಳ್ಳೆಯದಾಗಲಿ’ ಎಂದು ಮಾತು ಮುಗಿಸಿದರು ಶಿವರಾಜ್ಕುಮಾರ್.
ಇದನ್ನೂ ಓದಿ: ರಸ್ತೆಬದಿ ನಿಂತವರ ಜತೆ ಮನೆಯವರಂತೆ ಮಾತಾಡಿದ ಶಿವರಾಜ್ಕುಮಾರ್; ಸರಳತೆಗೆ ಮತ್ತೊಂದು ಹೆಸರು ಶಿವಣ್ಣ
ಪಟಾಕಿ ಯಾರದ್ದೇ ಆಗಿರ್ಲಿ, ಹಚ್ಚೋದು ಮಾತ್ರ ಪುನೀತ್ ರಾಜ್ಕುಮಾರ್: ವಂಶಿಕಾ ಸೂಪರ್ ಮಾತು
Published On - 8:39 pm, Sun, 6 March 22