AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗುಂಡು ಹಾರಿಸಿ ಸಿನಿಮಾ ನಿರ್ದೇಶಕನಿಗೆ ಬೆದರಿಕೆ, ನಟ ತಾಂಡವ್ ರಾಮ್ ಬಂಧನ

Actor: ‘ಜೋಡಿಹಕ್ಕಿ’, ‘ಭೂಮಿಗೆ ಬಂದ ಭಗವಂತ’ ಇನ್ನೂ ಕೆಲ ಸಿನಿಮಾಗಳಲ್ಲಿ ನಟಿಸಿರುವ ನಟ ತಾಂಡವ್ ರಾಮ್ ಅನ್ನು ಚಂದ್ರಾ ಲೇಔಟ್ ಪೊಲೀಸರು ಬಂಧಿಸಿದ್ದಾರೆ. ನಿರ್ದೇಶಕನ ಮೇಲೆ ಗುಂಡು ಹಾರಿಸಿ ಹತ್ಯೆಗೆ ಯತ್ನಿಸಿದ ಆರೋಪ ತಾಂಡವ್ ಮೇಲಿದೆ.

ಗುಂಡು ಹಾರಿಸಿ ಸಿನಿಮಾ ನಿರ್ದೇಶಕನಿಗೆ ಬೆದರಿಕೆ, ನಟ ತಾಂಡವ್ ರಾಮ್ ಬಂಧನ
ಮಂಜುನಾಥ ಸಿ.
|

Updated on:Nov 19, 2024 | 12:55 PM

Share

‘ಮುಗಿಲ್ ಪೇಟೆ’ಸಿನಿಮಾ ನಿರ್ದೇಶನ ಮಾಡಿದ್ದ ಭರತ್ ಮೇಲೆ ನಟ ತಾಂಡವ್ ರಾಮ್ ಗುಂಡು ಹಾರಿಸಿ ಕೊಲೆಗೆ ಯತ್ನಿಸಿದ್ದಾರೆ. ಬೆಂಗಳೂರಿನ ಚಂದ್ರಾ ಲೇಔಟ್​ನಲ್ಲಿ ಈ ಘಟನೆ ನಡೆದಿದ್ದು, ಆರೋಪಿ ತಾಂಡವ್ ರಾಮ್ ಅನ್ನು ಪೊಲೀಸರು ಬಂದಿಸಿದ್ದಾರೆ. ತಾಂಡವ್ ರಾಮ್ ಕೆಲ ಧಾರಾವಾಹಿಗಳು ಹಾಗೂ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ನಿರ್ದೇಶನ ಮಾಡುತ್ತಿದ್ದ ಸಿನಿಮಾವನ್ನು ಅರ್ಧಕ್ಕೆ ನಿಲ್ಲಿಸಿದ ಕಾರಣ ಸಿಟ್ಟಾಗಿ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ.

ನಿರ್ದೇಶಕ ಭರತ್, ಸಿನಿಮಾ ಒಂದನ್ನು ನಿರ್ದೇಶಿಸುತ್ತಿದ್ದು, ಸಿನಿಮಾದಲ್ಲಿ ತಾಂಡವ್ ರಾಮ್ ನಟಿಸುತ್ತಿದ್ದರು. ಆದರೆ ಆ ಸಿನಿಮಾವನ್ನು ಭರತ್ ನಿಲ್ಲಿಸಿದ್ದರು. ಇದರಿಂದ ಕೋಪಗೊಂಡಿದ್ದ ತಾಂಡವ್ ರಾಮ್, ನಿರ್ದೇಶಕ ಭರತ್​ಗೆ ಬಂದೂಕು ತೋರಿಸಿ ಬೆದರಿಕೆ ಹಾಕಿದ್ದಾರೆ. ಜೊತೆಗೆ ಒಂದು ಸುತ್ತು ಗುಂಡು ಹಾರಿಸಿ ಕೊಲ್ಲುವ ಯತ್ನ ಮಾಡಿದ್ದಾರೆ. ಭರತ್ ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ್ದು, ಆರೋಪಿ ತಾಂಡವ್ ರಾಮ್ ಅನ್ನು ಬಂಧಿಸಲಾಗಿದೆ.

ಇದನ್ನೂ ಓದಿ:ವಿವಾದಾತ್ಮಕ ಹೇಳಿಕೆ ನಟಿ ಕಸ್ತೂರಿ ಶಂಕರ್ ಬಂಧನ

‘ಮುಗಿಲ್ ಪೇಟೆ’ ಸಿನಿಮಾವನ್ನು ಭರತ್ ನಿರ್ದೇಶನ ಮಾಡಿದ್ದರು. ಇನ್ನು ತಾಂಡವ್ ರಾಮ್, ‘ಜೋಡಿಹಕ್ಕಿ’, ‘ಭೂಮಿಗೆ ಬಂದ ಭಗವಂತ’ ಧಾರಾವಾಹಿಗಳಲ್ಲಿ ನಟಿಸಿದ್ದರು. ಕೆಎಂ ಚೈತನ್ಯ ಅವರ ‘ಅಬ್ಬಬ್ಬ’ ಸಿನಿಮಾದಲ್ಲಿಯೂ ನಟಿಸಿದ್ದರು. ಇದೀಗ ತಾಂಡವ್ ರಾಮ್ ಅನ್ನು ಕೊಲೆ ಯತ್ನ ಆರೋಪದಲ್ಲಿ ಪೊಲೀಸರು ಬಂಧಿಸಿದ್ದಾರೆ. ಪರವಾನಗಿ ಹೊಂದಿದ್ದ ಅವರ ಬಂದೂಕನ್ನು ಸಹ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ತಾಂಡವ್ ರಾಮ್ ನಾಯಕನಾಗಿ ನಟಿಸುತ್ತಿದ್ದ ‘ದೇವನಾಂಪ್ರಿಯ’ ಹೆಸರಿನ ಸಿನಿಮಾ ಸೆಟ್ಟೇರಿತ್ತು, ಸಿನಿಮಾ ಅನ್ನು ನಿರ್ದೇಶಕ ಭರತ್ ನಾವುಂಡ ನಿರ್ದೇಶನ ಮಾಡುತ್ತಿದ್ದರು. ಸಿನಿಮಾ ಪ್ರಾರಂಭ ಆಗಿ ಎರಡು ವರ್ಷಗಳಾಗಿತ್ತು. ಆದರೆ ಸಿನಿಮಾವನ್ನು ಭರತ್ ನಿಲ್ಲಿಸಿಬಿಟ್ಟಿದ್ದರಂತೆ. ಸಿನಿಮಾ ನಿರ್ದೇಶನಕ್ಕೆಂದು ಭರತ್​ಗೆ ಆರು ಲಕ್ಷ ರೂಪಾಯಿ ಹಣವನ್ನು ತಾಂಡವ್ ನೀಡಿದ್ದರು. ಅದನ್ನು ವಾಪಸ್ ಕೇಳಿದ್ದರು ತಾಂಡವ್, ನಿನ್ನೆ (ನವೆಂಬರ್ 18) ‘ದೇವನಾಂಪ್ರಿಯ’ ಸಿನಿಮಾದ ನಿರ್ಮಾಪಕ ಕುಮಾರಸ್ವಾಮಿ ಎಂಬುವರ ಚಂದ್ರಾಲೇಔಟ್​ನ ಕಚೇರಿಯಲ್ಲಿ ಭರತ್ ಅನ್ನು ಕರೆಸಿ ಮೀಟಿಂಗ್ ಮಾಡಲಾಗಿತ್ತು. ಈ ವೇಳೆ ತಾಂಡವ್, ನಿರ್ದೇಶಕ ಭರತ್ ಬಳಿ ಹಣ ವಾಪಸ್ ಕೇಳಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು ತಾಂಡವ್ ಬೆದರಿಕೆ ಹಾಕಿದ್ದಾರೆ. ಗುಂಡು ಹಾರಿಸಿ ಹತ್ಯೆಗೂ ಯತ್ನಿಸಿದ್ದಾರೆ ಎನ್ನಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:08 pm, Tue, 19 November 24