ಕಿರುತೆರೆಯಲ್ಲಿ ಖ್ಯಾತಿ ಗಳಿಸಿ, ನಂತರ ಬೆಳ್ಳಿಪರದೆಗೆ ಎಂಟ್ರಿ ನೀಡಿದವರ ಸಂಖ್ಯೆಗೇನೂ ಕೊರತೆ ಇಲ್ಲ. ಸಿನಿಮಾದಲ್ಲಿ ಅದೃಷ್ಟ ಪರೀಕ್ಷೆ ಮಾಡಿಕೊಳ್ಳಬೇಕು ಎಂಬ ತವಕ ಎಲ್ಲ ಕಿರುತೆರೆ ಕಲಾವಿದರಿಗೂ ಇದ್ದೇ ಇರುತ್ತದೆ. ಈಗ ಕನ್ನಡ ಸೀರಿಯಲ್ (Kannada Serial) ಲೋಕದ ಮತ್ತೋರ್ವ ಜನಪ್ರಿಯ ನಟ ರಾಜೇಶ್ ಧ್ರುವ (Rajesh Dhruva) ಅವರು ಕನ್ನಡ ಚಿತ್ರರಂಗದಲ್ಲಿ ಹೀರೋ ಆಗಿ ಗಮನ ಸೆಳೆಯಲು ಮುಂದಾಗಿದ್ದಾರೆ. ‘ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ’ (Sri Balaji Photo Studio Movie) ಚಿತ್ರದಲ್ಲಿ ಅವರು ಮುಖ್ಯ ಪಾತ್ರ ಮಾಡುತ್ತಿದ್ದಾರೆ. ಅನೇಕ ವರ್ಷಗಳ ಕಾಲ ‘ಅಗ್ನಿಸಾಕ್ಷಿ’ ಸೀರಿಯಲ್ನಲ್ಲಿ ಕಾಣಿಸಿಕೊಂಡಿದ್ದ ಅವರು ಈಗ ದೊಡ್ಡ ಪರದೆಯಲ್ಲಿ ಹೀರೋ ಆಗಿ ಬಡ್ತಿ ಪಡೆಯುತ್ತಿದ್ದಾರೆ. ಈ ಚಿತ್ರದ ಬಗ್ಗೆ ಇಲ್ಲಿದೆ ಒಂದಷ್ಟು ಮಾಹಿತಿ..
ಕನ್ನಡ ಚಿತ್ರರಂಗಕ್ಕೆ ಇದು ಸುವರ್ಣ ಕಾಲ. ವಿಶೇಷ ಕಥಾಹಂದರ ಇರುವ ಸಿನಿಮಾಗಳನ್ನು ಜನರು ಕೈ ಹಿಡಿಯುತ್ತಿದ್ದಾರೆ. ಪ್ರಾದೇಶಿಕತೆಯ ಟಚ್ ಇರುವ ಚಿತ್ರಗಳಿಗೆ ವಿಶೇಷ ಮನ್ನಣೆ ಸಿಗುತ್ತಿದೆ. ‘ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ’ ಸಿನಿಮಾ ಕೂಡ ಅದೇ ಕಾರಣದಿಂದ ನಿರೀಕ್ಷೆ ಹುಟ್ಟುಹಾಕುತ್ತಿದೆ. ಈ ಸಿನಿಮಾದಲ್ಲಿ ಉತ್ತರ ಕನ್ನಡ ಪ್ರಾಂತ್ಯದ ಸೊಗಡು ಇರಲಿದೆ.
ಪೂರ್ತಿ ಸಿನಿಮಾವನ್ನು ಶಿರಸಿ, ಯಲ್ಲಾಪುರ, ಹೊನ್ನಾವರ ಸುತ್ತಮುತ್ತ ಚಿತ್ರಿಸಲಾಗಿದೆ. ಶೂಟಿಂಗ್ ಮಾಡಿದ್ದು ಮಾತ್ರವಲ್ಲದೇ, ಸ್ಥಳೀಯ ಪ್ರತಿಭೆಗಳಿಗೆ ಹೆಚ್ಚಿನ ಅವಕಾಶ ನೀಡಲಾಗಿದೆ. ಡೈಲಾಗ್ಗಳು ಕೂಡ ಉತ್ತರ ಕನ್ನಡ ಭಾಗದ ಸೊಗಡಿನಲ್ಲೇ ಇರಲಿವೆ. ಅಲ್ಲಿನ ಹಲವು ಲೊಕೇಷನ್ಗಳು ಪ್ರೇಕ್ಷಕರಿಗೆ ನೋಡಲು ಸಿಗಲಿವೆ ಎಂದು ‘ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ’ ಚಿತ್ರತಂಡ ಹೇಳಿಕೊಂಡಿದೆ.
ಈ ಸಿನಿಮಾದ ಶೀರ್ಷಿಕೆಯೇ ಡಿಫರೆಂಟ್ ಆಗಿದೆ. ‘ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ’ ಎಂದ ತಕ್ಷಣ ಗೊತ್ತಾಗುತ್ತದೆ ಇದು ಫೋಟೋಗ್ರಾಫರ್ ಬದುಕಿನ ಕಥೆ ಎಂದು. ಒಬ್ಬ ಫೋಟೋಗ್ರಾಫರ್ ಹಾಗೂ ಫೋಟೋ ಸ್ಟುಡಿಯೋ ನಡುವಿನ ಭಾವನೆಯ ಕಹಾನಿ ಇದರಲ್ಲಿ ಇರಲಿದೆ. ಕ್ಯೂಟ್ ಲವ್ ಸ್ಟೋರಿಗೂ ಇದರಲ್ಲಿ ಜಾಗ ಇರಲಿದೆ. ಜಮೀನ್ದಾರ ಮತ್ತು ಫೋಟೋಗ್ರಾಫರ್ ನಡುವಿನ ಸಂಘರ್ಷವೂ ಹೈಲೈಟ್ ಆಗಲಿದೆ.
‘ಸೃಜನ ಪ್ರೊಡಕ್ಷನ್’ ಮೂಲಕ ಬಳ್ಳಾರಿ ಮೂಲದ ವೆಂಕಟೇಶ್ವರ ರಾವ್ ಅವರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಇದು ಅವರಿಂದ ನಿರ್ಮಾಣ ಆಗುತ್ತಿರುವ ಮೊದಲ ಸಿನಿಮಾ. ಮುಖ್ಯ ಪಾತ್ರದಲ್ಲಿ ನಟಿಸುವುದರ ಜೊತೆಗೆ ನಿರ್ದೇಶನದ ಜಬಾವ್ದಾರಿಯನ್ನೂ ರಾಜೇಶ್ ಧ್ರುವ ಅವರೇ ನಿಭಾಯಿಸುತ್ತಿದ್ದಾರೆ. ಸದ್ಯ ಕೆಲವು ಪೋಸ್ಟರ್ಗಳು ಹೊರಬಂದಿದ್ದು, ಗಮನ ಸೆಳೆಯುತ್ತಿವೆ.
ರಾಜೇಶ್ ಧ್ರುವ ಜೊತೆಗೆ ರವಿ ಸಾಲಿಯಾನ್, ರಾಧಿಕಾ ಅಚ್ಯುತ್ ರಾವ್, ಸಂಪತ್ ಜೆ. ರಾಮ್, ‘ಕಾಮಿಡಿ ಖಿಲಾಡಿಗಳು 4’ ಖ್ಯಾತಿಯ ಶುಭಲಕ್ಷ್ಮಿ, ‘ಕನ್ಯಾಕುಮಾರಿ’ ಧಾರಾವಾಹಿ ಖ್ಯಾತಿಯ ನಕುಲ್ ಶರ್ಮ, ರಕ್ಷಿತ್, ಬಿಗ್ ಬಾಸ್ ಮಾಜಿ ಸ್ಪರ್ಧಿ ರವಿ ಮೂರೂರು, ಶಿಶಿರ್ ಮುಂತಾದವರು ನಟಿಸಿದ್ದಾರೆ. ಅನೇಕ ಹೊಸ ಕಲಾವಿದರಿಗೂ ಈ ಸಿನಿಮಾ ಮೂಲಕ ಚಾನ್ಸ್ ನೀಡಲಾಗಿದೆ.
ಅಭಿಷೇಕ್ ಶಿರಸಿ ಹಾಗೂ ಪೃಥ್ವಿಕಾಂತ ಕಥೆ-ಚಿತ್ರಕಥೆ ಬರೆದಿದ್ದಾರೆ. ಅಜಿತ್ ಬೊಪ್ಪನಳ್ಳಿ ಸಂಭಾಷಣೆ ಬರೆದಿದ್ದಾರೆ. ಮನೋಜ್ ಸಿನಿ ಸ್ಟುಡಿಯೋ ಛಾಯಾಗ್ರಹಣ, ಗಣಪತಿ ಭಟ್ ಸಂಕಲನದಲ್ಲಿ ‘ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ’ ಸಿನಿಮಾ ಮೂಡಿಬರಲಿದೆ. ಸ್ವಸ್ತಿಕ್ ಕಾರೆಕಾಡ್ ಹಿನ್ನೆಲೆ ಸಂಗೀತ, ಶ್ರೀರಾಮ್ ಗಂಧರ್ವ ಸಂಗೀತ ನಿರ್ದೇಶನ, ಪ್ರಮೋದ್ ಮರವಂತೆ ಅವರಿಗೆ ಸಾಹಿತ್ಯದ ಜವಾಬ್ದಾರಿ ನೀಡಲಾಗಿದೆ. ಶೀಘ್ರದಲ್ಲೇ ಈ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಲು ತಯಾರಿ ಮಾಡಿಕೊಳ್ಳಲಾಗಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.