Kantara Total Collection: 400 ಕೋಟಿ ರೂ. ಗಡಿ ಮುಟ್ಟಿದ ‘ಕಾಂತಾರ’ ಕಲೆಕ್ಷನ್; ಎಲ್ಲ ಭಾಷೆಯ ಬಾಕ್ಸ್ ಆಫೀಸ್ ಲೆಕ್ಕ ಇಲ್ಲಿದೆ
Kantara Movie | Rishab Shetty: ರಿಷಬ್ ಶೆಟ್ಟಿ ನಟನೆಯ ‘ಕಾಂತಾರ’ ಚಿತ್ರದ ಒಟ್ಟು ಕಲೆಕ್ಷನ್ 400 ಕೋಟಿ ರೂ. ಗಡಿ ಮುಟ್ಟಿದೆ. ಕನ್ನಡ ಸಿನಿಮಾದ ಈ ಸಾಧನೆ ನಿಜಕ್ಕೂ ಶ್ಲಾಘನೀಯ.
ಕನ್ನಡದ ‘ಕಾಂತಾರ’ ಸಿನಿಮಾ (Kantara Movie) ಬ್ಲಾಕ್ ಬಸ್ಟರ್ ಹಿಟ್ ಆಗಿದೆ. ಇಂದಿಗೂ ಅನೇಕ ಚಿತ್ರಮಂದಿರಗಳಲ್ಲಿ ಈ ಸಿನಿಮಾ ಪ್ರದರ್ಶನ ಕಾಣುತ್ತಿದೆ. ಕನ್ನಡ ಮಾತ್ರವಲ್ಲದೇ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿಯೂ ಈ ಚಿತ್ರ ಅಬ್ಬರಿಸಿದೆ. ‘ಕಾಂತಾರ’ ಸಿನಿಮಾದ ಬಾಕ್ಸ್ ಆಫೀಸ್ ಕಲೆಕ್ಷನ್ (Kantara Box Office Collection) ನೋಡಿ ಪರಭಾಷೆ ಸಿನಿಮಂದಿಗೂ ಅಚ್ಚರಿ ಆಗಿದೆ. ಕಡಿಮೆ ಬಜೆಟ್ನಲ್ಲಿ ಮೂಡಿಬಂದ ಈ ಸಿನಿಮಾ ಈಗ ಬರೋಬ್ಬರಿ 400 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಬಿಡುಗಡೆಯಾಗಿ 50ಕ್ಕೂ ಹೆಚ್ಚು ದಿನಗಳು ಕಳೆದಿದ್ದರೂ ಈ ಸಿನಿಮಾದ ಹವಾ ಕಡಿಮೆ ಆಗಿಲ್ಲ. ಯಾವ ಯಾವ ಭಾಷೆಯಲ್ಲಿ ಎಷ್ಟು ಕಲೆಕ್ಷನ್ (Kantara Total Collection) ಆಗಿದೆ ಎಂಬುದರ ಲೆಕ್ಕ ಇಲ್ಲಿದೆ..
ಸೆ.30ರಂದು ಕನ್ನಡದಲ್ಲಿ ‘ಕಾಂತಾರ’ ರಿಲೀಸ್ ಆಯಿತು. ಬೇರೆ ಭಾಷೆಯ ಪ್ರೇಕ್ಷಕರಿಂದಲೂ ಬೇಡಿಕೆ ಕೇಳಿಬಂದಿದ್ದರಿಂದ ನಂತರ ಡಬ್ ಮಾಡಿ ಬಿಡುಗಡೆ ಮಾಡಲಾಯಿತು. ಎಲ್ಲ ಭಾಷೆಯಲ್ಲೂ ಈ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಕನ್ನಡದಲ್ಲಿ 168.50 ಕೋಟಿ ರೂಪಾಯಿ ಸಂಗ್ರಹ ಆಗಿದೆ. ಆಂಧ್ರ ಮತ್ತು ತೆಲಂಗಾಣದಲ್ಲಿ ತೆಲುಗು ವರ್ಷನ್ನಿಂದ 60 ಕೋಟಿ ರೂಪಾಯಿ ಹರಿದುಬಂದಿದೆ.
ತಮಿಳುನಾಡಿಲ್ಲಿ 12.70 ಕೋಟಿ ರೂಪಾಯಿ ಹಾಗೂ ಕೇರಳದಲ್ಲಿ 19.20 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ಇನ್ನು, ಉತ್ತರ ಭಾರತದ ಮಂದಿ ಈ ಚಿತ್ರವನ್ನು ಮುಗಿಬಿದ್ದು ನೋಡಿದ್ದಾರೆ. ಹಿಂದಿ ವರ್ಷನ್ನಿಂದ ಬರೋಬ್ಬರಿ 96 ಕೋಟಿ ರೂಪಾಯಿ ಆದಾಯ ಬಂದಿದೆ. ವಿದೇಶದ ಬಾಕ್ಸ್ ಆಫೀಸ್ನಲ್ಲಿ 44.50 ಕೋಟಿ ರೂಪಾಯಿ ಬಾಚಿಕೊಂಡಿದೆ. ಕನ್ನಡದ ಸಿನಿಮಾ ಈ ಪರಿ ಸಾಧನೆ ಮಾಡಿರುವುದು ನಿಜಕ್ಕೂ ಶ್ಲಾಘನೀಯ. ಇಂದಿಗೂ ಅನೇಕ ಕಡೆಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ.
ಈ ಸಿನಿಮಾದಲ್ಲಿನ ರಿಷಬ್ ಶೆಟ್ಟಿ ಅವರ ನಟನೆ ಮತ್ತು ನಿರ್ದೇಶನಕ್ಕೆ ಅಭಿಮಾನಿಗಳಿಂದ ಭರಪೂರ ಮೆಚ್ಚುಗೆ ಸಿಕ್ಕಿದೆ. ಹಣ ಹೂಡಿದ ‘ಹೊಂಬಾಳೆ ಫಿಲ್ಮ್ಸ್’ ಸಂಸ್ಥೆಯ ಪ್ರತಿಷ್ಠೆ ಹೆಚ್ಚಿದೆ. ರಿಷಬ್ ಶೆಟ್ಟಿ ಜೊತೆ ನಟಿಸಿದ ಸಪ್ತಮಿ ಗೌಡ, ಕಿಶೋರ್, ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ, ಮಾನಸಿ ಸುಧೀರ್ ಮುಂತಾದ ಕಲಾವಿದರ ಬೇಡಿಕೆ ಸಹ ಹೆಚ್ಚಾಗಿದೆ.
‘KANTARA’ CROSSES ₹ 400 CR WORLDWIDE… #Kantara territory-wise breakup… Note: GROSS BOC… ⭐️ #Karnataka: ₹ 168.50 cr ⭐️ #Andhra / #Telangana: ₹ 60 cr ⭐️ #TamilNadu: ₹ 12.70 cr ⭐️ #Kerala: ₹ 19.20 cr ⭐️ #Overseas: ₹ 44.50 cr ⭐️ #NorthIndia: ₹ 96 cr ⭐️ Total: ₹ 400.90 cr pic.twitter.com/CmBQbLrZvf
— taran adarsh (@taran_adarsh) November 22, 2022
ತಳುನಾಡಿನ ದೈವಾರಾಧನೆ ಕುರಿತು ‘ಕಾಂತಾರ’ ಸಿನಿಮಾದಲ್ಲಿ ಹೇಳಲಾಗಿದೆ. ಇದು ಒಂದು ಪ್ರಾಂತ್ಯಕ್ಕೆ ಸಂಬಂಧಿಸಿದ ಕಥೆಯಾದರೂ ಕೂಡ ದೇಶಾದ್ಯಂತ ಇರುವ ಪ್ರೇಕ್ಷಕರು ಇದನ್ನು ನೋಡಿ ಮೆಚ್ಚುಗೆ ಸೂಚಿಸಿದ್ದಾರೆ. ಪ್ರಭಾಸ್, ಕಂಗನಾ ರಣಾವತ್, ರಜನಿಕಾಂತ್, ಅನುಷ್ಕಾ ಶೆಟ್ಟಿ, ರಮ್ಯಾ, ವಿವೇಕ್ ಅಗ್ನಿಹೋತ್ರಿ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಕೂಡ ‘ಕಾಂತಾರ’ ಸಿನಿಮಾಗೆ ಫುಲ್ ಮಾರ್ಕ್ಸ್ ನೀಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.