ಅಪ್ಪು-ಅಂಬಿ ಫ್ಯಾನ್ಸ್ ನಡುವೆ ಮನಸ್ತಾಪ? ರಸ್ತೆಗೆ ಪುನೀತ್ ಹೆಸರಿಡುವುದಕ್ಕೆ ಅಂಬರೀಷ್ ಅಭಿಮಾನಿಗಳ ಆಕ್ಷೇಪ
ಪುನೀತ್ ನಿಧನದ ಬಳಿಕ ಹಲವು ರಸ್ತೆಗಳಿಗೆ ಅವರ ಹೆಸರು ಇಡಲಾಗಿದೆ. ಅದೇ ರೀತಿ ನಾಯಂಡಹಳ್ಳಿಯಿಂದ ಬನ್ನೇರುಘಟ್ಟದವರೆಗಿನ ರಸ್ತೆಗೆ ಪುನೀತ್ ಹೆಸರು ಇಡುವಂತೆ ಅಭಿಮಾನಿಗಳು ಮನವಿ ಸಲ್ಲಿಸಿದ್ದರು. ಇದಕ್ಕೆ ಅಂಬರೀಷ್ ಅಭಿಮಾನಿಗಳೇ ಆಕ್ಷೇಪಣೆ ಸಲ್ಲಿಕೆ ಮಾಡುತ್ತಿದ್ದಾರೆ.
ನಟ ಪುನೀತ್ ರಾಜ್ಕುಮಾರ್ (Puneeth Rajkumar) ನಿಧನದ ಬಳಿಕ ಅವರ ಹೆಸರನ್ನು ಅಮರವಾಗಿಸಲು ಅನೇಕ ಕೆಲಸಗಳು ನಡೆಯುತ್ತಿವೆ. ಕೆಲವು ರಸ್ತೆ, ವೃತ್ತಕ್ಕೆ ಪುನೀತ್ ಹೆಸರನ್ನು ಇಡಲಾಗಿದೆ. ಇನ್ನು ಕೆಲ ರಸ್ತೆಗಳಿಗೆ ಪುನೀತ್ ಹೆಸರು ಇಡೋಕೆ ಪ್ಲ್ಯಾನ್ ನಡೆದಿದೆ. ಇದು ಅವರ ಅಭಿಮಾನಿಗಳಿಗೆ ಖುಷಿ ತಂದಿರುವ ವಿಚಾರ. ಅದೇ ರೀತಿ ‘ರೆಬೆಲ್ ಸ್ಟಾರ್’ ಅಂಬರೀಷ್ (Ambareesh) ಅವರಿಗೂ ಇಂಥ ಗೌರವಗಳು ಸಲ್ಲಬೇಕು ಎಂದು ಅಂಬಿ ಫ್ಯಾನ್ಸ್ ಬೇಡಿಕೆ ಇಡುತ್ತಿದ್ದಾರೆ. ಬೆಂಗಳೂರಿನ (Bangalore) ರಸ್ತೆಯೊಂದಕ್ಕೆ ಪುನೀತ್ ಹೆಸರು ಇಡಲು ನಿರ್ಧರಿಸಲಾಗಿದೆ. ಇದಕ್ಕೆ ಅಂಬರೀಷ್ ಅಭಿಮಾನಿಗಳಿಂದಲೇ ವಿರೋಧ ವ್ಯಕ್ತವಾಗಿದೆ. ಆ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.
ಪುನೀತ್ ಅಕ್ಟೋಬರ್ 29ರಂದು ನಿಧನ ಹೊಂದಿದರು. ಆ ಬಳಿಕ ಹಲವು ರಸ್ತೆಗಳಿಗೆ ಅವರ ಹೆಸರು ಇಡಲಾಗಿದೆ. ಅದೇ ರೀತಿ ನಾಯಂಡಹಳ್ಳಿಯಿಂದ ಬನ್ನೇರುಘಟ್ಟದವರೆಗಿನ ರಸ್ತೆಗೆ ಪುನೀತ್ ಹೆಸರು ಇಡುವಂತೆ ಅಭಿಮಾನಿಗಳು ಮನವಿ ಸಲ್ಲಿಸಿದ್ದರು. ಇದಕ್ಕೆ ಬಿಬಿಎಂಪಿ ಒಪ್ಪಿದೆ. ಇತ್ತೀಚೆಗೆ ಈ ಬಗ್ಗೆ ಜಾಹೀರಾತು ನೀಡಿದ್ದ ಬಿಬಿಎಂಪಿ, ಈ ನಿರ್ಧಾರಕ್ಕೆ ಜನವರಿ 29ರ ಒಳಗೆ ಆಕ್ಷೇಪಣೆಗಳಿದ್ದರೆ ಸಲ್ಲಿಸಬಹುದು ಎಂದು ಹೇಳಿತ್ತು. ಈಗ ಇದಕ್ಕೆ ಅಂಬರೀಷ್ ಅಭಿಮಾನಿಗಳೇ ಆಕ್ಷೇಪಣೆ ಸಲ್ಲಿಕೆ ಮಾಡುತ್ತಿದ್ದಾರೆ. ಇದರಿಂದ ಅಪ್ಪು ಅಭಿಮಾನಿಗಳು ಹಾಗೂ ಅಂಬಿ ಅಭಿಮಾನಿಗಳ ನಡುವೆ ಶೀತಲ ಸಮರ ಶುರುವಾಗಲಿದೆಯೇ ಎನ್ನುವ ಪ್ರಶ್ನೆ ಮೂಡಿದೆ.
ಅಂಬರೀಷ್ ಹಾಗೂ ಪುನೀತ್ ನಡುವೆ ಒಳ್ಳೆಯ ಬಾಂಧವ್ಯ ಇತ್ತು. ಅಂಬರೀಷ್ ಅವರನ್ನು ಪುನೀತ್ ಪ್ರೀತಿಯಿಂದ ಮಾಮ ಎಂದು ಕರೆಯುತ್ತಿದ್ದರು. ಆದರೆ, ಇಬ್ಬರೂ ಮೃತಪಟ್ಟ ನಂತರ ರಸ್ತೆಗೆ ಹೆಸರಿಡುವ ವಿಚಾರದಲ್ಲಿ ಅಭಿಮಾನಿಗಳ ಮಧ್ಯೆ ಪ್ರತಿಷ್ಠೆ ಶುರುವಾಗಿದೆ. ‘ನಾಯಂಡಹಳ್ಳಿಯಿಂದ ಬನ್ನೇರುಘಟ್ಟದವರೆಗಿನ ರಸ್ತೆಗೆ ಪುನೀತ್ ಹೆಸರು ಇಡಬಾರದು. ಇದಕ್ಕೆ ಅಂಬಿ ಹೆಸರು ಇಡಬೇಕು. 1993ರ ಸಂದರ್ಭದಲ್ಲಿ ಈ ರಸ್ತೆಗೆ ಅಂಬಿ ಹೆಸರಿಡಲು ಬಾಮಾ ಹರೀಶ್ ಅವರು ಹೋರಾಟ ಮಾಡಿದ್ದರು ಎಂದು ನಮಗೆ ಮಾಹಿತಿ ಸಿಕ್ಕಿದೆ’ ಎಂದು ಅಂಬರೀಷ್ ಅಭಿಮಾನಿಗಳು ಬೇಡಿಕೆ ಇಡುತ್ತಿದ್ದಾರೆ. ಇಂದು (ಜನವರಿ 25) ಬಿಬಿಎಂಪಿ ಕಚೇರಿಗೆ ತೆರಳಿ ಅಂಬರೀಷ್ ಸಂಘಟನೆಗಳು ಈ ಬಗ್ಗೆ ಮನವಿ ಸಲ್ಲಿಕೆ ಮಾಡಲಿವೆ.
ಸದ್ಯ, ಈ ವಿಚಾರ ಬೂದಿ ಮುಚ್ಚಿದ ಕೆಂಡದಂತಿದೆ. ಯಾವುದೇ ಸಂದರ್ಭದಲ್ಲೂ ಈ ವಿಚಾರ ದೊಡ್ಡ ಮಟ್ಟದಲ್ಲಿ ಸ್ಫೋಟಗೊಳ್ಳಬಹುದು. ಈ ಬಗ್ಗೆ ಅಂಬರೀಷ್ ಪತ್ನಿ, ಸಂಸದೆ, ಸುಮಲತಾ ಅಂಬರೀಷ್ ಅವರು ಯಾವ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ: ಅಪ್ಪುಗೆ ಕರ್ನಾಟಕ ರತ್ನ ಸಿಕ್ಕಿದೆ ಅಂದರೆ ಅಂಬರೀಷ್ಗೂ ಸಿಕ್ಕಿದಂತೆ: ಸಂಸದೆ ಸುಮಲತಾ ಅಂಬರೀಷ್ ಹೇಳಿಕೆ
ಅಂಬರೀಷ್ ಸ್ಮಾರಕ ನಿರ್ಮಾಣಕ್ಕೆ 12 ಕೋಟಿ ರೂ. ಅನುದಾನ ನೀಡಲು ಮುಂದಾದ ಸರ್ಕಾರ
Published On - 11:04 am, Tue, 25 January 22