ನೆನಪಿರಲಿ ಪ್ರೇಮ್ ಅವರು ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಅವರ ಮಗಳು ಅಮೃತಾ ಪ್ರೇಮ್ (Amrutha Prem) ಅವರು ಈಗ ‘ಟಗರು ಪಲ್ಯ’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಡುತ್ತಿದ್ದಾರೆ. ಇಂದು (ಜನವರಿ 23) ಅಮೃತಾ ಪ್ರೇಮ್ ಅವರ ಜನ್ಮದಿನ. ಈ ವಿಶೇಷ ದಿನಕ್ಕೆ ‘ಟಗರು ಪಲ್ಯ’ ಚಿತ್ರದ (Tagaru Palya Movie) ಪೋಸ್ಟರ್ ರಿಲೀಸ್ ಆಗಿದೆ. ಈ ಪೋಸ್ಟರ್ನಲ್ಲಿ ಸೀರೆ ಉಟ್ಟು ಅಮೃತಾ ಗಮನ ಸೆಳೆದಿದ್ದಾರೆ.
ಡಾಲಿ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ‘ಟಗರು ಪಲ್ಯ’ ಸಿದ್ಧಗೊಳ್ಳುತ್ತಿದೆ. ಉಮೇಶ್ ಕೆ ಕೃಪ ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾ ಮೂಲಕ ನಟಿಯಾಗಿ ಅಮೃತಾ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಅವರು ಈ ಬಾರಿ ಕಲಾವಿದೆಯಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವುದು ವಿಶೇಷ. ಚಿತ್ರತಂಡದವರು ಹೊಸ ಪೋಸ್ಟರ್ ಮೂಲಕ ಅಮೃತಾಗೆ ಶುಭಕೋರಿದ್ದಾರೆ. ಅನೇಕರು ನಟಿಗೆ ಶುಭಕೋರುತ್ತಿದ್ದಾರೆ.
‘ಟಗರು ಪಲ್ಯ’ ಚಿತ್ರದಲ್ಲಿ ಅಮೃತಾ ಪ್ರೇಮ್ ಅವರು ಹಳ್ಳಿ ಹುಡುಗಿ ಪಾತ್ರವನ್ನು ನಿಭಾಯಿಸುತ್ತಿದ್ದಾರೆ. ಆ ಪಾತ್ರವನ್ನು ಪ್ರತಿನಿಧಿಸುವಂತಿದೆ ಹೊಸ ಪೋಸ್ಟರ್. ಹಳದಿ ಬಣ್ಣದ ಸೀರೆ ಉಟ್ಟು ಅವರು ಗಮನ ಸೆಳೆದಿದ್ದಾರೆ. ಈ ಪಾತ್ರಕ್ಕಾಗಿ ಅವರು ಸಾಕಷ್ಟು ತಯಾರಿ ಮಾಡಿಕೊಂಡಿದ್ದಾರೆ. ಮಂಡ್ಯ ಭಾಗದಲ್ಲಿ ಕಥೆ ಸಾಗುತ್ತದೆ. ಮಂಡ್ಯ ಭಾಗದ ಭಾಷೆಯನ್ನು ಅಮೃತಾ ಕಲಿತಿದ್ದಾರೆ.
ಡಾಲಿ ಧನಂಜಯ್ ಅವರು ತಮ್ಮ ‘ಡಾಲಿ ಪಿಕ್ಚರ್ಸ್’ ಮೂಲಕ ಹೊಸಬರಿಗೆ ಅವಕಾಶ ನೀಡುತ್ತಿದ್ದಾರೆ. ಅವರು ನಿರ್ಮಾಪಕರಾಗಿ ಯಶಸ್ಸು ಕಂಡಿದ್ದಾರೆ. ಈಗ ಡಾಲಿ ಪಿಕ್ಚರ್ಸ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಮೂರನೇ ಸಿನಿಮಾ ‘ಟಗರು ಪಲ್ಯ’. ಈ ಬಾರಿ ಹೊಸ ಪ್ರತಿಭೆಗಳಿಗೆ ಡಾಲಿ ಪಿಕ್ಚರ್ಸ್ ವೇದಿಕೆಯಾಗಿದೆ. ‘ಇಕ್ಕಟ್’ ಖ್ಯಾತಿಯ ನಾಗಭೂಷಣ್ ಕೂಡ ಈ ಚಿತ್ರದಲ್ಲಿ ಮುಖ್ಯಭೂಮಿಕೆಯಲ್ಲಿದ್ದಾರೆ.
‘ಟಗರು ಪಲ್ಯ’ ಚಿತ್ರಕ್ಕೆ ವಾಸುಕಿ ವೈಭವ್ ಸಂಗೀತ ನಿರ್ದೇಶನ ಮಾಡಿದ್ದು, ಎಸ್. ಕೆ. ರಾವ್ ಛಾಯಾಗ್ರಹಣ ಚಿತ್ರಕ್ಕಿದೆ. ನಾಗಭೂಷಣ್-ಅಮೃತಾ ಜತೆಗೆ, ತಾರಾ, ಶರತ್ ಲೋಹಿತಾಶ್ವ, ರಂಗಾಯಣ ರಘು ಮೊದಲಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ