
ಬೆಳಗಾವಿಯ ಸಂತೋಷ್ ಹೆಗಡೆ ಅವರ ನಿರ್ಮಾಣ ಮಾಡಿರುವ ‘ಅನಂತಪಯಣ’ ಸಿನಿಮಾದಿಂದ ಹೊಸ ಹಾಡು ಬಿಡುಗಡೆ ಆಗಿದೆ. ‘ನನ್ನ ಕಂಬಳಿ..’ ಎಂಬ ಈ ರೊಮ್ಯಾಂಟಿಕ್ ಗೀತೆಯನ್ನು ಸತೀಶ್ ಜಾರಕಿಹೊಳಿ ಅವರು ಬಿಡುಗಡೆ ಮಾಡಿದ್ದಾರೆ. ಗಡಿನಾಡು ಬೆಳಗಾವಿಯ ರಾಣಿ ಚೆನ್ನಮ್ಮ ವೃತ್ತದಲ್ಲಿ ಅದ್ದೂರಿಯಾಗಿ ನಡೆದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಈ ಹಾಡನ್ನು ಅನಾವರಣ ಮಾಡಲಾಯಿತು. ಹಾಡು ಬಿಡುಗಡೆ ಮಾಡಿದ ಬಳಿಕ ಸತೀಶ್ ಜಾರಕಿಕೊಳಿ ಅವರು ಮಾತನಾಡಿದರು.
‘ಕುರಿಗಾಹಿಗಳ ಜೀವನದ ಬದುಕು-ಬವಣೆಯ ಕಥೆ ಇಟ್ಟುಕೊಂಡು ನಮ್ಮ ಜಿಲ್ಲೆಯವರೇ ಆದ ನಿರ್ಮಾಪಕ ಸಂತೋಷ್ ಹೆಗಡೆ ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ನಿರ್ದೇಶಕ ಶ್ರೀಕಾಕ ಅವರು ಚಿತ್ರವನ್ನು ಅಚ್ಚುಕಟ್ಟಾಗಿ ತೆರೆಮೇಲೆ ಮೂಡಿಸಿದ್ದಾರೆ. ಇಂಥ ಸಿನಿಮಾಗಳನ್ನು ಚಿತ್ರಮಂದಿರಕ್ಕೆ ಹೋಗಿ ನೋಡುವ ಮೂಲಕ ಬೆಂಬಲಿಸಿ, ಪ್ರೋತ್ಸಾಹಿಸಿ. ಚಿತ್ರತಂಡಕ್ಕೆ ಒಳ್ಳೆಯದಾಗಲಿ’ ಎಂದು ಸತೀಶ್ ಜಾರಕಿಕೊಳಿ ಅವರು ಶುಭ ಹಾರೈಸಿದರು.
ಈ ವೇಳೆ ನಿರ್ಮಾಪಕ ಸಂತೋಷ್ ಹೆಗಡೆ ಮಾತನಾಡಿ ಸಿನಿಮಾ ಬಗ್ಗೆ ಮಾಹಿತಿ ನೀಡಿದರು. ‘ಸಂಚಾರಿ ಕುರಿಗಾಹಿಗಳ ಬದುಕು, ಅವರ ಪರಂಪರೆ, ಹೋರಾಟ, ಅನುಭವಿಸಿದ ನೋವನ್ನು ಈ ಸಿನಿಮಾದಲ್ಲಿ ತೋರಿಸಿದ್ದೇನೆ. ಹಂತ ಹಂತದಲ್ಲೂ ಎಲ್ಲ ರೀತಿಯ ಸವಾಲುಗಳನ್ನು ಎದುರಿಸುತ್ತಾ ಬಂದಿದ್ದಾರೆ. ಸದ್ಯ ಅವರು ಸಮಾಜದಲ್ಲಿ ಎದುರಿಸುತ್ತಿರುವ ಸವಾಲುಗಳೇನು? ಇತ್ತೀಚಿನ ದಿನಗಳಲ್ಲಿ ಏನೆಲ್ಲ ತೊಂದರೆ ಎದುರಿಸಿದರು? ಇದನ್ನೆಲ್ಲ ಇಟ್ಟುಕೊಂಡು ಈ ಸಿನಿಮಾ ಮಾಡಲಾಗಿದೆ’ ಎಂದು ಅವರು ಹೇಳಿದರು.
ನಿರ್ದೇಶಕ ಶ್ರೀಕಾಕ ಅವರು ಮಾತನಾಡಿ, ‘ಅನಂತಪಯಣ ಎಂದರೆ ಊರಿಂದ ಊರಿಗೆ ಹೋಗುವ ಕುರಿಗಾಹಿಗಳ ಪಯಣದ ಕಥೆ. ನಿರ್ದೇಶನದ ಜತೆ ನಾನೇ ನಾಯಕನಾಗಿ ಅಭಿನಯಿಸಿದ್ದೇನೆ. ನಮ್ಮ ಸಿನಿಮಾದಲ್ಲಿ ಆರು ಹಾಡುಗಳು, ಮೂರು ಸಾಹಸ ದೃಶ್ಯಗಳಿವೆ. ಜಸ್ಕರಣ್ ಸಿಂಗ್, ಕೈಲಾಶ್ ಖೇರ್, ಪೃಥ್ವಿ ಭಟ್ ಅವರು ಹಾಡಿದ್ದಾರೆ. ನವೆಂಬರ್ 27ಕ್ಕೆ ಸಿನಿಮಾ ರಿಲೀಸ್ ಮಾಡುತ್ತಿದ್ದೇವೆ’ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ಲಿಂಗಪರಿವರ್ತಿತರ ನೋವು, ನಲಿವಿಗೆ ಹಿಡಿದ ಕನ್ನಡಿ ‘ಭಾವಾಂತರ’
ಈ ಸಿನಿಮಾಗೆ ನಿವಿಷ್ಕಾ ಪಾಟೀಲ್ ಅವರು ನಾಯಕಿ ಆಗಿದ್ದಾರೆ. ಇದು ಅವರ 4ನೇ ಸಿನಿಮಾ. ‘ನಾನು ಕೂಡ ಬೆಳಗಾವಿಯವಳು. ನನ್ನ ಹುಟ್ಟೂರಲ್ಲೇ ನನ್ನ ಸಿನಿಮಾದ ಆಡಿಯೋ ರಿಲೀಸ್ ಆಗಿರುವುದಕ್ಕೆ ಖುಷಿಯಾಗಿದೆ’ ಎಂದು ಅವರು ಹೇಳಿದರು. ‘ಶ್ರೀ ಅಶೋಕ್ ಫಿಲ್ಮ್ಸ್’ ಹಾಗೂ ‘ಎಸ್.ಕೆ. ಫಿಲ್ಮ್ ಫ್ಯಾಕ್ಟರಿ’ ಮೂಲಕ ಈ ಸಿನಿಮಾ ನಿರ್ಮಾಣ ಆಗಿದೆ. ಆಕಾಶ್ ಪರ್ವ ಅವರು ಸಂಗೀತ ನೀಡಿದ್ದಾರೆ. ವಿನೋದ್ ಭಾರತಿ ಛಾಯಾಗ್ರಹಣ, ದೀಪು ಗೌಡ ಸಂಕಲನ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.