ನಟಿ, ನಿರೂಪಕಿ ಅನುಶ್ರೀ, ಪುನೀತ್ ರಾಜ್ಕುಮಾರ್ ಅವರ ದೊಡ್ಡ ಅಭಿಮಾನಿಗಳಲ್ಲಿ ಒಬ್ಬರು. ಅಪ್ಪು ಬದುಕಿದ್ದಾಗಲೂ ಸಹ ಹಲವು ಬಾರಿ ಈ ವಿಷಯವನ್ನು ಅವರು ಹೇಳಿಕೊಂಡಿದ್ದರು. ಅಪ್ಪು ಹೇಗೆ ತಮ್ಮ ವ್ಯಕ್ತಿತ್ವದಿಂದ ತಮ್ಮನ್ನು ಸೆಳೆದಿದ್ದಾರೆ ಎಂದು ಹೇಳಿದ್ದರು, ಅಪ್ಪು ತಮಗೆ ನೀಡಿದ ನೆರವು, ತುಂಬಿದ ಸ್ಪೂರ್ತಿಯ ಬಗ್ಗೆಯೂ ಅನುಶ್ರೀ ಮಾತನಾಡಿದ್ದರು. ಅನುಶ್ರೀ, ಅಪ್ಪು ಅವರ ಅಭಿಮಾನಿ ಆಗಿರುವ ಜೊತೆಗೆ ಅವರ ಹತ್ತಿರದ ಗೆಳೆಯರೂ ಆಗಿದ್ದರು. ಅನುಶ್ರೀ ಅವರ ಯೂಟ್ಯೂಬ್ ಚಾನೆಲ್ನಲ್ಲಿ ಇರುವುದು ಅಪ್ಪು ಅವರ ಚಿತ್ರವೇ. ಇದೀಗ ಅಪ್ಪು ಅವರ ಪುಣ್ಯಸ್ಮರಣೆಯ ದಿನ ಅನುಶ್ರೀ, ಅಪ್ಪು ಅವರನ್ನು ನೆನದು ಭಾವುಕ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.
ಪುನೀತ್ ಅವರು ಹಾಡಿದ್ದ ‘ನಿನ್ನ ಕಂಗಳ ಬಿಸಿಯ ಹನಿಗಳು’ ಹಾಡು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಅದೇ ಸಾಲುಗಳನ್ನು ತುಸು ಆಚೆ ಈಚೆ ಮಾಡಿ ಅಪ್ಪುಗಾಗಿ ಅನುಶ್ರೀ ತಮ್ಮ ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. ‘ನಮ್ಮ ಕಂಗಳ ಬಿಸಿಯ ಹನಿಗಳು ನೂರು ಬಾರಿ ಕೂಗಿವೆ, ನಿಮ್ಮ ನಗುವ ಮೊಗವ ಮೋಡಲು ಕೋಟಿ ಕಂಗಳು ಕಾದಿವೆ. ಮಿಸ್ ಯೂ ಸರ್, ನೀವಿಲ್ಲದೆ ಅಭಿಮಾನ ಇಲ್ಲ, ನೀವಿಲ್ಲದೆ ಅಭಿಮಾನಕೆ ಬೆಲೆ ಇಲ್ಲ, ನೀವಿಲ್ಲದ ಬದುಕಿಗೆ ಕಳೆ ಇಲ್ಲ…’ ಎಂದು ಅನುಶ್ರೀ ಬರೆದುಕೊಂಡಿದ್ದಾರೆ.
ಇದನ್ನೂ ಓದಿ:ನವಿಲಿನಂತೆ ರೆಡಿಯಾದ ಆ್ಯಂಕರ್ ಅನುಶ್ರೀಗೆ ಲೈಕ್ಸ್ ಸುರಿಮಳೆ
ನಿರೂಪಕಿ ಅನುಶ್ರೀ, ಅಪ್ಪು ಅವರ ಬಹುದೊಡ್ಡ ಅಭಿಮಾನಿ. ಅಪ್ಪು ಬಗ್ಗೆ ತಮಗಿರುವ ಅಪಾರ ಪ್ರೀತಿ, ಗೌರವ ಮತ್ತು ಅಭಿಮಾನವನ್ನು ಹಲವು ವೇದಿಕೆಳಲ್ಲಿ ಅನುಶ್ರೀ ಹೇಳಿಕೊಂಡಿದ್ದಾರೆ. ಅಪ್ಪು ನಿಧನ ಹೊಂದಿದ ಬಳಿಕ ಅವರು ನಡೆಸಿಕೊಟ್ಟ ರಿಯಾಲಿಟಿ ಶೋನಲ್ಲಿಯೂ ಸಹ ಅಪ್ಪು ಬಗ್ಗೆ ಸಾಕಷ್ಟು ಮಾತನಾಡಿ ಕಣ್ಣೀರ ಧಾರೆಯೇ ಹರಿಸಿದ್ದರು. ಅಪ್ಪು ಹುಟ್ಟುಹಬ್ಬ ಮತ್ತು ಪುಣ್ಯಸ್ಮರಣೆಯಂದು ಸಮಾಧಿಗೆ ಭೇಟಿ ನೀಡುವ ವ್ಯಕ್ತಿಗಳಲ್ಲಿ ಅನುಶ್ರೀ ಸಹ ಒಬ್ಬರು.
ಅಪ್ಪು ಅವರ ಮೂರನೇ ವರ್ಷದ ಪುಣ್ಯ ಸ್ಮರಣೆ ಇಂದಾಗಿದ್ದು, ಇಂದು ಬೆಳಿಗ್ಗೆಯೇ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರ ಪುತ್ರಿ ಬಂದು ಪುನೀತ್ ಸಮಾಧಿಗೆ ಪೂಜೆ ಮಾಡಿದರು. ರಾಘವೇಂದ್ರ ರಾಜ್ಕುಮಾರ್, ಯುವ ರಾಜ್ಕುಮಾರ್, ನಿರ್ಮಾಪಕ ಕಾರ್ತಿಕ್ ಗೌಡ ಇನ್ನೂ ಹಲವರು ಇಂದು ಬೆಳಿಗ್ಗೆ ಆಗಮಿಸಿ ಸಮಾಧಿಗೆ ಪೂಜೆ ಮಾಡಿದರು. ಸಂಜೆ ವೇಳೆಗೆ ಶಿವರಾಜ್ ಕುಮಾರ್ ಆಗಮಿಸಿ ಅಪ್ಪು ಸಮಾಧಿಗೆ ಪೂಜೆ ಮಾಡಿದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:03 pm, Tue, 29 October 24