ನಟ ಡಾ.ವಿಷ್ಣುವರ್ಧನ್ (Dr Vishnuvardhan) ಅವರ ಅಭಿಮಾನಿಗಳ ಹಲವು ವರ್ಷಗಳ ಕನಸು ನನಸಾಗುತ್ತಿದೆ. ಅವರ ಸ್ಮಾರಕ ಸಿದ್ಧಗೊಂಡಿದ್ದು, ಉದ್ಘಾಟನೆಗೆ ರೆಡಿ ಇದೆ. ಜನವರಿ 29ರಂದು ಮೈಸೂರಿನಲ್ಲಿ ವಿಷ್ಣುವರ್ಧನ್ ಸ್ಮಾರಕ ಉದ್ಘಾಟನೆ ಆಗಲಿದೆ ಎಂಬ ವಿಚಾರವನ್ನು ವಿಷ್ಣುವರ್ಧನ್ ಅಳಿಯ ಅನಿರುದ್ಧ್ ಬಹಿರಂಗಪಡಿಸಿದ್ದರು. ಈ ವಿಶೇಷ ಕ್ಷಣಕ್ಕೆ ಸಾಕ್ಷಿಯಾಗಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿ ಅನೇಕ ಗಣ್ಯರು ಹಾಜರಿ ಹಾಕಲಿದ್ದಾರೆ. ಈಗ ಅನಿರುದ್ಧ್ (Aniruddha Jatkar) ಅವರು ಅಭಿಮಾನ್ ಸ್ಟುಡಿಯೋ ಬಗ್ಗೆ ಹಾಗೂ ಸ್ಮಾರಕ ನಿರ್ಮಾಣದ ಹಾದಿಯ ಬಗ್ಗೆ ಮಾತನಾಡಿದ್ದಾರೆ.
‘ಅಭಿಮಾನ್ ಸ್ಟುಡಿಯೋದಲ್ಲಿ ಅಭಿಮಾನಿಗಳು ಪೂಜೆ ಇತ್ಯಾದಿ ಮಾಡಿಕೊಂಡು ಬರಲಿ. ಆ ಬಗ್ಗೆ ನಮಗೆ ಯಾವತ್ತೂ ಅಭ್ಯಂತರ ಇರಲಿಲ್ಲ, ಇರೋದೂ ಇಲ್ಲ. ಇದ್ದಿದ್ದಿರೆ ಅಭಿಮಾನಿಗಳಿಗೆ ಇಷ್ಟು ವರ್ಷ ಪೂಜೆ ಇತ್ಯಾದಿ ಮಾಡಿಕೊಂಡು ಬರೋದಕ್ಕೆ ಅವಕಾಶಾನೇ ಸಿಗುತ್ತಿರಲಿಲ್ಲ. ನಮ್ಮ ಅಭ್ಯಂತರವೇ ಇಲ್ಲ ಎಂದಮೇಲೆ ನಮ್ಮ ಅನುಮತಿ ಏತಕ್ಕೆ? ಅನುಮತಿ ಕೊಡಬೇಕಾಗಿರೋದು ಬಾಲಣ್ಣ ಅವರ ಮಕ್ಕಳು. ಅಭಿಮಾನಿಗಳೇ ಅವರ ಅನುಮತಿ ಪಡೆದುಕೊಳ್ಳಿ. ನೆನಪಿಡಿ ಅದು ಅವರ ಜಾಗ. ಎಲ್ಲಾ ಸಮಸ್ಯೆ ಬಗೆಹರಿಯುತ್ತದೆ’ ಎಂದು ಪತ್ರ ಆರಂಭಿಸಿದ್ದಾರೆ ಅನಿರುದ್ಧ್.
‘ನಾವು ಯಾವತ್ತೂ ಕೂಡ ಅದು ತೆರವು ಆಗೋದಕ್ಕೆ ಬಯಸಲಿಲ್ಲ, ಬಯಸೋದೂ ಇಲ್ಲ. ಬಾಲಣ್ಣ ಅವರ ಕುಟುಂಬದವರ ಅಪೇಕ್ಷೆ ಈಗ ಏನು? 10 ಗುಂಟೆ ಅವತ್ತು ಯಾಕೆ ಕೊಡಲಿಲ್ಲ? ಆರುವರೆ ವರ್ಷಗಳು ಕೇಳಿ, ಕೇಳಿ, ಎಷ್ಟೇ, ಹೇಗೆೇ ಪ್ರಯತ್ನ ಪಟ್ಟರೂ, ಆಗ ಅವರು ಮನಸ್ಸು ಮಾಡಲಿಲ್ಲ. ಅಪ್ಪಾವರನ್ನು, ಅಮ್ಮಾವರನ್ನು ಅವಮಾನ ಮಾಡಿದ್ದಾರೆ. ಕೊನೆಗೆ ಸರ್ಕಾರವೇ ಬೇರೆಕಡೆ ಮಾಡಿ ಅಂತ ಹೇಳಿದಮೇಲೆ ನಾವು ನಿರ್ಧಾರ ತೆಗೆದುಕೊಳ್ಳೇ ಬೇಕಾಯಿತು. ತುಂಬಾ ನೊಂದುಕೊಂಡಿದ್ದೇವೆ, ಸಾಕಷ್ಟು ಸಂಘರ್ಷಗಳನ್ನು ಎದುರಿಸಿದ್ದೇವೆ, ಹೋರಾಡಿದ್ದೇವೆ. ನಮ್ಮ ಪ್ರಯತ್ನಗಳ ಬಗ್ಗೆ, ಶ್ರಮ, ಶ್ರದ್ಧೆ, ಪ್ರೀತಿ, ಕಾಳಜಿ ಬಗ್ಗೆ ದಯಮಾಡಿ ಪ್ರಶ್ನೆಗಳನ್ನು ಎತ್ತಬೇಡಿ’ ಎಂದು ಅವರು ಕೋರಿದ್ದಾರೆ.
ಇದನ್ನೂ ಓದಿ: ಜ.29ಕ್ಕೆ ಮೈಸೂರಿನಲ್ಲಿ ವಿಷ್ಣುವರ್ಧನ್ ಸ್ಮಾರಕ ಉದ್ಘಾಟನೆ; ಸಿಹಿ ಸುದ್ದಿ ನೀಡಿದ ಅನಿರುದ್ಧ್
‘ಸರ್ಕಾರ ಈಗಾಗಲೆ ಮೈಸೂರಲ್ಲಿ ಸ್ಮಾರಕ ಮಾಡಿದೆ. ಅಲ್ಲಿ ಅಪ್ಪಾವರ ಅಸ್ಥಿಯನ್ನು ಪೂಜಾವಿಧಿಯಿಂದ ಇಟ್ಟು ಅದರ ಮೇಲೆ ಪ್ರತಿಮೆಯನ್ನು ಸ್ಥಾಪಿಸಿದ್ದೇವೆ. ಇದೇ ತಿಂಗಳು 29ಕ್ಕೆ, ಭಾನುವಾರ ಲೋಕಾರ್ಪಣೆ ಆಗಲಿದೆ. ನಾವೂ ಅಲ್ಲಿ ಅತ್ಯಂತ ಶ್ರದ್ಧೆಯಿಂದ ನಮ್ಮ ನಮನಗಳನ್ನು ಸಲ್ಲಿಸುತ್ತೆವೆ. ಅಭಿಮಾನಿಗಳೇ ಈ ಸ್ಮಾರಕ ನಿಮಗಾಗಿ, ನಿಮಗೋಸ್ಕರ. ಯಾವುದೇ ಕಹಿ ಭಾವನೆಗಳು ಇಟ್ಟುಕೊಳ್ಳದೇ, ಬಂದು ಸಂಭ್ರಮಿಸಿ, ಅಪ್ಪಾ ಅವರಿಗೆ ತಮ್ಮ ನಮನಗಳನ್ನು , ಶ್ರದ್ಧಾಂಜಲಿಯನ್ನು ಸಲ್ಲಿಸಿ’ ಎಂದು ಅನಿರುದ್ಧ್ ಪತ್ರ ಕೊನೆಗೊಳಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ