AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Koragajja: ‘ಕರಿ ಹೈದ ಕರಿ ಅಜ್ಜ’ ಚಿತ್ರೀಕರಣ ಮುಕ್ತಾಯ; ದೈವದ ಸಿನಿಮಾ ಮೇಲೆ ಹೆಚ್ಚಿತು ಸಿನಿಪ್ರಿಯರ ನಿರೀಕ್ಷೆ

Kari Haida Kari Ajja: ಕೊರಗಜ್ಜ ದೈವದ ಕುರಿತು ನಿರ್ಮಾಣ ಆಗುತ್ತಿರುವ ‘ಕರಿ ಹೈದ ಕರಿ ಅಜ್ಜ’ ಸಿನಿಮಾ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ. ಮೇ ತಿಂಗಳಲ್ಲಿ ರಿಲೀಸ್​ ಮಾಡಬೇಕು ಎಂಬ ಗುರಿ ಇಟ್ಟಕೊಂಡು ಚಿತ್ರತಂಡ ಕೆಲಸ ಮಾಡುತ್ತಿದೆ.

Koragajja: ‘ಕರಿ ಹೈದ ಕರಿ ಅಜ್ಜ’ ಚಿತ್ರೀಕರಣ ಮುಕ್ತಾಯ; ದೈವದ ಸಿನಿಮಾ ಮೇಲೆ ಹೆಚ್ಚಿತು ಸಿನಿಪ್ರಿಯರ ನಿರೀಕ್ಷೆ
‘ಕರಿ ಹೈದ ಕರಿ ಅಜ್ಜ’ ಸಿನಿಮಾ ತಂಡ
Follow us
TV9 Web
| Updated By: ಮದನ್​ ಕುಮಾರ್​

Updated on:Jan 15, 2023 | 11:51 AM

ಪವಾಡ ಪುರುಷ ಕೊರಗಜ್ಜ (Koragajja) ಜೀವನವನ್ನು ಆಧರಿಸಿ ‘ಕರಿ ಹೈದ ಕರಿ ಅಜ್ಜ’ ಸಿನಿಮಾ ಮೂಡಿಬರುತ್ತಿದೆ. ಈ ಚಿತ್ರಕ್ಕೆ ತ್ರಿವಿಕ್ರಮ ಸಪಲ್ಯ ಬಂಡವಾಳ ಹೂಡುತ್ತಿದ್ದಾರೆ. ಈ ಸಿನಿಮಾದ ಶೂಟಿಂಗ್ ಮುಕ್ತಾಯವಾಗಿದ್ದು, ಆ ಕುರಿತು ಸುದ್ದಿಗೋಷ್ಠಿಯಲ್ಲಿ ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ. ‘ಕರಿ ಹೈದ ಕರಿ ಅಜ್ಜ’ (Kari Haida Kari Ajja) ಚಿತ್ರಕ್ಕೆ ಸುಧೀರ್ ಅತ್ತಾವರ್ ನಿರ್ದೇಶನ ಮಾಡುತ್ತಿದ್ದಾರೆ. ನೃತ್ಯ ನಿರ್ದೇಶಕ, ಡ್ಯಾನ್ಸರ್, ನಟ ಸಂದೀಪ್ ಸೋಪರ್ಕರ್ ಅವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಕೊರಗಜ್ಜನ ಜೊತೆ ಬರುವ ಗುಳಿಗನ್ ಪಾತ್ರವನ್ನು ಅವರು ನಿರ್ವಹಿಸಿದ್ದಾರೆ. ಯಶಸ್ವಿಯಾಗಿ ಶೂಟಿಂಗ್​ ಮುಕ್ತಾಯ ಆಗಿದ್ದರಿಂದ ಕೊರಗಜ್ಜ ದೈವದ ಕೋಲ ಸೇವೆ ನೀಡಲಾಗಿದೆ ಎಂದು ನಿರ್ದೇಶಕ ಸುಧೀರ್ ಅತ್ತಾವರ್ ತಿಳಿಸಿದ್ದಾರೆ.

‘ಕೊರಗ ಜನಾಂಗದ ಹುಡುಗ ದೈವತ್ವ ಪಡೆದುಕೊಂಡ ರೋಚಕ ಕಥೆಯುಳ್ಳ ಚಿತ್ರ ಇದು. ಸಂದೀಪ್ ಸೋಪರ್ಕರ್ ಅವರು ಗುಳಿಗ ದೈವದ ಪಾತ್ರ ಮಾಡಿದ್ದಾರೆ. ಅವರ ಅದ್ಭುತ ನರ್ತನ ಈ ಚಿತ್ರಕ್ಕೆ ಕಳೆ ತಂದಿದೆ. ಈ ಮೊದಲು ಕೊರಗಜ್ಜನ ಬಗ್ಗೆ ಸಿನಿಮಾ ಮಾಡಲು ಸುಮಾರು 20ಕ್ಕೂ ಹೆಚ್ಚು ನಿರ್ಮಾಪಕರು ಕಳೆದ 7-8 ವರ್ಷಗಳಿಂದ ಪ್ರಯತ್ನಿಸುತ್ತಿದ್ದರು. ಆದರೆ ನಾವು ಸಿನಿಮಾ ಕೆಲಸ ಶುರು ಮಾಡುವ ಮೊದಲು ಕೊರಗಜ್ಜ ದೈವದ ಕೋಲ ನಡೆಸಿ ದೈವದ ಅಪ್ಪಣೆ ಕೇಳಿದೆವು. ನಮಗೆ ದೇವರ ಅಪ್ಪಣೆ ಸಿಕ್ಕಮೇಲೆ ಈ ಸಿನಿಮಾ ಮಾಡಲು ಮುಂದಾದೆವು’ ಎಂದು ಚಿತ್ರತಂಡದವರು ಮಾಹಿತಿ ಹಂಚಿಕೊಂಡಿದ್ದಾರೆ.

ಈ ಚಿತ್ರದ ಬಗ್ಗೆ ಸಂದೀಪ್ ಸೋಪರ್ಕರ್ ಮಾತನಾಡಿದ್ದಾರೆ. ‘ಈ ತಂಡದ ಜೊತೆ ಕೆಲಸ ಮಾಡಿದ್ದು ತುಂಬಾ ಖುಷಿ ಕೊಟ್ಟಿದೆ. ನಾನು ಮಾಡಿರುವ ಪಾತ್ರ ಅದ್ಭುತವಾಗಿದ್ದು ಹೊಸ ರೀತಿಯ ಅನುಭವ ನೀಡಿತು. ಶೂಟಿಂಗ್ ಮಾಡುವ ಸಂದರ್ಭದಲ್ಲಿ ಒಂದು ರೌಡಿಗಳ ಗುಂಪು ಗಲಾಟೆ ಮಾಡಿ ಎಲ್ಲರಿಗೂ ಜೀವ ಭಯ ನೀಡಿದ್ದರಿಂದ 2 ದಿನ ಶೂಟಿಂಗ್ ನಿಂತಿತ್ತು. ಇದರಿಂದ ನಿರ್ಮಾಪಕರಿಗೆ ಲಕ್ಷಾಂತರ ರೂಪಾಯಿ ನಷ್ಟ ಆಯ್ತು’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ
Image
Sandalwood: ಕಾಂತಾರದಂತೆ ಕ್ರೇಜ್ ಕ್ರಿಯೇಟ್ ಮಾಡಲಿದೆಯಂತೆ ಈ ‘ಕರಿಹೈದ ಕರಿ ಅಜ್ಜ’ ಸಿನಿಮಾ
Image
Kabir Bedi: ಕೊರಗಜ್ಜ ದೈವದ ಚಿತ್ರದಲ್ಲಿ ನಟಿಸಲು ಕಬೀರ್​ ಬೇಡಿ ಒಪ್ಪಿಕೊಂಡಿದ್ದು ಯಾಕೆ? ಇಲ್ಲಿದೆ ಪೂರ್ತಿ ವಿವರ
Image
Koragajja: ‘ಕೊರಗಜ್ಜ’ ದೈವದ ಕುರಿತ ‘ಕರಿ ಹೈದ ಕರಿ ಅಜ್ಜ’ ಚಿತ್ರದಲ್ಲಿ ನಟಿ ಭವ್ಯ ಪಾತ್ರ ಏನು?
Image
Koragajja: ಕೊರಗಜ್ಜ ದೈವದ ಕುರಿತು ಸೆಟ್ಟೇರಿತು ಹೊಸ ಸಿನಿಮಾ; ‘ಕರಿ ಹೈದ ಕರಿ ಅಜ್ಜ’ ಬಗ್ಗೆ ಇಲ್ಲಿದೆ ಮಾಹಿತಿ..

ಇದನ್ನೂ ಓದಿ: Roopesh Shetty: ‘ನಾನು ಕೊರಗಜ್ಜನ ಆರಾಧನೆ ಮಾಡ್ತೀನಿ, ಬಿಗ್​ ಬಾಸ್​ನಲ್ಲಿ ಅವರೇ ನನ್ನ ಗೆಲ್ಲಿಸಿದ್ದಾರೆ’: ರೂಪೇಶ್​ ಶೆಟ್ಟಿ

ಕೊರಗಜ್ಜನ ಸಾಕು ತಾಯಿ ಪಾತ್ರವನ್ನು ಹಿರಿಯ ನಟಿ ಶ್ರುತಿ ನಿಭಾಯಿಸಿದ್ದಾರೆ. ‘ಈ ಸಿನಿಮಾ ನನ್ನ ಮನಸ್ಸಿನಲ್ಲಿ ವಿಷೇಶವಾದ ಸ್ಥಾನ ಪಡೆಯುತ್ತದೆ. ನಾನಿಲ್ಲಿ ಮೈರಕ್ಕೆ ಬೈದ್ಯೆದಿ ಪಾತ್ರ ಮಾಡಿದ್ದೇನೆ. ದೈವದ ಕಥೆ ಅದ್ಭುತವಾಗಿದ್ದು, ಇದನ್ನು ಆಯ್ಕೆ ಮಾಡಿಕೊಂಡ ನಿರ್ದೇಶಕರ ಧೈರ್ಯ ಮೆಚ್ಚಬೇಕು. ಚಿತ್ರಕ್ಕಾಗಿ ನಿರ್ಮಾಪಕರು ಕೋಟ್ಯಂತರ ರೂಪಾಯಿ ಖರ್ಚು ಮಾಡಿದ್ದಾರೆ. ಯಾರಿಗೂ ಸಿಗದೆ ಇರುವ ಅವಕಾಶ ಈ ತಂಡಕ್ಕೆ ಸಿಕ್ಕಿದೆ’ ಎಂದು ಶ್ರುತಿ ಹೇಳಿದ್ದಾರೆ.

ಇದನ್ನೂ ಓದಿ: Kabir Bedi: ಕೊರಗಜ್ಜ ದೈವದ ಚಿತ್ರದಲ್ಲಿ ನಟಿಸಲು ಕಬೀರ್​ ಬೇಡಿ ಒಪ್ಪಿಕೊಂಡಿದ್ದು ಯಾಕೆ? ಇಲ್ಲಿದೆ ಪೂರ್ತಿ ವಿವರ

ಸಿನಿಮಾದ ಪ್ರಮುಖ ಪಾತ್ರವೊಂದರಲ್ಲಿ ಬಾಲಿವುಡ್ ನಟ ಕಬೀರ್ ಬೇಡಿ ನಟಿಸಿದ್ದಾರೆ. ನಾಯಕನಾಗಿ ಭರತ್ ಸೂರ್ಯ ಅಭಿನಯಿಸಿದ್ದು, ಶೂಟಿಂಗ್ ಮುಗಿಯುವ ತನಕ ಅವರು ಚಪ್ಪಲಿ ಹಾಕಿಲ್ಲ! ನಾಯಕಿಯಾಗಿ ವೃತಿಕಾ ನಟಿಸಿದ್ದಾರೆ. ಹಿರಿಯ ನಟಿ ಭವ್ಯ ಕೂಡ ಈ ಚಿತ್ರದಲ್ಲಿ ಒಂದು ಪಾತ್ರ ಮಾಡಿದ್ದಾರೆ. ಏಕಕಾಲದಲ್ಲಿ ಕನ್ನಡ, ತುಳು ಹಾಗೂ ಮಲಯಾಳಂ ಭಾಷೆಯಲ್ಲಿ ತಯಾರಿಸಲಾಗುತ್ತಿದೆ. ಧೃತಿ ಕ್ರಿಯೇಷನ್ಸ್ ಹಾಗೂ ಸಕ್ಸಸ್ ಫಿಲ್ಮ್ಸ್​ ಬ್ಯಾನರ್​ನಲ್ಲಿ ಈ ಚಿತ್ರ ಮೂಡಿಬರುತ್ತಿದೆ.

ಇದನ್ನೂ ಓದಿ: Koragajja: ‘ಕೊರಗಜ್ಜ’ ದೈವದ ಕುರಿತ ‘ಕರಿ ಹೈದ ಕರಿ ಅಜ್ಜ’ ಚಿತ್ರದಲ್ಲಿ ನಟಿ ಭವ್ಯ ಪಾತ್ರ ಏನು?

‘ತುಳುನಾಡ ಜನರ ಸಂಸ್ಕೃತಿ ತೋರಿಸುವ ಆಸೆ ಇತ್ತು. ಅದು ಈ ಚಿತ್ರದ ಮೂಲಕ ಇಡೇರಿದೆ. ಸೋಮೇಶ್ವರ, ಉಲ್ಲಾಳ, ಮಡಂತ್ಯಾರ್, ಪೇರೂರು, ಅಡ್ಯಾರ್, ಎರ್ಮಾಯ್, ಸಾರಪಲ್ಲ, ಅರ್ಕುಳ, ಮಂಗಳೂರು ಮುಂತಾದ ಸ್ಥಳದಲ್ಲಿ ಶೂಟಿಂಗ್ ಮಾಡಲಾಗಿದೆ. ಮೇ ತಿಂಗಳಲ್ಲಿ ರಿಲೀಸ್ ಮಾಡುವ ಪ್ಲ್ಯಾನ್ ಇದೆ’ ಎಂದು ಚಿತ್ರದ ನಿರ್ಮಾಪಕ ತ್ರಿವಿಕ್ರಮ ಸಪಲ್ಯ ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 11:51 am, Sun, 15 January 23