Anup Bhandari Birthday: ಅನೂಪ್ ಭಂಡಾರಿ ಹುಟ್ಟುಹಬ್ಬಕ್ಕೆ ವಿಕ್ರಾಂತ್ ರೋಣ ಕಿಚ್ಚನಿಂದ ಶುಭ ಹಾರೈಕೆ
ಅನೂಪ್ ಭಂಡಾರಿ ಹುಟ್ಟುಹಬ್ಬ: ಕನ್ನಡ ಚಿತ್ರರಂಗದ ಭರವಸೆಯ ನಿರ್ದೇಶಕ ಅನೂಪ್ ಭಂಡಾರಿ ಅವರಿಗೆ ಮಂಗಳವಾರ (ಮಾ.2) ಜನ್ಮದಿನ ಸಂಭ್ರಮ. ಅವರಿಗೆ ನಟ ಕಿಚ್ಚ ಸುದೀಪ್ ಆತ್ಮೀಯವಾಗಿ ಶುಭ ಹಾರೈಸಿದ್ದಾರೆ.
ವಿಕ್ರಾಂತ್ ರೋಣ ಸಿನಿಮಾ ಮೂಲಕ ಭಾರಿ ನಿರೀಕ್ಷೆ ಮೂಡಿಸಿರುವ ನಿರ್ದೇಶಕ ಅನೂಪ್ ಭಂಡಾರಿ ಅವರು ಮಂಗಳವಾರ (ಮಾ.2) ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದು, ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಮತ್ತು ಅಭಿಮಾನಿಗಳು ಶುಭಾಶಯ ಕೋರುತ್ತಿದ್ದಾರೆ. ಅನೂಪ್ ಜೊತೆ ಮೊದಲ ಬಾರಿಗೆ ಸಿನಿಮಾ ಮಾಡುತ್ತಿರುವ ನಟ ಸುದೀಪ್ ಕೂಡ ಟ್ವಿಟರ್ ಮೂಲಕ ವಿಶ್ ಮಾಡಿದ್ದಾರೆ.
“ನೀವೊಬ್ಬ ಅತ್ಯುತ್ತಮ ವ್ಯಕ್ತಿ. ಪ್ರಾಮಾಣಿಕವಾಗಿ ನೀವು ಮಾಡುವ ಎಲ್ಲ ಕೆಲಸವೂ ನಿಮ್ಮ ವ್ಯಕ್ತಿತ್ವ ಏನೆಂಬುದನ್ನು ತಿಳಿಸುತ್ತದೆ. ನಿಮ್ಮ ಎಲ್ಲ ಕೆಲಸಗಳಿಗೂ ಶುಭವಾಗಲಿ ಅಂತ ನಾನು ಹಾರೈಸುತ್ತೇನೆ ಸ್ನೇಹಿತನೇ. ಹ್ಯಾಪಿ ಬರ್ತ್ಡೇ ಅನೂಪ್” ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ. ಅಭಿಮಾನಿಗಳಿಂದಲೂ ಅನೂಪ್ಗೆ ಶುಭಾಶಯಗಳ ಮಹಾಪೂರ ಹರಿದುಬರುತ್ತಿದೆ.
ರಂಗಿತರಂಗ ಸಿನಿಮಾ ಮೂಲಕ ಕನ್ನಡ ಚಿತ್ರರಂಗದಲ್ಲಿ ಭರವಸೆಯ ನಿರ್ದೇಶಕನಾಗಿ ಗುರುತಿಸಿಕೊಂಡ ಅನೂಪ್ ಅವರಿಗೆ ನಂತರ ರಾಜರಥ ಸಿನಿಮಾದಿಂದ ಹೇಳಿಕೊಳ್ಳುವಂತಹ ಯಶಸ್ಸು ಸಿಗಲಿಲ್ಲ. ಆದರೆ ಈಗ ವಿಕ್ರಾಂತ್ ರೋಣ ಮೂಲಕ ಅಭಿಮಾನಿಗಳ ವಲಯದಲ್ಲಿ ಭಾರಿ ನಿರೀಕ್ಷೆ ಮೂಡಿಸಿದ್ದಾರೆ. ಈಗಾಗಲೇ ಬಿಡುಗಡೆ ಆಗಿರುವ ಟೀಸರ್ಗಳು ಭಾರೀ ಕೌತುಕ ಸೃಷ್ಟಿಸಿವೆ. ದುಬೈನ ಭುರ್ಜ್ ಖಲೀಫಾ ಕಟ್ಟಡದ ಮೇಲೆ ಟೀಸರ್ ಬಿತ್ತರಿಸುವ ಮೂಲಕ ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯುವಲ್ಲಿ ಈ ಚಿತ್ರತಂಡ ಯಶಸ್ವಿಯಾಗಿದೆ.
ಅನೂಪ್ ಅವರ ಕಾರ್ಯವೈಖರಿ ಬಗ್ಗೆ ಸುದೀಪ್ಮೊದಲಿನಿಂದಲೂ ಮೆಚ್ಚುಗೆಯ ಮಾತುಗಳನ್ನು ಹೇಳುತ್ತಾ ಬಂದಿದ್ದಾರೆ. ದೊಡ್ಡ ಕ್ಯಾನ್ವಾಸ್ನಲ್ಲಿ ವಿಕ್ರಾಂತ್ ರೋಣ ತಯಾರಾಗುತ್ತಿದ್ದು, ಹೈದರಾಬಾದ್ನಲ್ಲಿ ಬೃಹತ್ ಕಾಡಿನ ಸೆಟ್ ಹಾಕಿ ಚಿತ್ರೀಕರಣ ಮಾಡಿರುವುದು ವಿಶೇಷ. ಈ ಎಲ್ಲ ಕಾರಣಗಳಿಗಾಗಿ ನಿರ್ದೇಶಕ ಅನೂಪ್ ಮತ್ತು ಇಡೀ ಚಿತ್ರತಂಡ ಮೇಲೆ ಸುದೀಪ್ ಭರವಸೆ ಇಟ್ಟುಕೊಂಡಿದ್ದಾರೆ.
ಇದನ್ನೂ ಓದಿ: ಬ್ಯಾಡ್ಮಿಂಟನ್ನಲ್ಲಿ ಜೊತೆಯಾದ ಕಿಚ್ಚ ಸುದೀಪ್ ಮತ್ತು ಅನೂಪ್ ಭಂಡಾರಿ