
ಕನ್ನಡದ ಕೆಲವಾರು ಸಿನಿಮಾಗಳಲ್ಲಿ ನಟಿಸಿರುವ ಲಾಸ್ಯ ನಾಗರಾಜ್ ಅವರ ಕುಟುಂಬದಲ್ಲಿ ಆತಂಕಕಾರಿ ಘಟನೆ ನಡೆದಿದೆ. ಲಾಸ್ಯ ನಾಗರಾಜ್ ಅವರ ತಾಯಿಯ ಮೇಲೆ ಅವರ ಸ್ವಂತ ಸಹೋದರಿಯೇ ಹಲ್ಲೆ ಮಾಡಿದ್ದಾರೆ. ಹಲ್ಲೆ ಮಾಡಿರುವ ವಿಡಿಯೋ ಇದೀಗ ವೈರಲ್ ಆಗಿದ್ದು, ಅಧಿಕೃತ ಪೊಲೀಸ್ ದೂರು ಇನ್ನೂ ದಾಖಲಾಗಿಲ್ಲ ಎನ್ನಲಾಗುತ್ತಿದೆ.
ಲಾಸ್ಯ ನಾಗರಾಜ್ ಅವರ ತಾಯಿ ಸುಧಾ ನಾಗರಾಜ್ ಬಸವೇಶ್ವರ ನಗರದಲ್ಲಿ ವಾಸವಾಗಿದ್ದಾರೆ. ಅದೇ ಕಟ್ಟಡದ ಒಂದು ಫ್ಲೋರ್ನಲ್ಲಿ ಸುಧಾ ಅವರ ಸಹೋದರಿ ಮಂಗಳ ಶಶಿಧರ್ ವಾಸವಾಗಿದ್ದಾರೆ. ಸುಧಾ ಬಹಳ ವರ್ಷಗಳಿಂದಲೂ ನೃತ್ಯ ತರಬೇತಿ ನಡೆಸುತ್ತಿದ್ದು, ಅದೇ ಕಟ್ಟಡದ ಪಾರ್ಕಿಂಗ್ ಏರಿಯಾನಲ್ಲಿ ನೃತ್ಯ ತರಬೇತಿ ಮಾಡುತ್ತಿದ್ದಾರೆ. ಈ ಕಾರಣಕ್ಕೆ ಸುಧಾ ಹಾಗೂ ಅವರ ಸಹೋದರಿ ಮತ್ತು ಸಹೋದರಿಯ ಪತಿ ಶಶಿಧರ್ ನಡುವೆ ಆಗಾಗ್ಗೆ ಜಗಳ ನಡೆಯುತ್ತಲೇ ಇತ್ತಂತೆ.
ನಿನ್ನೆ (ಏಪ್ರಿಲ್ 30) ಮಂಗಳಾ ಶಶಿಧರ್ ಹಾಗೂ ಶಶಿಧರ್ ಅವರುಗಳು ಸುಧಾ ನಾಗರಾಜ್ ಮೇಲೆ ದೈಹಿಕವಾಗಿ ಹಲ್ಲೆ ಮಾಡಿದ್ದಾರೆ. ಹಲ್ಲೆಯ ವಿಡಿಯೋ ರೆಕಾರ್ಡ್ ಮಾಡಲಾಗಿದ್ದು ವಿಡಿಯೋ ಇದೀಗ ವೈರಲ್ ಆಗಿದೆ. ಪತಿ ಪತ್ನಿ ಇಬ್ಬರೂ ಸೇರಿ ಸುಧಾ ಅವರ ಮೇಲೆ ಹಲ್ಲೆ ಮಾಡಿರುವುದು ವಿಡಿಯೋನಲ್ಲಿ ಗೋಚರಿಸುತ್ತಿದೆ.
ಇದನ್ನೂ ಓದಿ:ಹಾಟ್ ನಟಿ ತೃಪ್ತಿ ದಿಮ್ರಿಯ ವರ್ಕೌಟ್ ಹೀಗಿರುತ್ತೇ ನೋಡಿ
ನಟಿ ಲಾಸ್ಯ ನಾಗರಾಜ್ ಪ್ರಸ್ತುತ ಕೆನಡಾನಲ್ಲಿದ್ದಾರೆ. ಅಲ್ಲಿಂದಲೇ ತಾಯಿಯ ಪರಿಸ್ಥಿತಿ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಬಸವೇಶ್ವರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಅಮಾನುಶ ಘಟನೆ ನಡೆದಿದೆ. ಸುಧಾ ನಾಗರಾಜ್ ಅವರು ನಿನ್ನೆ ಯಾವುದೇ ದೂರು ದಾಖಲಿಸಿರಲಿಲ್ಲ. ಆದರೆ ವಿಡಿಯೋ ವೈರಲ್ ಆಗಿರುವ ಕಾರಣ ಪೊಲೀಸರೇ ದೂರು ದಾಖಲಿಸಿಕೊಂಡು ತನಿಖೆಗೆ ಮುಂದಾಗುವ ಸಾಧ್ಯತೆ ಇದೆ.
ನಟಿ ಲಾಸ್ಯ ನಾಗರಾಜ್ ಕನ್ನಡದ ‘ಮಂಗಳವಾರ ರಜಾದಿನ’, ‘ಲೈಫ್ ಈಸ್ ಬ್ಯೂಟಿಫುಲ್’, ಶಿವರಾಜ್ ಕುಮಾರ್ ನಟನೆಯ ‘ವೇದ’ ಇನ್ನೂ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಲಾಸ್ಯ ಪ್ರಸ್ತುತ ಕೆನಡಾನಲ್ಲಿದ್ದು ಅಲ್ಲಿ ಸಿನಿಮಾ ತರಬೇತಿ ಪಡೆಯುತ್ತಿದ್ದಾರೆ. ತಾಯಿಯ ಮೇಲೆ ಹಲ್ಲೆ ಆಗಿರುವ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ