ಉಪೇಂದ್ರ ಹೀರೋ ಆಗಲು ಕಾರಣವಾಗಿದ್ದೇ ಬಿ. ಸರೋಜಾದೇವಿ; ಆ ಘಟನೆ ನೆನೆದ ರಿಯಲ್ ಸ್ಟಾರ್

ಉಪೇಂದ್ರ ಮಾತ್ರವಲ್ಲದೇ ಅನೇಕರಿಗೆ ಬಿ. ಸರೋಜಾದೇವಿ ಅವರು ಸಹಾಯ ಮಾಡಿದ್ದರು. ಚಿತ್ರರಂಗಕ್ಕೆ ಅವರು ಹಲವು ರೀತಿಯಲ್ಲಿ ಕೊಡುಗೆ ನೀಡಿದ್ದರು. ಆ ಕುರಿತು ಉಪೇಂದ್ರ ಮಾತನಾಡಿದ್ದಾರೆ. ‘ಸರ್ಕಾರ ಗಮನ ನೀಡಬೇಕು. ಬಿ. ಸರೋಜಾದೇವಿ ಅವರ ಹೆಸರಿನಲ್ಲಿ ಒಂದು ಪ್ರಶಸ್ತಿ ಸ್ಥಾಪಿಸಬೇಕು’ ಎಂದು ಉಪೇಂದ್ರ ಹೇಳಿದ್ದಾರೆ.

ಉಪೇಂದ್ರ ಹೀರೋ ಆಗಲು ಕಾರಣವಾಗಿದ್ದೇ ಬಿ. ಸರೋಜಾದೇವಿ; ಆ ಘಟನೆ ನೆನೆದ ರಿಯಲ್ ಸ್ಟಾರ್
Upendra, B Saroja Devi

Updated on: Jul 25, 2025 | 5:13 PM

ಇತ್ತೀಚೆಗೆ ನಿಧನರಾದ ಖ್ಯಾತ ನಟಿ ಬಿ. ಸರೋಜಾದೇವಿ (B Saroja Devi) ಅವರ 13ನೇ ದಿನದ ಪುಣ್ಯತಿಥಿ ಮಾಡಲಾಗಿದೆ. ಇದರಲ್ಲಿ ಅವರ ಕುಟುಂಬದವರು ಮಾತ್ರವಲ್ಲದೇ ಕನ್ನಡ ಚಿತ್ರರಂಗದ ಹಲವು ಸೆಲೆಬ್ರಿಟಿಗಳು ಭಾಗಿ ಆಗಿದ್ದಾರೆ. ಸರೋಜಾದೇವಿ ಜೊತೆಗಿನ ಒಡನಾಟ, ಚಿತ್ರರಂಗಕ್ಕೆ ಅವರು ನೀಡಿದ ಕೊಡುಗೆಯನ್ನು ಎಲ್ಲರೂ ಸ್ಮರಿಸಿಕೊಂಡಿದ್ದಾರೆ. ನಟ, ನಿರ್ದೇಶಕ ಉಪೇಂದ್ರ ಅವರಿಗೆ ಬಿ. ಸರೋಜಾದೇವಿ ಅವರ ಬಗ್ಗೆ ಅಪಾರ ಗೌರವ ಇದೆ. ಅದಕ್ಕೆ ಕಾರಣ ಏನು ಎಂಬುದನ್ನು ಅವರು ಹೇಳಿದ್ದಾರೆ. ‘ಎ’ ಸಿನಿಮಾದ (A Movie) ಬಿಡುಗಡೆ ವೇಳೆ ಸರೋಜಾದೇವಿ ಅವರು ಮಾಡಿದ್ದ ಸಹಾಯವನ್ನು ಉಪೇಂದ್ರ (Upendra) ಇಂದಿಗೂ ಸ್ಮರಿಸಿಕೊಳ್ಳುತ್ತಾರೆ.

‘ಓಂ’, ‘ಶ್’ ಮುಂತಾದ ಸಿನಿಮಾಗಳ ಮೂಲಕ ನಿರ್ದೇಶಕನಾಗಿ ತಮ್ಮ ಸಾಮರ್ಥ್ಯ ಏನು ಎಂಬುದನ್ನು ಉಪೇಂದ್ರ ಅವರು ಸಾಬೀತು ಮಾಡಿದ್ದರು. ಬಳಿಕ ಅವರು ಹೀರೋ ಆಗಲು ನಿರ್ಧರಿಸಿದರು. ಅವರು ಹೀರೋ ಆಗಿ ನಟಿಸಿದ ಮೊದಲ ಸಿನಿಮಾ ‘ಎ’ ತುಂಬಾ ಭಿನ್ನವಾಗಿ ಮೂಡಿಬಂದಿತ್ತು. ಆದರೆ ಆ ಸಿನಿಮಾಗೆ ಸೆನ್ಸಾರ್ ಸಮಸ್ಯೆ ಆಗಿತ್ತು. ಆದರೆ ಆ ಸಮಸ್ಯೆಯನ್ನು ಪರಿಹರಿಸಿದವರೇ ಬಿ. ಸರೋಜಾದೇವಿ.

‘ಎ ಸಿನಿಮಾವನ್ನು ಸೆನ್ಸಾರ್ ಮಾಡಲು ಸಾಧ್ಯವಿಲ್ಲ. ಅದು ಬಿಡುಗಡೆಗೆ ಯೋಗ್ಯವಲ್ಲದ ಸಿನಿಮಾ ಎಂಬ ಸಂದರ್ಭ ಬಂದಿತ್ತು. ಆಗ ನಮ್ಮ ಸಿನಿಮಾ ರಿವೈಸಿಂಗ್ ಕಮಿಟಿಗೆ ಹೋದಾಗ ಸರೋಜಾದೇವಿ ಅವರು ನನ್ನನ್ನು ಒಳಗೆ ಕರೆದ ರೀತಿಯೇ ಆಶ್ಚರ್ಯ. ಎದ್ದು ನಿಂತುಕೊಂಡು, ಚಪ್ಪಾಳೆ ತಟ್ಟಿ ನನ್ನನ್ನು ಕರೆದರು. ಮೊದಲ ಬಾರಿಗೆ ಎ ಸಿನಿಮಾವನ್ನು ಹೊಗಳಿದ ಮಹಾತಾಯಿ ಅವರು’ ಎಂದಿದ್ದಾರೆ ಉಪೇಂದ್ರ.

ಇದನ್ನೂ ಓದಿ
‘ಅತ್ಯಂತ ದುಃಖವಾಗಿದೆ’: ಬಿ. ಸರೋಜಾದೇವಿ ನಿಧನಕ್ಕೆ ಕಂಬನಿ ಮಿಡಿದ ನಟ ದರ್ಶನ್
ಸರೋಜಾದೇವಿ ಅವರೊಂದಿಗಿನ ನೆನಪಿನ ಬುತ್ತಿ ಬಿಚ್ಚಿಟ್ಟ ನಟ ಜಗ್ಗೇಶ್
ಪುನೀತ್ ನನ್ನ ಮಗ ಆಗಿರಬೇಕಿತ್ತು ಎಂದುಕೊಂಡಿದ್ದ ಸರೋಜಾ ದೇವಿ
ತಾಯಿಗೆ ಕೊಟ್ಟ ಮಾತನ್ನು ಕೊನೆವರೆಗೂ ಉಳಿಸಿಕೊಂಡ ಸರೋಜಾ ದೇವಿ

‘ಅಂದು ಬಿ. ಸರೋಜಾದೇವಿ ಅವರು ಎ ಚಿತ್ರವನ್ನು ಹೊಗಳಿ, ಸೆನ್ಸಾರ್ ಮಾಡಿಕೊಟ್ಟರು. ನೀವು ಇಲ್ಲದೇ ಇದ್ದಿದ್ದರೆ ನಾನು ಹೀರೋನೇ ಆಗುತ್ತಿರಲಿಲ್ಲ ಎಂದು ಅವರು ಸಿಕ್ಕಾಗೆಲ್ಲ ನಾನು ಹೇಳುತ್ತಿದ್ದೆ’ ಎಂದು ಉಪೇಂದ್ರ ಹೇಳಿದ್ದಾರೆ. ಆ ಮೂಲಕ ತಮಗೆ ಸಹಾಯ ಮಾಡಿದ ಸರೋಜಾದೇವಿ ಅವರನ್ನು ಉಪೇಂದ್ರ ಸ್ಮರಿಸಿದ್ದಾರೆ. ‘ಎ’ ಸಿನಿಮಾ ಸೂಪರ್ ಹಿಟ್ ಆದ ಬಳಿಕ ಉಪೇಂದ್ರ ಅವರು ಬಹುಬೇಡಿಕೆಯ ಹೀರೋ ಆಗಿ ಬೆಳೆದರು.

ಇದನ್ನೂ ಓದಿ: ಮಲ್ಲೇಶ್ವರಂ 11ನೇ ಮುಖ್ಯರಸ್ತೆಗೆ ಸರೋಜಾ ದೇವಿ ಹೆಸರು: ಶಾಸಕ ಅಶ್ವತ್ಥನಾರಾಯಣ

‘ರಾಜ್​ಕುಮಾರ್, ವಿಷ್ಣುವರ್ಧನ್ ಅವರ ಹೆಸರಿನಲ್ಲಿ ದೊಡ್ಡ ದೊಡ್ಡ ಪ್ರಶಸ್ತಿಗಳು ಇದೆಯಲ್ಲ ಅದೇ ರೀತಿ ಸರೋಜಮ್ಮ ಅವರ ಹೆಸರಿನಲ್ಲಿ ಕೂಡ ಒಂದು ಪ್ರಶಸ್ತಿ ನೀಡಬೇಕು ಎಂಬುದು ಎಲ್ಲರ ಆಶಯ. ಎರಡು ಬಾರಿ ಅವರು ಸೆಂಟ್ರಲ್ ಜ್ಯೂರಿ ಆಗಿದ್ದರು. ಅವರ ಸಾಧನೆ ಬಗ್ಗೆ ಎಲ್ಲರಿಗೂ ಗೊತ್ತು. ಆ ಬಗ್ಗೆ ಮಾತನಾಡಲು ನಾನು ತುಂಬಾ ಚಿಕ್ಕವನು’ ಎಂದಿದ್ದಾರೆ ಉಪೇಂದ್ರ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.