ದರ್ಶನ್ಗೆ ಹೈಕೋರ್ಟ್ ಜಾಮೀನು ನೀಡಿದ್ದಕ್ಕೆ ಸುಪ್ರೀಂ ಅಸಮಾಧಾನ; ರಮ್ಯಾ ಪ್ರತಿಕ್ರಿಯೆ
ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆ ಮುಕ್ತಾಯ ಆಗಿದೆ. ಈ ಕುರಿತು ನಟಿ ರಮ್ಯಾ ದಿವ್ಯ ಸ್ಪಂದನಾ ಅವರು ಸೋಶಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯಿಸಿದ್ದಾರೆ. ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗುವ ಭರವಸೆ ಕಾಣಿಸುತ್ತಿದೆ ಎಂದು ರಮ್ಯಾ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನಟ ದರ್ಶನ್ (Darshan) ಅವರಿಗೆ ಢವಢವ ಶುರುವಾಗಿದೆ. ಅವರಿಗೆ ಹೈಕೋರ್ಟ್ ಜಾಮೀನು ನೀಡಿದ್ದನ್ನು ಸುಪ್ರೀಂ ಕೋರ್ಟ್ನಲ್ಲಿ ಕರ್ನಾಟಕ ಸರ್ಕಾರ ಪ್ರಶ್ನಿಸಿದೆ. ಇದರ ವಿಚಾರಣೆ ನಡೆದಿದ್ದು, ಹೈಕೋರ್ಟ್ ನಿರ್ಧಾರದ ಬಗ್ಗೆ ಸುಪ್ರೀಂ ಕೋರ್ಟ್ (Supreme Court) ಅಸಮಾಧಾನ ವ್ಯಕ್ತಪಡಿಸಿದೆ. ಹಾಗಾಗಿ ದರ್ಶನ್ ಅವರ ಜಾಮೀನು ರದ್ದಾಗುವ ಸಾಧ್ಯತೆ ಇದೆ. ಈ ಎಲ್ಲ ಬೆಳವಣಿಗಳ ಕುರಿತಂತೆ ನಟಿ ರಮ್ಯಾ (Ramya Divya Spandana) ಅವರು ಪ್ರತಿಕ್ರಿಯೆ ನೀಡಿದ್ದಾರೆ. ಇಂದಿನ (ಜುಲೈ 24) ವಿಚಾರಣೆ ಬಳಿಕ ಮಾಧ್ಯಮಗಳ ವರದಿಯನ್ನು ಉಲ್ಲೇಖಿಸಿ ರಮ್ಯಾ ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
‘ಭಾರತದ ಜನಸಾಮಾನ್ಯರಿಗೆ ಸುಪ್ರೀಂ ಕೋರ್ಟ್ ಒಂದು ಭರವಸೆಯ ಬೆಳಕಾಗಿದೆ. ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗುವ ಭರವಸೆ ಮೂಡಿದೆ’ ಎಂದು ರಮ್ಯಾ ಅವರು ಇನ್ಸ್ಟಾಗ್ರಾಮ್ ಸ್ಟೋರಿ ಹಾಗೂ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಬರೆದುಕೊಂಡಿದ್ದಾರೆ. ದರ್ಶನ್ ಸೇರಿದಂತೆ 7 ಆರೋಪಿಗಳಿಗೆ ಜಾಮೀನು ನೀಡುವಾಗ ಹೈಕೋರ್ಟ್ ತೆಗೆದುಕೊಂಡ ನಿರ್ಧಾರಕ್ಕೆ ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
ಸದ್ಯ ದರ್ಶನ್ ಅವರು ‘ದಿ ಡೆವಿಲ್’ ಸಿನಿಮಾದ ಶೂಟಿಂಗ್ನಲ್ಲಿ ತೊಡಗಿಕೊಂಡಿದ್ದಾರೆ. ಚಿತ್ರೀಕರಣದ ಸಲುವಾಗಿ ಅವರು ವಿದೇಶಕ್ಕೆ ತೆರಳಿದ್ದಾರೆ. ಒಂದು ವೇಳೆ ಜಾಮೀನು ರದ್ದಾದರೆ ಅವರು ಪುನಃ ಜೈಲುವಾಸ ಅನುಭವಿಸಬೇಕಾಗುತ್ತದೆ. ರೇಣುಕಾಸ್ವಾಮಿ ಹತ್ಯೆಯ ವಿವರಗಳನ್ನು ಕೇಳಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಿಗೂ ಅಚ್ಚರಿ ಆಗಿದೆ.
SC is a ray of hope for the common people of India- justice for the family of Renukaswamy 🤞🏽https://t.co/Qr0biXBYgY pic.twitter.com/wSSi3klhTv
— Ramya/Divya Spandana (@divyaspandana) July 24, 2025
ಪ್ರಾಸಿಕ್ಯೂಷನ್ ಹಾಗೂ ಆರೋಪಿಗಳ ಪರ ವಕೀಲರ ವಾದವನ್ನು ಸುಪ್ರೀಂ ಕೋರ್ಟ್ ಆಲಿಸಿದೆ. ಎರಡೂ ಕಡೆಯ ವಾದ-ಪ್ರತಿವಾದ ಆಲಿಸಿದ ನಂತರ ಆದೇಶವನ್ನು ಕಾಯ್ದಿರಿಸಿದ. ಒಂದು ವಾರದಲ್ಲಿ ಮೂರು ಪುಟಗಳ ಲಿಖಿತ ವಾದಾಂಶ ಸಲ್ಲಿಸಲು ಸೂಚನೆ ನೀಡಿದೆ. 10 ದಿನಗಳ ನಂತರವೇ ದರ್ಶನ್ ಜಾಮೀನು ಅರ್ಜಿ ಕುರಿತು ತೀರ್ಪು ಬರಲಿದೆ.
ಇದನ್ನೂ ಓದಿ: ದರ್ಶನ್ಗೆ ಜಾಮೀನು ಕೊಟ್ಟ ಹೈಕೋರ್ಟ್ ಬಗ್ಗೆ ನೇರವಾಗಿ ಅಸಮಾಧಾನ ಹೊರಹಾಕಿದ ಸುಪ್ರೀಂ
ಪವಿತ್ರಾ ಗೌಡ ಅವರಿಗೆ ಅಶ್ಲೀಲ ಸಂದೇಶ ಕಳಿಸಿದ ಎಂಬ ಕಾರಣಕ್ಕಾಗಿ ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಬೆಂಗಳೂರಿಗೆ ಕರೆದುಕೊಂಡು ಬಂದು ಹತ್ಯೆ ಮಾಡಲಾಗಿತ್ತು. ಬಳಿಕ ಆತನ ಶವ ಪತ್ತೆ ಆಯಿತು. ಈ ಕೇಸ್ನಲ್ಲಿ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಹಲವರು ಆರೋಪಿಗಳಾಗಿದ್ದಾರೆ. 7 ಜನರ ಜಾಮೀನು ರದ್ದು ಮಾಡಬೇಕು ಎಂದು ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿತ್ತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:15 pm, Thu, 24 July 25








