ಕನ್ನಡವೂ ಸೇರಿದಂತೆ ಐದು ಭಾಷೆಗಳಲ್ಲಿ ರಿಲೀಸ್ಗೆ ರೆಡಿ ಆಗಿರುವ ‘ಬನಾರಸ್’ ಸಿನಿಮಾ (Banaras Movie) ಬಗ್ಗೆ ಚರ್ಚೆ ಜೋರಾಗಿದೆ. ಒಂದೊಂದೇ ಝಲಕ್ ಮೂಲಕ ಕ್ರೇಜ್ ಹುಟ್ಟಿಸಿರುವ ಜಯತೀರ್ಥ ನಿರ್ದೇಶನದ ಈ ಚಿತ್ರದ ರಿಲೀಸ್ಗೆ ದಿನಗಣನೆ ಶುರುವಾಗಿದೆ. ಇಂಥ ಸಮಯದಲ್ಲಿ ಚಿತ್ರತಂಡದಿಂದ ಸರ್ಪ್ರೈಸಿಂಗ್ ವಿಚಾರಗಳು, ಸುದ್ದಿಗಳು ಹೊರ ಬರುತ್ತಿದೆ. ‘ಬನಾರಸ್’ ತಂಡದಿಂದ ಈಗ ಹೊರಬಂದ ಹೊಸಸುದ್ದಿ ಕೇಳಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಕೇರಳದ ಪ್ರತಿಷ್ಠಿತ ವಿತರಣಾ ಸಂಸ್ಥೆಯಾಗಿರುವ ‘ಮುಳಕುಪಾಡಂ’ ‘ಬನಾರಸ್’ ವಿತರಣಾ ಹಕ್ಕುಗಳನ್ನು ಪಡೆದುಕೊಂಡಿದೆ. ಹಲವಾರು ಹಿಟ್ ಚಿತ್ರಗಳನ್ನು ವಿತರಿಸಿರುವ ಈ ಖ್ಯಾತ ಸಂಸ್ಥೆಯ ತೆಕ್ಕೆಗೆ ‘ಬನಾರಸ್’ ವಿತರಣೆಯ ಹಕ್ಕು ಒಲಿದಿರುವುದು ಚಿತ್ರತಂಡದ ಖುಷಿ ಹೆಚ್ಚಿಸಿದೆ.
ಝೈದ್ ಖಾನ್ ನಾಯಕನಾಗಿ ನಟಿಸಿರುವ ‘ಬನಾರಸ್’ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಈಗ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿರುವಾಗಲೇ ಮುಳಕುಪಾಡಂ ಸಂಸ್ಥೆ ಖುದ್ದು ತಾನೇ ಅಧಿಕೃತವಾಗಿ ಈ ವಿಚಾರವನ್ನ ಘೋಷಿಸಿದೆ. ಉದ್ಯಮಿಯಾಗಿ ಥಾಮಸ್ ಆಂಟೋನಿ ಹೆಸರು ಮಾಡಿದ್ದಾರೆ. ಅವರು ಮಲಕುಪ್ಪಡಮ್ ಫಿಲ್ಮ್ಸ್ ಮೂಲಕ ಹಲವಾರು ಚಿತ್ರಗಳನ್ನು ನಿರ್ಮಾಣ ಮಾಡಿದ್ದಾರೆ. ಈ ಸಂಸ್ಥೆ ಹಂಚಿಕೆ ಮಾಡಿದ ಚಿತ್ರಗಳೆಲ್ಲವೂ ಉತ್ತಮ ಗುಣಮಟ್ಟದ ಹಾಗೂ ನಿರೀಕ್ಷಿತ ಚಿತ್ರಗಳ ಪಟ್ಟಿಯಲ್ಲೇ ಇದ್ದವು. ‘ಬನಾರಸ್’ ಚಿತ್ರವನ್ನು ಈ ಸಂಸ್ಥೆ ಖರೀದಿಸಿರುವುದರಿಂದ ಕುತೂಹಲ ಹೆಚ್ಚಿದೆ.
ಮೊದಲ ಬಾರಿಗೆ ಸಿನಿಪಯಣ ಆರಂಭಿಸಿ ತಮ್ಮ ಅದೃಷ್ಟ ಪರೀಕ್ಷೆಗೆ ನಿಂತಿದ್ದಾರೆ ನಟ ಝೈದ್ ಖಾನ್. ಅವರ ಮೊದಲ ಚಿತ್ರವೇ ಇಷ್ಟೊಂದು ದಾಖಲೆಯನ್ನು ನಿರ್ಮಿಸುತ್ತಿರುವುದು ಹೆಮ್ಮೆಯ ಸಂಗತಿ. ಮೊದಲಿನಿಂದಲೂ ಸಿನಿಮಾ ಆಯ್ಕೆಯಲ್ಲಿ ರಾಜಿಯಾಗದೇ ಉತ್ತಮ ಗುಣಮಟ್ಟ ಕಾದುಕೊಳ್ಳಲು ಮುಳಕುಪಾಡಂ ಸಂಸ್ಥೆ ಹೆಸರುವಾಸಿಯಾಗಿದೆ. ಈಗ ‘ಬನಾರಸ್’ ಚಿತ್ರವನ್ನು ಈ ಸಂಸ್ಥೆ ದೊಡ್ಡ ಮೊತ್ತಕ್ಕೆ ಖರೀದಿಸಿದೆ ಎಂದರೆ ಅದಕ್ಕಿಂತ ಬೇರೆ ಖುಷಿ ಚಿತ್ರತಂಡಕ್ಕೆ ಬೇಕಿಲ್ಲ. ಚಿತ್ರ ರಿಲೀಸ್ಗೂ ಮೊದಲೇ ಇಡೀ ತಂಡ ಗೆದ್ದ ಖುಷಿಯಲ್ಲಿದೆ. ಈ ಸಂಸ್ಥೆಯ ಮುಖ್ಯಸ್ಥರು ‘ಬನಾರಸ್’ ಮೂಡಿ ಬಂದಿರುವ ರೀತಿಯನ್ನು ಕಂಡು ಥ್ರಿಲ್ ಆಗಿದ್ದಾರೆ. ಆ ಮೆಚ್ಚುಗೆಯಿಂದಲೇ ಇದೇ ನವೆಂಬರ್4ರಂದು ಕೇರಳಾದ್ಯಂತ ಸಿನಿಮಾ ರಿಲೀಸ್ ಆಗಲಿದೆ.
ಇದನ್ನೂ ಓದಿ: ಪಂಚಭಾಷೆಗಳಲ್ಲೂ ‘ಬನಾರಸ್’ ಟ್ರೇಲರ್ ಅಬ್ಬರ; ಮಿಲಿಯನ್ ಗಟ್ಟಲೆ ವೀಕ್ಷಣೆ
ತಿಲಕ್ ರಾಜ್ ಬಲ್ಲಾಳ್ ಬಂಡವಾಳ ಹೂಡಿ ಅದ್ದೂರಿಯಾಗಿ ನಿರ್ಮಾಣ ಮಾಡಿರುವ ಬನಾರಸ್ ಚಿತ್ರಕ್ಕೆ ಸೋನಲ್ ಮೊಂಥೆರೋ ನಾಯಕಿ. ಝೈದ್ ಖಾನ್ ಹೀರೋ. ಈ ಚಿತ್ರಕ್ಕೆ ಅಜನೀಶ್ ಬಿ. ಲೋಕನಾಥ್ ಅವರ ಸಂಗೀತ ನಿರ್ದೇಶನ, ಅದ್ವೈತ ಗುರುಮೂರ್ತಿ ಅವರ ಛಾಯಾಗ್ರಹಣ ಸೇರಿದಂತೆ ಪ್ರತಿಭಾನ್ವಿತ ತಾಂತ್ರಿಕ ವರ್ಗ ಬನಾರಸ್ ಚಿತ್ರಕ್ಕಾಗಿ ಕೆಲಸ ಮಾಡಿದೆ.
Published On - 4:58 pm, Thu, 6 October 22