ಕರ್ನಾಟಕ ಕೊವಿಡ್ ಎರಡನೇ ಅಲೆ ಕಡಿಮೆ ಆಗುತ್ತಿದ್ದಂತೆ ಚಿತ್ರಮಂದಿರದಲ್ಲಿ ಶೇ.100 ಆಸನ ಭರ್ತಿಗೆ ಅವಕಾಶ ನೀಡಲಾಗಿದೆ. ಈ ಸುದ್ದಿ ಹೊರ ಬೀಳುತ್ತಿದ್ದಂತೆ ಸ್ಟಾರ್ ಸಿನಿಮಾಗಳು ರಿಲೀಸ್ ಡೇಟ್ ಘೋಷಣೆ ಮಾಡಿದೆ. ಇದರ ಜತೆಗೆ ಸಿನಿಮಾ ತಂಡಕ್ಕೆ ಪೈರಸಿಯ ಕಾಟದ ಭಯ ಕಾಡುತ್ತಿದೆ. ಸಿನಿಮಾಗಳು ರಿಲೀಸ್ ಆದ ಕೂಡಲೇ ಥಿಯೇಟರ್ ಪ್ರಿಂಟ್ಅನ್ನು ಆನ್ಲೈನ್ನಲ್ಲಿ ಬಿಡೋಕೆ ಕೆಲ ಕಿಡಿಗೇಡಿಗಳು ಸಜ್ಜಾಗಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಪೈರಸಿ ತಡೆಗೆ ಎಷ್ಟೇ ಕಠಿಣ ಕ್ರಮ ಕೈಗೊಂಡರೂ ಅದು ಸಾಲುತ್ತಿಲ್ಲ. ಈ ಕಾರಣಕ್ಕೆ ಪೈರಸಿ ತಡೆಗೆ ಈ ಬಾರಿ ಹೊಸ ಕ್ರಮ ಕೈಗೊಳ್ಳಲಾಗುತ್ತಿದೆ.
ಅಕ್ಟೋಬರ್ 14ರಂದು ದುನಿಯಾ ವಿಜಯ್ ನಟನೆಯ ‘ಸಲಗ’ ಮತ್ತು ಕಿಚ್ಚ ಸುದೀಪ್ ನಟನೆಯ ‘ಕೋಟಿಗೊಬ್ಬ 3’ ಸಿನಿಮಾ ತೆರೆಗೆ ಬರುತ್ತಿದೆ. ಅಕ್ಟೋಬರ್ 29ರಂದು ಶಿವರಾಜ್ಕುಮಾರ್ ನಟನೆಯ ‘ಭಜರಂಗಿ 2’ ರಿಲೀಸ್ ಆಗುತ್ತಿದೆ. ಈ ಎಲ್ಲಾ ಸಿನಿಮಾಗಳು ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟು ಹಾಕಿವೆ. ಈ ಸಿನಿಮಾಗಳನ್ನು ನೋಡೋಕೆ ಅಭಿಮಾನಿಗಳು ರೆಡಿ ಆಗುತ್ತಿದ್ದಾರೆ. ಚಿತ್ರಮಂದಿರಗಳು ಕೂಡ ಈಗಾಗಲೇ ಸಜ್ಜುಗೊಂಡಿವೆ. ಈ ಮಧ್ಯೆ ಚಿತ್ರತಂಡಕ್ಕೆ ಪೈರಸಿ ಕಾಟದ ಭಯ ಕಾಡುತ್ತಿದೆ.
‘ಕೋಟಿಗೊಬ್ಬ 3’ ರಿಲೀಸ್ಗೂ ಮೊದಲೇ ಪೈರಸಿ ಬಗ್ಗೆ ಸಂದೇಶವೊಂದು ಟೆಲಿಗ್ರಾಮ್ನಲ್ಲಿ ಹರಿದಾಡುತ್ತಿದೆ. ‘ನೀವು ‘ಕೋಟಿಗೊಬ್ಬ 3’ ಸಿನಿಮಾ ಡೌನ್ಲೋಡ್ ಮಾಡಲು ನಮ್ಮ ಚಾನೆಲ್ಗೆ ಜಾಯಿನ್ ಆಗಿ’ ಎಂಬಿತ್ಯಾದಿ ಸಂದೇಶ ವೈರಲ್ ಆಗಿದೆ. ಇದು ಚಿತ್ರತಂಡದ ಆತಂಕಕ್ಕೆ ಕಾರಣವಾಗಿದೆ. ಹೀಗಾಗಿ, ಇಂದು (ಅಕ್ಟೋಬರ್ 1) ‘ಸಲಗ’ ಸಿನಿಮಾ ನಿರ್ಮಾಪಕ ಕೆ.ಪಿ.ಶ್ರೀಕಾಂತ್, ‘ಭಜರಂಗಿ-2’ ಸಿನಿಮಾ ನಿರ್ಮಾಪಕ ಜಯಣ್ಣ, ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಪ್ರವೀಣ್, ಪದಾಧಿಕಾರಿಗಳಾದ ರಮೇಶ್, ಗಣೇಶ್ ಅವರು ಬೆಂಗಳೂರು ಸಿಟಿ ಪೊಲೀಸ್ ಆಯುಕ್ತ ಕಮಲ್ ಪಂತ್ಗೆ ಮನವಿ ಸಲ್ಲಿಕೆ ಮಾಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ನಿರ್ಮಾಪಕ ಕೆ.ಮಂಜು, ‘ಕಮೀಷನರ್ ಕಚೇರಿಯಲ್ಲಿಯೇ ಸ್ಕ್ವಾಡ್ ಮಾಡಲಾಗಿದೆ. ಆ ತಂಡ ಗುಪ್ತವಾಗಿ ಕಾರ್ಯಾಚರಣೆಗಿಳಿಯಲಿದೆ’ ಎಂದಿದ್ದಾರೆ. ಈ ಮೂಲಕ ಪೈರಸಿಗೆ ಬ್ರೇಕ್ ಹಾಕಲು ಹೊಸ ಪ್ಲ್ಯಾನ್ ರೂಪಿಸಲಾಗಿದೆ.
ಇದನ್ನೂ ಓದಿ: ‘ಕೋಟಿಗೊಬ್ಬ 3’ ರಿಲೀಸ್ಗೂ ಮೊದಲೇ ಪೈರಸಿ ಮಾಡಲು ಕಿಡಿಗೇಡಿಗಳ ಪ್ಲ್ಯಾನ್; ಇಲ್ಲಿದೆ ಸಾಕ್ಷಿ
Published On - 6:13 pm, Fri, 1 October 21