ವಿವಾದಾತ್ಮಕ ಹೇಳಿಕೆ; ಹಂಸಲೇಖಗೆ ಎರಡನೇ ಬಾರಿ ನೋಟಿಸ್ ನೀಡಿದ ಪೊಲೀಸರು
ಇತ್ತೀಚೆಗೆ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಸಂಗೀತ ನಿರ್ದೇಶಕ ಹಂಸಲೇಖ ಅವರು ಪೇಜಾವರ ಶ್ರೀಗಳ ಕುರಿತು ಹೇಳಿಕೆ ನೀಡಿದ್ದರು. ಮೇಲುಜಾತಿ ಹಾಗೂ ಕೀಳುಜಾತಿ, ಜಾತಿ ತಾರತಮ್ಯ, ಜಾತಿ ಪಿಡುಗು ವಿಚಾರವಾಗಿ ಮಾತನಾಡುತ್ತಾ ಅವರು ಪ್ರಯೋಗಿಸಿದ್ದ ಪದಗಳು ವಿವಾದಕ್ಕೆ ಕಾರಣವಾಗಿತ್ತು.
ದಲಿತರ ಮನೆಯಲ್ಲಿ ಸವರ್ಣೀಯರ ವಾಸ್ತವ್ಯದ ಕುರಿತಂತೆ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ (Hamsalekha) ಹುಟ್ಟು ಹಾಕಿದ್ದ ವಿವಾದ ಇನ್ನೂ ತಣ್ಣಗಾಗಿಲ್ಲ. ಅನೇಕರು ಈ ಬಗ್ಗೆ ಇನ್ನೂ ವಿರೋಧ ವ್ಯಕ್ತಪಡಿಸುತ್ತಲೇ ಇದ್ದಾರೆ. ಅವರು ಈಗಾಗಲೇ ಕ್ಷಮೆ ಕೇಳಿದ್ದರೂ ಅನೇಕರಿಗೆ ಈ ವಿಚಾರದಲ್ಲಿ ಬೇಸರ ಹಾಗೆಯೇ ಇದೆ. ಇತ್ತೀಚೆಗೆ ಅಖಿಲ ಭಾರತ ಬ್ರಾಹ್ಮಣ ಮಹಾಸಭಾ (Akhila Bharatha Brahmana Mahasabha) ವಿಪ್ರ ಯುವ ವೇದಿಕೆಯಿಂದ ಹಂಸಲೇಖ ವಿರುದ್ಧ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಲಾಗಿತ್ತು. ಇದಕ್ಕೆ ಸಂಬಂಧಿಸಿ ಹಂಸಲೇಖ ಅವರಿಗೆ ನೋಟಿಸ್ ನೀಡಲಾಗಿತ್ತು. ಆದರೆ, ಅವರು ವಿಚಾರಣೆಗೆ ಹಾಜರಾಗಿರಲಿಲ್ಲ. ಹೀಗಾಗಿ, ಬೆಂಗಳೂರಿನ ಬಸವನಗುಡಿ ಪೊಲೀಸರಿಂದ ಅವರಿಗೆ ಎರಡನೇ ಬಾರಿ ನೋಟಿಸ್ ನೀಡಲಾಗಿದೆ.
‘ಪೇಜಾವರ ಶ್ರೀಗಳ ವಿರುದ್ಧ ಅಸಂಬದ್ಧ ಹೇಳಿಕೆ ನೀಡಿದ್ದು ತಪ್ಪು. ಅದಕ್ಕಾಗಿ ವಿದ್ಯಾಪೀಠ ಸರ್ಕಲ್ ಬಳಿ ಇರುವ ಪೇಜಾವರ ಶ್ರೀಗಳ (Pejawar Shree) ಬೃಂದಾವನದ ಮುಂದೆ ಬಂದು ಹಂಸಲೇಖ ಬಹಿರಂಗವಾಗಿ ಕ್ಷಮೆ ಕೇಳಬೇಕು. ನಾಲ್ಕು ಗೋಡೆ ಮಧ್ಯೆ ಕ್ಷಮೆ ಕೇಳಿರುವುದನ್ನು ಒಪ್ಪುವುದಿಲ್ಲ. ಇಲ್ಲವಾದರೆ ಮುಂದಿನ ದಿನಗಳಲ್ಲಿ ಬೀದಿಗಿಳಿದು ಹೋರಾಟ ಮಾಡಲಿದ್ದೇವೆ’ ಎಂದು ಬ್ರಾಹ್ಮಣ ಮಹಾಸಭಾದ ಉಪಾಧ್ಯಕ್ಷ ಕೃಷ್ಣ ಹೇಳಿದ್ದರು
ಇತ್ತೀಚೆಗೆ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಸಂಗೀತ ನಿರ್ದೇಶಕ ಹಂಸಲೇಖ ಅವರು ಪೇಜಾವರ ಶ್ರೀಗಳ ಕುರಿತು ಹೇಳಿಕೆ ನೀಡಿದ್ದರು. ಮೇಲುಜಾತಿ ಹಾಗೂ ಕೀಳುಜಾತಿ, ಜಾತಿ ತಾರತಮ್ಯ, ಜಾತಿ ಪಿಡುಗು ವಿಚಾರವಾಗಿ ಮಾತನಾಡುತ್ತಾ ಅವರು ಪ್ರಯೋಗಿಸಿದ್ದ ಪದಗಳು ವಿವಾದಕ್ಕೆ ಕಾರಣವಾಗಿತ್ತು. ಪೇಜಾವರ ಶ್ರೀಗಳ ಬಗ್ಗೆ ಹಂಸಲೇಖ ಮಾತನಾಡಿರುವುದು ಸಾಮಾಜಿಕ ಜಾಲತಾಣದಲ್ಲಿ ವಿವಾದ ಹುಟ್ಟುಹಾಕಿತ್ತು. ಆ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆದ ಬಳಿಕ ಹಂಸಲೇಖ ಕ್ಷಮೆ ಕೇಳಬೇಕು ಎಂಬ ಒತ್ತಾಯ ಜೋರಾಗಿತ್ತು.
ತಾವು ನೀಡಿದ ಹೇಳಿಕೆ ವಿವಾದದ ಸ್ವರೂಪ ಪಡೆಯುತ್ತಿದ್ದಂತೆಯೇ ಕ್ಷಮೆಯಾಚಿಸಿದ್ದ ಹಂಸಲೇಖ, ‘ಎಲ್ಲಾ ಮಾತುಗಳಿಗೂ ಅದು ವೇದಿಕೆಯಲ್ಲ. ಆ ವೇದಿಕೆಯಲ್ಲಿ ನುಡಿದರೆ ಮುತ್ತಿನಹಾರದಂತಿರಬೇಕು ಎಂದು ಇರಬೇಕಿತ್ತು. ಆದರೆ, ತಪ್ಪಾಗಿದೆ. ಅಸ್ಪೃಶ್ಯತೆ ಎಂಬುದು ನಮ್ಮ ದೇಶಕ್ಕೆ ಅಂಟಿದ ಶಾಪ. ಈ ಅನಿಷ್ಠವನ್ನು ತೊಡೆದು ಹಾಕುವುದಕ್ಕೆ ಪೇಜಾವರರಂಥ ಗುರುಹಿರಿಯರು ಅಪಾರ ಪ್ರಯತ್ನ ನಡೆಸುತ್ತಿದ್ದಾರೆ. ಅದರ ಬಗ್ಗೆ ನನಗೆ ಆ ಬಗ್ಗೆ ಅಪಾರ ಗೌರವವಿದೆ’ ಎಂದು ಹೇಳಿದ್ದರು.
‘ನಾನು ಒಬ್ಬ ಸಂಗೀತಗಾರ. ನಮಗ್ಯಾಕೆ ಟ್ರೋಲು? ಕಂಟ್ರೋಲ್ ಆಗಿರುವುದು ನಮ್ಮ ಕೆಲಸ. ನನಗೆ ಯಾರಿಗೂ ನೋವು ಕೊಡಲು ಇಷ್ಟವಿಲ್ಲ. ನನ್ನ ಸಂಗೀತದಂತೆ ನನ್ನ ಮಾತು, ಬದುಕು ಕೂಡ ಎಲ್ಲರಿಗೂ ಸುಖ ಕೊಡಬೇಕು. ಆದರೆ, ಎಲ್ಲಾ ಅನಿಷ್ಠಗಳನ್ನು ತೊಡೆದು ಹಾಕುವ ದಿಸೆಯಲ್ಲಿ ನನ್ನ ಪಾತ್ರ ಯಾವುದರ ಮೂಲಕ ಇದ್ದರೂ ಅದನ್ನು ಮಾಡಿಯೇ ಮಾಡುತ್ತೇನೆ’ ಎಂದು ಹಂಸಲೇಖ ಅವರು ವಿಡಿಯೋ ಮೂಲಕ ಹೇಳಿದ್ದರು. ಹಾಗಿದ್ದರೂ ಕೂಡ ಬಹಿರಂಗವಾಗಿ ಕ್ಷಮೆ ಕೇಳಬೇಕು ಎಂದು ಅಖಿಲ ಭಾರತ ಬ್ರಾಹ್ಮಣ ಮಹಾಸಭಾ ವಿಪ್ರ ಯುವ ವೇದಿಕೆ ಆಗ್ರಹಿಸಿದೆ.
ಇದನ್ನೂ ಓದಿ: ಹಂಸಲೇಖ ಹೇಳಿಕೆ ಬೆಂಬಲಿಸಿದ ಪ್ರಗತಿಪರ ಸಂಘಟನೆಗಳು; ಅವರಿಗೆ ಭದ್ರತೆ ನೀಡುವಂತೆ ಮನವಿ