ರಾಮನ ಪಾತ್ರಕ್ಕೆ ಹೃತಿಕ್, ದಶರಥನ ಪಾತ್ರಕ್ಕೆ ಅಮಿತಾಭ್; ಈ ಕಥೆ ಗೊತ್ತಾ?

ನಿತೇಶ್ ತಿವಾರಿ ಅವರ 'ರಾಮಾಯಣ' ಸಿನಿಮಾದಲ್ಲಿ ರಣಬೀರ್ ಕಪೂರ್ ಶ್ರೀರಾಮನಾಗಿ ನಟಿಸುತ್ತಿದ್ದಾರೆ. ಆದರೆ 2008ರಲ್ಲೇ ನಿರ್ದೇಶಕ ಸಂಜಯ್ ಖಾನ್ 'ದಿ ಲೆಜೆಂಡ್ ಆಫ್ ರಾಮ' ಚಿತ್ರಕ್ಕೆ ಹೃತಿಕ್ ರೋಷನ್ ಅವರನ್ನು ರಾಮನನ್ನಾಗಿ ಹಾಗೂ ಅಮಿತಾಭ್ ಬಚ್ಚನ್ ಅವರನ್ನು ದಶರಥನಾಗಿ ಆಯ್ಕೆ ಮಾಡಲು ನಿರ್ಧರಿಸಿದ್ದರು. ಈ ಬಿಗ್ ಬಜೆಟ್ ಸಿನಿಮಾ ಕಾರಣಾಂತರಗಳಿಂದ ಸ್ಥಗಿತಗೊಂಡಿತ್ತು.

ರಾಮನ ಪಾತ್ರಕ್ಕೆ ಹೃತಿಕ್, ದಶರಥನ ಪಾತ್ರಕ್ಕೆ ಅಮಿತಾಭ್; ಈ ಕಥೆ ಗೊತ್ತಾ?
ಹೃತಿಕ್​-ಅಮಿತಾಭ್
Edited By:

Updated on: Aug 08, 2026 | 7:43 AM

ಮುಖ್ಯಾಂಶಗಳು

  • 2008ರಲ್ಲೇ ಮೂಡಿಬಂದಿತ್ತು ಬಿಗ್ ಬಜೆಟ್ 'ರಾಮಾಯಣ' ಕನಸು
  • ಹೃತಿಕ್ ರೋಷನ್ ಶ್ರೀರಾಮ, ಅಮಿತಾಭ್ ಬಚ್ಚನ್ ದಶರಥ
  • ಶ್ರೀರಾಮನ ಪಾತ್ರದ ವಿವಾದಕ್ಕೆ ರಣಬೀರ್ ಕಪೂರ್ ಖಡಕ್ ಉತ್ತರ

ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ’ ಸಿನಿಮಾ ಭಾರತೀಯ ಚಿತ್ರರಂಗದಲ್ಲಿ ಭಾರೀ ಚರ್ಚೆ ಹುಟ್ಟುಹಾಕಿದೆ. ಈ ಸಿನಿಮಾದಲ್ಲಿ ರಣಬೀರ್ ಕಪೂರ್ ಶ್ರೀರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ ಹಾಗೂ ಯಶ್ ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ, ಈ ಬಹುನಿರೀಕ್ಷಿತ ಪ್ರಾಜೆಕ್ಟ್‌ಗೂ ಸುಮಾರು 18 ವರ್ಷಗಳ ಮುನ್ನವೇ ಮತ್ತೊಬ್ಬರು ನಿರ್ದೇಶಕರು ಇಂತಹದ್ದೇ ದೊಡ್ಡ ಕನಸು ಕಂಡಿದ್ದರು ಎಂಬುದು ಹಲವರಿಗೆ ತಿಳಿದಿಲ್ಲ.

2008ರಲ್ಲೇ ತಯಾರಾಗಿತ್ತು ‘ದಿ ಲೆಜೆಂಡ್ ಆಫ್ ರಾಮ’ ಯೋಜನೆ

‘ಜೈ ಹನುಮಾನ್’ ಹಾಗೂ ‘ದಿ ಸ್ವೋರ್ಡ್ ಆಫ್ ಟಿಪ್ಪು ಸುಲ್ತಾನ್’ ನಂತಹ ಪ್ರಸಿದ್ಧ ಧಾರಾವಾಹಿಗಳನ್ನು ನಿರ್ಮಿಸಿದ್ದ ಸಂಜಯ್ ಖಾನ್, 2008ರಲ್ಲಿ ಸುಮಾರು 50 ಕೋಟಿ ರೂಪಾಯಿ ವೆಚ್ಚದಲ್ಲಿ ರಾಮಾಯಣವನ್ನು ಆಧರಿಸಿ ‘ದಿ ಲೆಜೆಂಡ್ ಆಫ್ ರಾಮ’ ಎಂಬ ಸಿನಿಮಾ ಮಾಡಲು ಯೋಜನೆ ರೂಪಿಸಿದ್ದರು.

ಈ ಸಿನಿಮಾದಲ್ಲಿ ಶ್ರೀರಾಮನ ಪಾತ್ರಕ್ಕೆ ಹೃತಿಕ್ ರೋಷನ್ ಅವರನ್ನು ಆಯ್ಕೆ ಮಾಡಲು ನಿರ್ಧರಿಸಲಾಗಿತ್ತು. ಹಾಗೆಯೇ ಲಕ್ಷ್ಮಣನ ಪಾತ್ರದಲ್ಲಿ ಝಾಯೆದ್ ಖಾನ್ ಮತ್ತು ದಶರಥ ಮಹಾರಾಜನ ಪಾತ್ರದಲ್ಲಿ ಅಮಿತಾಭ್ ಬಚ್ಚನ್ ಅಭಿನಯಿಸಬೇಕಿತ್ತು.

ಈ ಕುರಿತು ಅಂದು ಮಾತನಾಡಿದ್ದ ಝಾಯೆದ್ ಖಾನ್, ‘ನನ್ನ ತಂದೆ ಕಳೆದ ಮೂರು ವರ್ಷಗಳಿಂದ ಈ ಕಥೆಯ ಮೇಲೆ ಕೆಲಸ ಮಾಡುತ್ತಿದ್ದಾರೆ. ಶ್ರೀರಾಮನ ಪಾತ್ರಕ್ಕೆ ಹೃತಿಕ್ ರೋಷನ್ ಗಿಂತ ಸೂಕ್ತ ನಟ ಬೇರೊಬ್ಬರಿಲ್ಲ’ ಎಂದು ಹೇಳಿದ್ದರು. ಈ ಚಿತ್ರವನ್ನು ಇಂಗ್ಲಿಷ್‌ನ ‘ಲಾರ್ಡ್ ಆಫ್ ದಿ ರಿಂಗ್ಸ್’ ಶೈಲಿಯಲ್ಲಿ ಅತ್ಯಂತ ಆಧುನಿಕವಾಗಿ ತೆರೆಗೆ ತರಲು ಸ್ಕ್ರಿಪ್ಟ್ ಕೂಡ ಸಿದ್ಧವಾಗಿತ್ತು. ಆದರೆ, ಕಾರಣಾಂತರಗಳಿಂದ ಈ ಸಿನಿಮಾ ಟೇಕಾಫ್ ಆಗಲೇ ಇಲ್ಲ.

ಶ್ರೀರಾಮನ ಪಾತ್ರದ ಬಗ್ಗೆ ರಣಬೀರ್ ಕಪೂರ್ ಹೇಳಿದ್ದೇನು?

ಈ ನಡುವೆ ನಿತೇಶ್ ತಿವಾರಿ ರಾಮಾಯಣದಲ್ಲಿ ಶ್ರೀರಾಮನಾಗಿ ರಣಬೀರ್ ಕಪೂರ್ ಆಯ್ಕೆಯಾಗಿರುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ಬಗ್ಗೆ ಸ್ವತಃ ರಣಬೀರ್ ಕಪೂರ್ ಸ್ಪಷ್ಟನೆ ನೀಡಿದ್ದರು.

‘ನನಗೆ ಈ ಆಫರ್ ಬಂದಾಗ ‘ನಾನು ಈ ಪಾತ್ರಕ್ಕೆ ಅರ್ಹನೇ?’ ಎಂಬ ಪ್ರಶ್ನೆ ಮೂಡಿತ್ತು. ಆದರೆ ರಾಮಾಯಣ ಎಂಬುದು ಸಾವಿರಾರು ವರ್ಷಗಳಿಂದ ನಮ್ಮ ಸಂಸ್ಕೃತಿಯಲ್ಲಿ ಹಾಸು ಹೊಕ್ಕಾಗಿದೆ. ಪ್ರತಿಯೊಬ್ಬ ಭಕ್ತನ ಮನಸ್ಸಿನಲ್ಲೂ ಶ್ರೀರಾಮನ ಬಗ್ಗೆ ಅವರದ್ದೇ ಆದ ಒಂದು ಕಲ್ಪನೆ ಇರುತ್ತದೆ. ಹೀಗಾಗಿ ಶ್ರೀರಾಮನ ಪಾತ್ರಕ್ಕೆ ನಿರ್ದಿಷ್ಟವಾಗಿ ‘ಇವರೇ ಸರಿ’ ಎನ್ನುವ ನಟ ಯಾರೂ ಇರಲು ಸಾಧ್ಯವಿಲ್ಲ. ಸರಿಯಾದ ಉದ್ದೇಶ, ಭಕ್ತಿ ಮತ್ತು ನಂಬಿಕೆಯಿಂದ ಈ ಪಾತ್ರವನ್ನು ನಿರ್ವಹಿಸುವುದಷ್ಟೇ ಮುಖ್ಯ’ ಎಂದು ರಣಬೀರ್ ತಿಳಿಸಿದ್ದರು.

ಇದನ್ನೂ ಓದಿ: ‘ಟಾಕ್ಸಿಕ್’ ಟ್ರೇಲರ್ ಲಾಂಚ್​ಗೆ 8ರ ನಂಟು; ಇದರ ಹಿಂದಿದೆ ರೋಚಕ ಸಂಖ್ಯಾಶಾಸ್ತ್ರ

ಪ್ರಸ್ತುತ ನಮೀತ್ ಮಲ್ಹೋತ್ರಾ ನಿರ್ಮಾಣ ಮಾಡುತ್ತಿರುವ ಈ ಬಿಗ್ ಬಜೆಟ್ ‘ರಾಮಾಯಣ’ ಚಿತ್ರಕ್ಕೆ ಹಾಲಿವುಡ್‌ನ ಖ್ಯಾತ ಸಂಗೀತ ನಿರ್ದೇಶಕ ಹ್ಯಾನ್ಸ್ ಝಿಮ್ಮರ್ ಹಾಗೂ ಎ.ಆರ್. ರೆಹಮಾನ್ ಸಂಗೀತ ನೀಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
Loading...
Unable to load recommendations.
Follow Us