
ಇತ್ತೀಚೆಗೆ ಕನ್ನಡದ ‘ಭೈರಾ’ (Bhairaa) ಸಿನಿಮಾಗೆ ಮುಹೂರ್ತ ಸಮಾರಂಭ ಮಾಡಲಾಯಿತು. ಬೆಂಗಳೂರಿನ ಪಂಚಮುಖಿ ಗಣಪತಿ ದೇವಸ್ಥಾನದಲ್ಲಿ ಚಿತ್ರತಂಡ ಮುಹೂರ್ತ ಆಚರಿಸಿಕೊಂಡಿತು. ‘ಲವ್ಲಿ ಸ್ಟಾರ್’ ಪ್ರೇಮ್ (Nenapirali Prem) ಅವರು ಈ ಸಿನಿಮಾದ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದರು. ಬಳಿಕ ಅವರು ಚಿತ್ರತಂಡಕ್ಕೆ ಶುಭ ಕೋರಿದರು. ಈ ಸಿನಿಮಾದಲ್ಲಿ ಮಹೇಶ್ ಸಿದ್ದು ಅವರು ಹೀರೋ ಆಗಿ ನಟಿಸುತ್ತಿದ್ದಾರೆ. ಅವರಿಗೆ ಜೋಡಿಯಾಗಿ ಶ್ವೇತಾ ಸುರೇಂದ್ರ ಅವರು ಅಭಿನಯಿಸುತ್ತಿದ್ದಾರೆ. ಚಿತ್ರತಂಡದ ಬಗ್ಗೆ ಇಲ್ಲಿದೆ ಮಾಹಿತಿ..
ಮಹೇಶ್ ಸಿದ್ದು ಅವರು ಈ ಮೊದಲು ‘ಗೂಳಿಹಟ್ಟಿ’, ‘ಸಾಗುತ ದೂರ ದೂರ’ ಮುಂತಾದ ಸಿನಿಮಾಗಳಲ್ಲಿ ಅಭಿನಯಿಸಿದ್ದರು. ಈಗ ಅವರು ಒಂದು ಗ್ಯಾಪ್ ಬಳಿಕ ಹೀರೋ ಆಗಿ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ. 200ಕ್ಕೂ ಅಧಿಕ ಸಿನಿಮಾಗಳಿಗೆ ನೃತ್ಯ ಸಂಯೋಜಕರಾಗಿ ಕೆಲಸ ಮಾಡಿದ ಅನುಭವ ಹೊಂದಿರುವ ಅಕುಲ್ ಎನ್. ಅವರು ಈ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ಕಥೆ ಕೂಡ ಅವರೇ ಬರೆದಿದ್ದಾರೆ.
‘ಖುಷಿ ಕನಸು ಕ್ರಿಯೇಶನ್ಸ್’ ಮೂಲಕ ಅಮಿತ್ ಪೂಜಾರಿ ಅವರು ‘ಭೈರಾ’ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಅಶೋಕ್ ಡಿಡಿಎನ್ ಅವರು ಸಹ ನಿರ್ಮಾಪಕರಾಗಿದ್ದಾರೆ. ಮಂಜು ಮಹದೇವ್ ಅವರು ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಎಸ್. ಹಾಲೇಶ್ ಅವರು ಛಾಯಾಗ್ರಹಣದ ಜವಾಬ್ದಾರಿ ಹೊತ್ತಿದ್ದಾರೆ. ಕೆ.ಎಂ. ಪ್ರಕಾಶ್ ಅವರು ಸಂಕಲನ ಮಾಡಲಿದ್ದಾರೆ.
ಯಾವುದೇ ಕೆಲಸಕ್ಕೂ ಸೈ ಎನ್ನುವ ಹುಡುಗನ ಪಾತ್ರದಲ್ಲಿ ಮಹೇಶ್ ಸಿದ್ದು ಅವರು ಕಾಣಿಸಿಕೊಳ್ಳಲಿದ್ದಾರೆ. ನಾಯಕಿ ಶ್ವೇತಾ ಸುರೇಂದ್ರ ಅವರು ಬಜಾರಿ ಹುಡುಗಿಯ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಜಾಕ್ ಜಾಲಿಜಾಲಿ, ರವಿಕಾಳೆ, ವರ್ಧನ್, ಯಶ್ ಶೆಟ್ಟಿ, ಸಂಪತ್ ಕುಮಾರ್, ಕಾಕ್ರೋಚ್ ಸುಧಿ, ವೀಣಾ ಶೆಟ್ಟಿ, ಬಿ. ಚಂದಿರಧರ ಮುಂತಾದವರು ಈ ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ.
ಇದನ್ನೂ ಓದಿ: 27 ವರ್ಷದ ಹಿಂದೆ ‘ನೆನಪಿರಲಿ’ ಪ್ರೇಮ್ಗೆ ಪ್ರೀತಿ ಚಿಗುರಿದ ಜಾಗ ಇದು
‘ಭೈರಾ’ ಚಿತ್ರದ ಹಾಡುಗಳಿಗೆ ಭರ್ಜರಿ ಚೇತನ್, ನಾಗಾರ್ಜುನ ಶರ್ಮ, ಅನಿರುದ್ದ್ ಶಾಸ್ತ್ರೀ ಸಾಹಿತ್ಯ ಬರೆದಿದ್ದಾರೆ. ವಿಕ್ರಂ ಮೋರ್ ಹಾಗೂ ವಿನೋದ್ ಅವರು ಸಾಹಸ ನಿರ್ದೇಶನ ಮಾಡಲಿದ್ದಾರೆ. ಶೀಘ್ರದಲ್ಲೇ ಈ ಸಿನಿಮಾಗೆ ಶೂಟಿಂಗ್ ಆರಂಭ ಆಗಲಿದೆ. ಬೆಂಗಳೂರಿನ ಓಕಳಿಪುರ, ಕಲಾಸಿಪಾಳ್ಯ ಮುಂತಾದ ಕಡೆ ಹೆಚ್ಚಿನ ಭಾಗದ ಶೂಟಿಂಗ್ ಆಗಲಿದೆ ಎಂದು ನಿರ್ದೇಶಕರು ಮಾಹಿತಿ ನೀಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.