ದುಬೈ ಹಾರಲಿದ್ದಾರೆ ರಾಜ್ ಬಿ. ಶೆಟ್ಟಿ; ಕಾರಣ ಕೇಳಿದ್ರೆ ನಿಮಗೇ ಅಚ್ಚರಿ ಆಗುತ್ತೆ
ರಾಜ್ ಬಿ. ಶೆಟ್ಟಿ ‘ಸು ಫ್ರಮ್ ಸೋ’ ಚಿತ್ರದ ಅಭೂತಪೂರ್ವ ಯಶಸ್ಸಿನ ಬಳಿಕ, ಅವರು ದುಬೈಗೆ ಪ್ರವಾಸ ಕೈಗೊಳ್ಳುತ್ತಿದ್ದಾರೆ. ವಿದೇಶಿ ಮಾರುಕಟ್ಟೆಯನ್ನು ಅರ್ಥಮಾಡಿಕೊಳ್ಳುವುದು ಮತ್ತು ಭವಿಷ್ಯದ ಚಿತ್ರಗಳಿಗೆ ಅದರ ಪ್ರಭಾವವನ್ನು ಅರಿಯುವುದು ಈ ಪ್ರವಾಸದ ಮುಖ್ಯ ಉದ್ದೇಶ. ಆ ಬಗ್ಗೆ ಅವರು ಮಾತನಾಡಿದ್ದಾರೆ.

ರಾಜ್ ಬಿ. ಶೆಟ್ಟಿ ಅವರು ಸದ್ಯ ‘ಸು ಫ್ರಮ್ ಸೋ’ (Su From So Movie) ಗೆಲುವಿನ ಅಲೆಯಲ್ಲಿ ತೇಲುತ್ತಿದ್ದಾರೆ. ಈ ಸಿನಿಮಾ ಸೂಪರ್ ಹಿಟ್ ಆಗಿದೆ. ಈ ಚಿತ್ರ ಕನ್ನಡದ ಜೊತೆಗೆ ಪರಭಾಷೆಯವರಿಗೂ ಇಷ್ಟ ಆಗಿದೆ. ಈಗ ರಾಜ್ ಬಿ. ಶೆಟ್ಟಿ ಅವರು ದುಬೈಗೆ ಹಾರಲು ರೆಡಿ ಆಗಿದ್ದಾರೆ. ಹೊಗೋದು ‘ಸು ಫ್ರಮ್ ಸೋ’ ವಿಶೇಷ ಶೋಗೋಸ್ಕರವೇ. ಆದರೆ, ಅದರ ಹಿಂದೆ ಬೇರೆಯ ಉದ್ದೇಶ ಇದೆ ಎನ್ನುತ್ತಾರೆ ರಾಜ್. ಈ ಬಗ್ಗೆ ಅವರು ಟಿವಿ9 ಕನ್ನಡ ಡಿಜಿಟಲ್ ಜೊತೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ.
‘ಕನ್ನಡ ಚಿತ್ರರಂಗಕ್ಕೂ ಹಾಗೂ ಹೊರ ದೇಶದ ಮಾರುಕಟ್ಟೆಗೆ ದೊಡ್ಡ ಗ್ಯಾಪ್ ಇದೆ. ಪರಭಾಷೆಯ ಸಿನಿಮಾಗಳು ಅಲ್ಲಿ ರಿಲೀಸ್ ಆದ ದಿನವೇ ವಿದೇಶದಲ್ಲೂ ಬಿಡುಗಡೆ ಆಗುತ್ತವೆ. ನಮ್ಮಲ್ಲಿ ಹಾಗಿಲ್ಲ. ಒಂದೊಮ್ಮೆ ಇಲ್ಲಿ ರಿಲೀಸ್ ಆದ ದಿನವೇ ವಿದೇಶದಲ್ಲೂ ಬಿಡುಗಡೆ ಆದರೂ ಮಾರ್ಕೆಟ್ ಆಗಲ್ಲ. ಸು ಫ್ರಮ್ ಸೋ ಚಿತ್ರದಿಂದ ಆ ಗ್ಯಾಪ್ ಬ್ರೇಕ್ ಆಗಿದೆ. ಮಾಡುವ ಕೆಲಸ ಇನ್ನೂ ಸಾಕಷ್ಟು ಬಾಕಿ ಇದೆ’ ಎಂದಿದ್ದಾರೆ ರಾಜ್.
‘ವಿದೇಶಿ ಮಾರುಕಟ್ಟೆ ಅರಿತುಕೊಂಡಾಗ ಮುಂದಿನ ಸಿನಿಮಾಗಳ ತಯಾರಿಕೆಗೆ ಸಹಕಾರಿ ಆಗಲಿದೆ. ಮಾರುಕಟ್ಟೆಗೆ ಅನುಗುಣವಾಗಿ ಸಿನಿಮಾ ಮಾಡಬಹುದು. ಬ್ರೇವ್ ಸ್ಕ್ರಿಪ್ಟ್ ಮಾಡಲು ಕೂಡ ಸಹಾಯ ಆಗಬಹುದು. ಈಗ ದುಬೈನಲ್ಲಿ ನಡೆಯುತ್ತಿರುವುದು ಹೆಸರಿಗೆ ಶೋ, ಆದರೆ, ನನ್ನ ಕೆಲಸ ಬೇರೆಯೇ ಇದೆ. ಅಲ್ಲಿನ ಜನರ ಜೊತೆ ಮಾತುಕತೆ ನಡೆಸಬೇಕಿದೆ. ಆಗ ಅವರು ಏನನ್ನು ನಿರೀಕ್ಷಿಸುತ್ತಿದ್ದಾರೆ ಎಂಬುದು ಗೊತ್ತಾಗುತ್ತದೆ’ ಎನ್ನುತ್ತಾರೆ ರಾಜ್.
ಇದನ್ನೂ ಓದಿ: ಕೇರಳದಲ್ಲಿ ‘ಸು ಫ್ರಮ್ ಸೋ’ ಹಂಚಿಕೆಗೆ ಸಹಾಯ ಮಾಡಿದ್ದ ದುಲ್ಖರ್ ಸಲ್ಮಾನ್ ಋಣ ತೀರಿಸಿದ ರಾಜ್ ಬಿ ಶೆಟ್ಟಿ
‘ಥಿಯೇಟರ್ಗಳಿಗೆ ಭೇಟಿ ನೀಡಿದಾಗ ಅಲ್ಲಿನ ಮಾಲೀಕರ ಜೊತೆ ಮಾತನಾಡಲು ಅವಕಾಶ ಸಿಗುತ್ತದೆ. ಅವರ ಪ್ರಕಾರ ಈ ಚಿತ್ರ ಏಕೆ ಹಿಟ್ ಆಯಿತು, ನಮ್ಮಲ್ಲಿ ಏನು ಕೊರತೆ ಇದೆ ಇದೆಲ್ಲ ಅರ್ಥ ಆಗುತ್ತದೆ. ಈ ಕಾರಣದಿಂದಲೇ ಸು ಫ್ರಮ್ ಸೋ ಹಿಟ್ ಆದ ಬಳಿಕ ಥಿಯೇಟರ್ಗಳಿಗೆ ಭೇಟಿ ಕೊಟ್ಟು ಅಲ್ಲಿನ ಜನರು ಮಾಲೀಕರ ಬಳಿ ಮಾತನಾಡಿದೆ’ ಎಂದು ರಾಜ್ ಬಿ. ಶೆಟ್ಟಿ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 1:03 pm, Fri, 22 August 25








