ಅನಿರೀಕ್ಷಿತವಾಗಿ ‘ಬಿಗ್ ಬಾಸ್ ಕನ್ನಡ ಸೀಸನ್ 8’ ಕಾರ್ಯಕ್ರಮ ಕೊನೆಯಾಯಿತು. ಹೊರಜಗತ್ತಿನಲ್ಲಿ ಏನಾಗುತ್ತಿದೆ ಎಂದು ಗೊತ್ತಾದ ಬಳಿಕ ಮನೆಯೊಳಗಿದ್ದ ಸ್ಪರ್ಧಿಗಳೆಲ್ಲ ಕಂಗಾಲಾದರು. ಕೊರೊನಾ ವೈರಸ್ ಹಾವಳಿಯಿಂದ ಇಡೀ ದೇಶವೇ ತತ್ತರಿಸಿರುವುದನ್ನು ಕಂಡು ದೊಡ್ಮನೆ ಸದಸ್ಯರು ಬೆಚ್ಚಿ ಬಿದ್ದರು. ಅಲ್ಲದೆ, ತಾವು ರಿಯಾಲಿಟಿ ಶೋನಿಂದ ಹೊರಹೋದ ಬಳಿಕ ಕೊರೊನಾ ವಾರಿಯರ್ ಆಗಿ ಕೆಲಸ ಮಾಡೋಣ ಎಂದು ಶಪಥ ಮಾಡಿದ್ದರು. ನಟಿ ಶುಭಾ ಪೂಂಜಾ ಕೂಡ ಇದೇ ನಿರ್ಣಯ ಕೈಗೊಂಡಿದ್ದರು. ಈಗ ಅವರು ತಮ್ಮ ಮಾತಿಗೆ ತಕ್ಕಂತೆ ನಡೆದುಕೊಳ್ಳುತ್ತಿದ್ದಾರೆ. ತಮ್ಮ ಕೈಲಾದ ಸಹಾಯ ಮಾಡುವಲ್ಲಿ ಅವರು ತೊಡಗಿಕೊಂಡಿದ್ದಾರೆ.
ಸದ್ಯ ಲಾಕ್ಡೌನ್ ಜಾರಿಯಲ್ಲಿ ಇರುವುದರಿಂದ ಅನೇಕರಿಗೆ ಕೆಲಸ ಇಲ್ಲದಂತಾಗಿದೆ. ಹಾಗಾಗಿ ಕೂಲಿ ಕಾರ್ಮಿಕರು, ಬಡವರು ಒಂದು ಹೊತ್ತಿನ ಊಟಕ್ಕೂ ಕಷ್ಟಪಡುತ್ತಿರುವಂತಹ ಪರಿಸ್ಥಿತಿ ಇದೆ. ಅಂಥವರ ಸಹಾಯಕ್ಕೆ ಶುಭಾ ಪೂಂಜಾ ನಿಂತಿದ್ದಾರೆ. ತಮ್ಮ ಏರಿಯಾ ಸುತ್ತ ಮುತ್ತ ಇರುವ ಬಡವರಿಗೆ ಅವರು ಫುಡ್ ಕಿಟ್ಗಳನ್ನು ವಿತರಿಸಿದ್ದಾರೆ. ಈ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಇತರರನ್ನೂ ಪ್ರೇರೇಪಿಸು ಪ್ರಯತ್ನವನ್ನು ಅವರು ಮಾಡಿದ್ದಾರೆ. ಶುಭಾ ಮಾಡುತ್ತಿರುವ ಈ ಕಾಯಕಕ್ಕೆ ಹಲವರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
71 ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಇದ್ದ ಶುಭಾ ಪೂಂಜಾ ಅವರು ತಮ್ಮದೇ ವ್ಯಕ್ತಿತ್ವದ ಕಾರಣದಿಂದ ಗಮನ ಸೆಳೆದಿದ್ದರು. ಹಲವು ಸಂದರ್ಭಗಳಲ್ಲಿ ಅವರು ಚಿಕ್ಕ ಮಗು ರೀತಿ ವರ್ತಿಸುತ್ತಿದ್ದರು. ಈಗ ಬಿಗ್ ಬಾಸ್ನಿಂದ ಹೊರಬಂದು ಜನಮೆಚ್ಚುವ ಕೆಲಸಗಳನ್ನು ಮಾಡುತ್ತಿದ್ದಾರೆ. ಶುಭಾ ಪೂಂಜಾ ಮಾತ್ರವಲ್ಲದೇ ಸ್ಯಾಂಡಲ್ವುಡ್ನ ಅನೇಕರು ಈ ಸಂದರ್ಭದಲ್ಲಿ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ.
5 ಸರ್ಕಾರಿ ಆಸ್ಪತ್ರೆಯ ವೈದ್ಯರು, ನರ್ಸ್ಗಳು ಮತ್ತು ಸಿಬ್ಬಂದಿಗೆ ನಟ ಶ್ರೀಮುರಳಿ ಊಟದ ವ್ಯವಸ್ಥೆ ಮಾಡಿಸಿದ್ದಾರೆ. ಉಪೇಂದ್ರ ಕೂಡ ಸಾವಿರಾರು ಕುಟುಂಬದವರಿಗೆ ಅಗತ್ಯ ದಿನಸಿ ಸಾಮಗ್ರಿಗಳನ್ನು ನೀಡುತ್ತಿದ್ದಾರೆ. ಅವರ ಕಾರ್ಯಕ್ಕೆ ಕೈ ಜೋಡಿಸಿರುವ ಅನೇಕರು ದೇಣಿಗೆ ನೀಡುತ್ತಿದ್ದಾರೆ. ನಟಿ ಹರ್ಷಿಕಾ ಪೂಣಚ್ಚ ಮತ್ತು ನಟ ಭುವನ್ ಪೊನ್ನಣ್ಣ ತಮ್ಮದೇ ಹೆಲ್ಪ್ಲೈನ್ ಆರಂಭಿಸಿ, ಆ ಮೂಲಕ ಸಾವಿರಾರು ಜನರಿಗೆ ನೆರವು ನೀಡಿದ್ದಾರೆ. ನಟ ಅರ್ಜುನ್ ಗೌಡ ಅವರು ಆ್ಯಂಬುಲೆನ್ಸ್ ಚಾಲಕನಾಗಿ ಕೆಲಸ ಮಾಡುತ್ತಿದ್ದಾರೆ. ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿ ಕೂಡ ಬಡವರಿಗೆ ನೆರವಾಗುತ್ತಿದ್ದಾರೆ.
ಇದನ್ನೂ ಓದಿ:
Published On - 8:47 am, Sat, 15 May 21